ಕೊಪ್ಪಳ ಜಿಲ್ಲೆಯಂತಹ ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣದ ಕ್ಷೇತ್ರಕ್ಕೆ ಕೊಪ್ಪಳ ಗವಿಮಠದ ಕೊಡುಗೆ ಅನನ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಬಣ್ಣಿಸಿದರು.
ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಮಠ ಮಾನ್ಯಗಳು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನಾರ್ಜನೆ ಮಾಡುತ್ತಿವೆ. ಅದರಲ್ಲೂ ಕೊಪ್ಪಳದ ಗವಿಮಠದ ವತಿಯಿಂದ ಪ್ರಾಥಮಿಕ ಹಂತದಿಂದ ಮೊದಲುಗೊಂಡು, ಉನ್ನತ ಶಿಕ್ಷಣದವರೆಗೂ ಸಂಸ್ಥೆಗಳನ್ನು ಸ್ಥಾಪಿಸಿವೆ. ಅಲ್ಲದೆ ಅತ್ಯುತ್ತಮ ಸೌಲಭ್ಯ ಹೊಂದಿರುವ ವಸತಿ ಸಹಿತ ಶಿಕ್ಷಣವನ್ನೂ ಸಹ ನೀಡುತ್ತಿದ್ದು, ಅನ್ನದಾಸೋಹ, ಜ್ಞಾನದಾಸೋಹ ಹಾಗೂ ಶಿಕ್ಷಣದಾಸೋಹ ನೀಡುವಂತಹ ಮಹತ್ವದ ಕಾರ್ಯವನ್ನು ಕೊಪ್ಪಳದ ಗವಿಮಠ ನಡೆಸಿಕೊಂಡು ಬರುತ್ತಿರುವುದು, ಈ ಭಾಗದ ಜನರ ಸುದೈವವಾಗಿದೆ. ಶಿವಶಾಂತವೀರ ಪಬ್ಲಿಕ್ ಶಾಲೆ ಉತ್ತಮ ಬೋಧಕ ಸಿಬ್ಬಂದಿಯ ಜೊತೆಗೆ, ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಶಿಕ್ಷಣ ಸಂಸ್ಥೆಯಿಂದ ಇನ್ನಷ್ಟು ಉತ್ತಮ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಗವಿಮಠ ಮಹತ್ವದ ಕೊಡುಗೆಯನ್ನು ನೀಡಲಿ ಎಂದು ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು ಮನವಿ ಮಾಡಿಕೊಂಡರು.
ಶಿವಶಾಂತವೀರ ಪಬ್ಲಿಕ್ ಶಾಲೆ ಮಂಡಳಿಯ ಅಧ್ಯಕ್ಷ ನವಲಿ ಹಿರೇಮಠ ಅವರು ಮಾತನಾಡಿ, ಶಾಲೆಯಲ್ಲಿ ಈಗಾಗಲೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಅಲ್ಲದೆ ಶಾಲೆಯಲ್ಲಿ ಸಾಮಾಜಿಕ ನ್ಯಾಯವನ್ನು ಸಹ ಒದಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಿ.ವಿ. ಜಡಿಯವರ್ ಅವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಸಂಸ್ಕಾರವನ್ನು ಸಹ ಶಿಕ್ಷಕರು ಕಲಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಮಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ಶಾಲಾ ಮುಖ್ಯೋಪಾಧ್ಯಾರಾದ ರೋಜ್ ಮೇರಿ, ಶಾಲಾ ಆಡಳಿತಾಧಿಕಾರಿ ವಿಜಯಾ ಹಿರೇಮಠ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ, ನಾಟಕ ಮುಂತಾದ ಕಾರ್ಯಕ್ರಮಗಳು ಪ್ರದರ್ಶನಗೊಂಡು, ಸಾರ್ವಜನಿಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
0 comments:
Post a Comment