ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆ ಶೈಲಿ ಇಡೀ ಜಗತ್ತಿಗೆ ಮಾದರಿಯಾಗಿದ್ದು, ಅನೇಕ ದೇಶಗಳು ಇಲ್ಲಿನ ಚುನಾವಣೆ ವ್ಯವಸ್ಥೆಯ ಮಾದರಿಯನ್ನು ಅನುಸರಿಸಲು ಭಾರತಕ್ಕೆ ಬಂದು ತರಬೇತಿ ಪಡೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಹೇಳಿದರು.
ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಸಮಾಜ ವ್ಯವಸ್ಥೆ, ಸಂಸ್ಕೃತಿ, ಪ್ರಜಾಪ್ರಭುತ್ವ ಹಾಗೂ ಚು
ನಾವಣೆ ಶೈಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಅಧಿಕಾರ ಜನಸಾಮಾನ್ಯನಿಗೆ ನೀಡಿದೆ ನಮ್ಮ ಸಂವಿಧಾನ. ಎಲ್ಲ ಮತದಾರರೂ ತಪ್ಪದೆ ಮತ ಚಲಾಯಿಸಿ ತಮ್ಮ ಕರ್ತವ್ಯವನ್ನು ಪಾಲಿಸಿದಲ್ಲಿ ಮಾತ್ರ ಇಂತಹ ಅಧಿಕಾರಕ್ಕೆ ಬೆಲೆ ಸಿಕ್ಕಂತೆ ಆಗುತ್ತದೆ. ಸದ್ಯದಲ್ಲೇ ಲೋಕಸಭಾ ಚುನಾವಣೆ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಿ, ತಮ್ಮ ಕರ್ತವ್ಯ ಪಾಲಿಸಬೇಕು. ದೇಶದಲ್ಲಿ ಇದುವರೆಗೂ ಅನೇಕ ಚುನಾವಣೆಗಳನ್ನು ಅಚ್ಚುಕಟ್ಟಾಗಿ, ನ್ಯಾಯಸಮ್ಮತವಾಗಿ, ಮುಕ್ತವಾಗಿ ನಡೆಸುತ್ತಾ ಬಂದಿರುವುದು ನಮ್ಮ ದೇಶದ ಚುನಾವಣೆಯ ಯಶಸ್ವಿಗೆ ನಿದರ್ಶನವಾಗಿದೆ. ಅರ್ಹ ವಯಸ್ಸಿನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗುತ್ತಿದೆ ಅಲ್ಲದೆ ಕಟ್ಟ ಕಡೆಯ ಮತದಾರನಿಗೂ ತನ್ನ ಮತ ಚಲಾವಣೆಗೆ ಅಗತ್ಯ ಸೌಲಭ್ಯ ಒದಗಿಸಲು ನಮ್ಮ ವ್ಯವಸ್ಥೆ ಕಟಿಬದ್ಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಇಲ್ಲಿ ಬಡವ, ಶ್ರೀಮಂತ, ಅಥವಾ ಅಧಿಕಾರ ಹೊಂದಿರುವ ವ್ಯಕ್ತಿಗಳ ನಡುವೆ ಯಾವುದೇ ತಾರತಮ್ಯ ಇಲ್ಲ. ಇಂತಹ ಚುನಾವಣಾ ವ್ಯವಸ್ಥೆ ನಮ್ಮ ದೇಶದ ಹೆಗ್ಗಳಿಕೆಯಾಗಿದೆ. ೧೮ ವರ್ಷ ತುಂಬಿದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು, ನಂತರ ಗುರುತಿನ ಚೀಟಿಯನ್ನು ಪಡೆಯುವುದು ಹಾಗೂ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಮತದಾರರು ತಮ್ಮ ಕರ್ತವ್ಯ ಪಾಲನೆ ಮಾಡದೇ ಆಡಳಿತ ಯಂತ್ರವನ್ನು ದೂಷಿಸುವುದು ಸರಿಯಲ್ಲ. ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಆದಂತೆಲ್ಲಾ, ಚುನಾವಣಾ ವ್ಯವಸ್ಥೆ ಇನ್ನಷ್ಟು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಉತ್ತಮವಾಗಿದ್ದು, ಸುಶಿಕ್ಷಿತರೇ ಮತದಾನದ ಕರ್ತವ್ಯದಿಂದ ವಿಮುಖರಾಗುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ತಪ್ಪದೆ ಮತ ಚಲಾಯಿಸಿ ಮತದಾನ ಪ್ರಮಾಣವನ್ನು ಅತಿ ಗರಿಷ್ಠ ಮಟ್ಟಕ್ಕೆ ತಲುಪಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ’ ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭೀತರಾಗಿ, ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ’ ಎಂಬುದಾಗಿ ಇದೇ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಭುರಾಜ ಕೆ. ನಾಯಕ್ ಅವರು ಮತದಾರರ ಕರ್ತವ್ಯ ಹಾಗೂ ಮತದಾನದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಕೊಪ್ಪಳ ತಹಸಿಲ್ದಾರ್ ಚಂದ್ರಕಾಂತ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಅವರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
0 comments:
Post a Comment