ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಗಣ್ಯರು ಫೆ. ೨೮ ರಂದು ಜಿಲ್ಲೆಗೆ ಆಗಮಿಸಲಿದ್ದು, ಅವರ ಸ್ವಾಗತಕ್ಕೆ ಕೊಪ್ಪಳ ನಗರ ಮತ್ತು ಯಲಬುರ್ಗಾ ಪಟ್ಟಣ ನವ ವಧುವಿನಂತೆ ಸಿಂಗಾರಗೊಂಡಿವೆ.
ಗದಗ-ವಾಡಿ ನೂತನ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. ೨೮ ರಂದು ಆಗಮಿಸಲಿದ್ದು. ಅವರ ಸ್ವಾಗತಕ್ಕೆ ಕೊಪ್ಪಳ ಮತ್ತು ಯಲಬುರ್ಗಾ ಸಜ್ಜುಗೊಂಡಿವೆ. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೇಂದ್ರ ಸಚಿವರುಗಳಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ, ರಾಜ್ಯದ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಲಿದ್ದು, ಯಲಬುರ್ಗಾದಲ್ಲಿ ನೂತನ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಅದೇ ರೀತಿ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನ (ಸಾರ್ವಜನಿಕ ಮೈದಾನ) ದಲ್ಲಿಯೂ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಕೊಪ್ಪಳ ಮತ್ತು ಯಲಬುರ್ಗಾದ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಮುಖಂಡರ ಸ್ವಾಗತ ಬ್ಯಾನರ್ ಮತ್ತು ಕಟೌಟ್‌ಗಳನ್ನು ಹಾಕಲಾಗಿದೆ. ಮುಖ್ಯಮಂತ್ರಿ ಮತ್ತು ರೈಲ್ವೆ ಸಚಿವರ ಪ್ರತ್ಯೇಕ ಹೆಲಿಕಾಪ್ಟರ್ ಮೂಲಕ ಯಲಬುರ್ಗಾಕ್ಕೆ ಆಗಮಿಸುವುದರಿಂದ, ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಪ್ರತ್ಯೇಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಫೆ. ೨೮ ರಂದು ಮಧ್ಯಾಹ್ನ ೨ ಗಂಟೆಗೆ ಯಲಬುರ್ಗಾದಲ್ಲಿ ಸಮಾರಂಭ ಪ್ರಾರಂಭವಾಗಲಿದ್ದು, ಯಲಬುರ್ಗಾದಲ್ಲಿ ತಾಲೂಕು ತಹಸಿಲ್ದಾರ್ ಕಚೇರಿ ಸಭಾಂಗಣ, ಕ್ಯಾಂಟೀನ್ ಹಾಗೂ ಹೆಚ್ಚುವರಿ ಕೊಠಡಿಗಳಿಗೆ ಅಡಿಗಲ್ಲು, ಕೃಷ್ಣಾ ಭಾಗ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಉದ್ಘಾಟನೆ, ೯ ಕೋಟಿ ವೆಚ್ಚದಲ್ಲಿ ಮ್ಯಾದನೇರಿ-ಬೇವೂರು-ಯಲಬುರ್ಗಾ ರಾಜ್ಯ ಹೆದ್ದಾರಿಗೆ ಅಡಿಗಲ್ಲು, ೧೦ ಕೋಟಿ ರೂ. ವೆಚ್ಚದಲ್ಲಿ ಕೇಂದ್ರೀಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ೫ ಕೋಟಿ ರೂ. ವೆಚ್ಚದಲ್ಲಿ ಹಿರೇಹಳ್ಳಿ ನೀರಾವರಿ ಯೋಜನೆಯ ವೀರಾಪುರ ಗ್ರಾಮದ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಶಿಲಾನ್ಯಾಸ, ಹಿರೇಹಳ್ಳ ಯೋಜನೆಯಿಂದ ನಿರಾಶ್ರಿತರಾದ ಶಿರೂರ, ಮುತ್ತಾಳ ಮತ್ತು ಅರಕೇರಿ ಗ್ರಾಮಗಳ ನಿರಾಶ್ರಿತರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇದೇ ಸಂದರ್ಭದಲ್ಲಿ ಗಣ್ಯರು ಚಾಲನೆ ನೀಡಲಿದ್ದಾರೆ. ಸಂಜೆ ೪-೩೦ ಗಂಟೆಗೆ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಜರುಗುವ ಸಮಾರಂಭದಲ್ಲಿ ಕೊಪ್ಪಳದಲ್ಲಿ ೧೨೦ ಕೋಟಿ ರೂ. ವೆಚ್ಚದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ, ೧. ೫೦ ಕೋಟಿ ರೂ. ವೆಚ್ಚದ ಹಿಟ್ನಾಳ್ ಪದವಿ ಕಾಲೇಜು ಕಟ್ಟಡದ ಉದ್ಘಾಟನೆ, ಮುನಿರಾಬಾದ್‌ನಲ್ಲಿನ ತೋಟಗಾರಿಕೆ ಕಾಲೇಜು ನೂತನ ಕಟ್ಟಡ ಉದ್ಘಾಟನೆ, ೧೯ ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಅಂಬೇಡ್ಕರ್ ಭವನ, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಎಸ್‌ಟಿಪಿ, ಟಿ.ಎಸ್.ಪಿ. ಯೋಜನೆಯಡಿ ೧೦ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ, ಕೊಪ್ಪಳ ನಗರಸಭೆಯ ವತಿಯಿಂದ ಎಸ್‌ಎಫ್‌ಸಿ ಮತ್ತು ೧೩ನೇ ಹಣಕಾಸು ಆಯೋಗದಡಿ ೩ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ, ಹಲಗೇರಿ-ಕೇಸಲಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ, ೧೭. ೩೮ ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳದಲ್ಲಿನ ಎನ್.ಹೆಚ್. ೬೩ ರಲ್ಲಿ ರಸ್ತೆ ಸುಧಾರಣೆ ಕಾಮಗಾರಿ, ವಿವಿಧ ಗ್ರಾಮಗಳ ಕೆರೆ ಪುನಶ್ಚೇತನ ಅಭಿವೃದ್ಧಿ ಕಾಮಗಾರಿ, ಬೆಟಗೇರಿ, ಕವಲೂರು ಗ್ರಾಮಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡಗಳ ಉದ್ಘಾಟನೆ ಹೀಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಎಲ್ಲ ಸಿದ್ಧತೆಗಳ ಬಗ್ಗೆ ಕಾಳಜಿ ವಹಿಸಿದ್ದು, ಜಿಲ್ಲಾಡಳಿತ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ನಿರತರಾಗಿವೆ. ಒಟ್ಟಾರೆ ಫೆ. ೨೮ ರಂದು ಯಲಬುರ್ಗಾ ಮತ್ತು ಕೊಪ್ಪಳದಲ್ಲಿ ಜರುಗುವ ಸಮಾರಂಭಗಳತ್ತ ಸಾರ್ವಜನಿಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
0 comments:
Post a Comment