ಹೊಸದಿಲ್ಲಿ, ಮಾ. 5: 2014ರ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು, ಎಪ್ರಿಲ್ 7ರಿಂದ ಮೇ 12ರವರೆಗೆ 9 ಹಂತಗಳಲ್ಲಿ ನಡೆಯಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಬುಧವಾರ ಹೇಳಿದ್ದಾರೆ.
ಇಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 16ನೆ ಲೋಕಸಭಾ ಚುನಾವಣೆಯು ಎಪ್ರಿಲ್ 7ರಿಂದ ಆರಂಭವಾಗಿ 9 ಹಂತಗಳಲ್ಲಿ ನಡೆಯಲಿದ್ದು, ಮೇ 12ಕ್ಕೆ ಮುಗಿಯಲಿದೆ. ಫಲಿತಾಂಶವು ಮೇ 16ರಂದು ಪ್ರಕಟವಾಗಲಿದೆ. ಇದರೊಂದಿಗೆ ಈ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಚುನಾವಣೆಗಳು ಮುಗಿಯುವವರೆಗೂ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ಕರ್ನಾಟಕದಲ್ಲಿ ಎಪ್ರಿಲ್ 17ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಂದು 28 ಕ್ಷೇತ್ರಗಳಿಗೂ ಒಟ್ಟಿಗೆ ಚುನಾವಣೆ ನಡೆಯಲಿದೆ ಎಂದರು.
16ನೆ ಲೋಕಸಭಾ ಚುನಾವಣೆ ವೇಳಾಪಟ್ಟಿ:
ಎಪ್ರಿಲ್ 7ರಿಂದ ಮೊದಲ ಹಂತದ ಚುನಾವಣೆ ನಡೆಯಲಿದೆ. ಎಪ್ರಿಲ್ 9ರಂದು 2ನೆ ಹಂತದ ಚುನಾವಣೆ, 10 ರಂದು 3ನೆ ಹಂತದ ಚುನಾವಣೆ, ಎಪ್ರಿಲ್ 12 ರಂದು 4ನೆ ಹಂತದ ಚುನಾವಣೆ, 17ರಂದು 5ನೆ ಹಂತದ ಚುನಾವಣೆ, ಎಪ್ರಿಲ್ 24 ರಂದು 6ನೆ ಹಂತದ ಚುನಾವಣೆ, ಎಪ್ರಿಲ್ 30ರಂದು 7ಹಂತದ ಚುನಾವಣೆ, ಮೇ 7 ರಂದು 8ನೆ ಹಂತದ ಚುನಾವಣೆ, ಮೇ 12ರಂದು 9ನೆ ಹಂತದ ಚುನಾವಣೆ ನಡೆಯಲಿದೆ. ಮೇ 16ರಂದು ಶುಕ್ರವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಗಮನಾರ್ಹವೆಂದರೆ ಏಕೀಕೃತ ಆಂಧ್ರ ಪ್ರದೇಶ ಸೇರಿದಂತೆ ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಜೊತೆ ಜೊತೆಗೆ ಆಯಾ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.
ಕರ್ನಾಟಕದಲ್ಲಿ ಎ.17ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಅಲ್ಲದೆ, ಒಟ್ಟು 28 ಕ್ಷೇತ್ರಗಳಿಗೂ ಒಟ್ಟಿಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 16ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ವಿವರ
ಮಾರ್ಚ್ 19: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ
ಮಾರ್ಚ್ 26: ನಾಮಪತ್ರ ಪರಿಶೀಲನೆ
ಮಾರ್ಚ್ 29: ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ
ಎಪ್ರಿಲ್ 17: ಎಲ್ಲಾ 28 ಕ್ಷೇತ್ರಗಳಿಗೂ ಮತದಾನ
ಮೇ 16: ಮತ ಎಣಿಕೆ
0 comments:
Post a Comment