PLEASE LOGIN TO KANNADANET.COM FOR REGULAR NEWS-UPDATES














  ಈ ನಾಡಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಣಬಹುದು ಎಂಬುದನ್ನು ಕಿವಿಯಾರೆ ಕೇಳಿದ್ದ ಕೊಪ್ಪಳದ ಜನತೆಗೆ, ಅದನ್ನು ಕಣ್ಣಾರೆ ಕಂಡು ಸವಿಯುವ ಸದಾವಕಾಶ ಒದಗಿಬಂದದ್ದು, ವಾರ್ತಾ ಇಲಾಖೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ’ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ.
  ನಾಡಿನ ಸಾಂಸ್ಕೃತಿಕ ಹಿರಿಮೆಯಲ್ಲಿ ವಿಶಿಷ್ಟ ಪಾತ್ರ ಹೊಂದಿರುವ ಬುಡಕಟ್ಟು ಕಲಾ ಸಂಸ್ಕೃತಿಯ ಜಾನಪದ ಸಂಭ್ರಮವು ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬುಡಕಟ್ಟು ಜನಾಂಗದ ಕಲಾವಿದರು ಅಪ್ಪಟ ಗ್ರಾಮೀಣ ಸೊಗಡಿನ ಅಪರೂಪದ ಕಲಾಪ್ರಕಾರಗಳನ್ನು ಅನಾವರಣಗೊಳಿಸಿದರು.
  ಬೆಂಗಳೂರಿನ ರಂಗನಿರ್ದೇಶಕ ಅಮರದೇವ ಅವರ ನಿರ್ದೇಶನದಲ್ಲಿ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಐದು ದಿನಗಳ ತರಬೇತಿಯಲ್ಲಿ ಮೂಡಿ ಬಂದ ಜಾನಪದ ಹಬ್ಬದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ವಿ. ರಾಮಾಂಜನೇಯ ನೇತೃತ್ವದ ತಂಡದವರಿಂದ ಹಗಲುವೇಷ, ಮೋಹನ್ ಮುಂದಾಳತ್ವದ ಬಳ್ಳಾರಿಯ ದುರ್ಗಾದೇವಿ ಜನಪದ ಕಲಾ ತಂಡದವರಿಂದ ತಾಷಾರಾಂಡೋಲ ನೃತ್ಯ, ಬಳ್ಳಾರಿ ಜಿಲ್ಲೆ ಶೃತಿಲಯ ಕಲಾ ಸಂಘದವರಿಂದ ಮಹಿಳಾ ಡೊಳ್ಳು ಕುಣಿತ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸೊನಾರಜೆಡ್ಡಿ ಗ್ರಾಮದ ಸಇದ್ದು ಸಮುದಾಯದ ಲಿಲ್ಲಿ ಜಾಕಿ ನೇತೃತ್ವದ ಆಮ್ಚೆ ಮದ್ಲೆ ಕಲಾ ತಂಡದಿಂದ ಡಮಾಮಿ ನೃತ್ಯ ಮತ್ತು ಪುಗಡಿ ನೃತ್ಯ.  ಬಳ್ಳಾರಿ ಜಿಲ್ಲೆ ಕಂಪ್ಲಿಯ ಜಾನಕಿ ನೇತೃತ್ವದ ಆದಿವಾಸಿ ಬುಡಕಟ್ಟು ಜನಪದ ನೃತ್ಯ ತಂಡದವರಿಂದ ಹಕ್ಕಿ-ಪಿಕ್ಕಿ ಜಾನಪದ ನೃತ್ಯ.  ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಗುಳ್ಳಾಪುರ ಗ್ರಾಮದ ಶೇಖರ ಲಕ್ಷ್ಮಣ ಸಿದ್ದಿ ನೇತೃತ್ವದ ತಂಡದಿಂದ ಡಮಾಮಿ ನೃತ್ಯಗಳು ಪ್ರದರ್ಶಿತಗೊಂಡವು.  ಬುಡಕಟ್ಟು ಕಲಾವಿದರ ಕಲಾ ಪ್ರದರ್ಶನ ನೋಡುಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
  ವಾರ್ತಾ ಇಲಾಖೆಯು ಹಮ್ಮಿಕೊಂಡ ಈ ಜಾನಪದ ಸಂಭ್ರಮವನ್ನು ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರ ಅವರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಮೂಲ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದ್ದು, ಗ್ರಾಮೀಣ ಸೊಗಡಿನ ಜಾನಪದ ಕಲೆಗಳು ಮಾಯವಾಗುತ್ತಿವೆ.  ಬುಡಕಟ್ಟು ಕಲೆಗಳನ್ನು ಗುರುತಿಸಿ, ಅವುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡ ಬುಡಕಟ್ಟು ಕಲೆಗಳ ಜಾನಪದ ಸಂಭ್ರಮ ಕಾರ್ಯಕ್ರಮ ಶ್ಲಾಘನೀಯವಾಗಿದೆ.  ಇಂತಹ ಪ್ರಯತ್ನಗಳು ನಿರಂತರವಾಗಿರಬೇಕಾಗಿದೆ ಎಂದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ವಾರ್ತಾ ಇಲಾಖೆಯ ಗುಲಬರ್ಗಾ ವಿಭಾಗದ ಉಪನಿರ್ದೇಶಕ ಬಸವರಾಜ ಎಂ. ಕಂಬಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ವಂದನಾರ್ಪಣೆಗೈದರು.  ಸಂಪನ್ಮೂಲ ಅಧಿಕಾರಿ ಪಿ.ಎಸ್. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top