PLEASE LOGIN TO KANNADANET.COM FOR REGULAR NEWS-UPDATES

ದಿ.೧೮ ರಂದು ಜರುಗುವ ಕೊಪ್ಪಳ ಗವಿಸಿದ್ದೇಶ್ವರ ಮಠದ ಜಾತ್ರೋತ್ಸವ ನಿಮಿತ್ತ ಲೇಖನ

ಕೊಪ್ಪಳ ನಗರದ ಪವಿತ್ರ ಕ್ಷೇತ್ರ ಗವಿಸಿದ್ದೇಶ್ವರ ಮಠದ ಲಿಂಗೈಕ್ಯ ಜಗದ್ಗುರುಗಳು ತೋರಿದ ಪವಾಡಗಳಿಂದ ಪ್ರಭಾವಿತನಾದ ಹೈದ್ರಬಾದ ಸಂಸ್ಥಾನದ ಅರಸು ನಿಜಾಮ ಸಹ ಕೊಪ್ಪಳ ಗವಿಮಠಕ್ಕೆ ಉಂಬಳಿಕೊಟ್ಟು ಕೃತಾರ್ಥನಾದದ್ದು ಎಲ್ಲಿರಗೂ ತಿಳಿದ ವಿಷಯವಾಗಿದೆ. ಗವಿಮಠದ ಈವರೆಗಿನ ಎಲ್ಲ ಜಗದ್ಗುರುಗಳು ಭಕ್ತರ ಕಲ್ಯಾಣಕ್ಕೆ ಕೊಡುಗೆ ನೀಡುತ್ತಲೇ ಬಂದಿರುವುದರಿಂದ ಇಂದು ಶ್ರೀಮಠದಿಂದ ನಡೆಯುತ್ತಿರುವ ಅನೇಕ ಶಿಕ್ಷಣ ಸಂಸ್ಥೆಗಳು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾದಾನ, ಅನ್ನದಾನ ನೀಡುತ್ತಿವೆ. ಶ್ರೀಮಠದಿಂದ ನಡೆಯುತ್ತಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಅನೇಕ ರೋಗಿಗಳು ಗುಣಮುಖರಾಗುತ್ತಿದ್ದಾರೆ. ವಿಧೇಯ ಭಕ್ತರ ಹೃದಯ ಸಿಂಹಾಸನದಲ್ಲಿ ಗವಿಸಿದ್ದೇಶ್ವರ ಸದಾ ವಿರಾಜಮಾನರಾಗಿ ಅವರ ಇಚ್ಛೆಗಳನ್ನು ಈಡೇರಿಸುತ್ತಾನೆಂಬುದಕ್ಕೆ ಒಂದು ಚಿಕ್ಕ ದೃಷ್ಟಾಂತ ಇಲ್ಲಿದೆ.
                         ಶ್ರೀಮಠದ ಸೇವಕ ಹಾಗೂ ಖ್ಯಾತ ಜ್ಯೋತಿಷಿಯಾಗಿದ್ದ ಕೊಪ್ಪಳದ ನಿವಾಸಿ ಕರಬಸಯ್ಯ ಪ್ಯಾಟಿಮಠ ಹಾಗೂ ನೀಲಮ್ಮ ದಂಪತಿಗಳಿಗೆ ಜನಿಸಿದ ಹದಿಮೂರು ಮಕ್ಕಳಲ್ಲಿ ಜೀವಂತವಾಗಿ ಉಳಿದ ಏಕಮಾತ್ರ ಪುತ್ರಿ ಶಿವಪೂಜಮ್ಮಳನ್ನು ಹಾಳಕೇರಿಯ ಸಂಯ್ಯ ಸೊಪ್ಪಿಮಠ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಶಿವಪೂಜಮ್ಮ ತಮ್ಮ ಮೊದಲ ಹೆರಿಗೆಗೆ ತವರಿಗೆ ಬಂದಾಗ ಹೆಣ್ಣು ಕೂಸಿಗೆ ಜನ್ಮ ನೀಡಿ ಶೀವಾಧೀನರಾದರು. ಆ ಹೆಣ್ಣು ಶಿಶು ಐದು ದಿನಗಳವರೆಗೆ ಕಣ್ಣು ತೆರೆಯದೇ ಹಾಲು ಕುಡಿಯದೇ ಬಳಲುತ್ತಿದ್ದಾಗ ಲಿಂ. ಜಗದ್ಗುರು ಮರಿಶಾಂತವೀರ ಸ್ವಾಮಿಗಳು ಅವರ ಮನೆಗೆ ಪಾದವಿಟ್ಟಾ ಕೂಸು ಮೂರು ಬಾರಿ ಅವ್ವಾ ಎಂದು ನುಡಿದು ಕಣ್ಣು ತೆರೆಯಿತಂತೆ. ಆ ಮನೆಯವರೆಲ್ಲರಿಗೂ ನೆರೆದ ಓಣಿಯ ಜನರಿಗೆ ಅಚ್ಚರಿ ಜೊತೆಗೆ ಸಂತೋಷ ಉಕ್ಕಿ ಬಂತು. ಆ ಶ್ರೀಗಳು ಕೂಸಿಗೆ ಭವಾನಿ ಎಂದು ಕರೆದು ಇವಳನ್ನೇ ಶಿವಪೂಜಮ್ಮ ಎಂದು ತಿಳಿದುಕೋ ಎಂದು ನೀಲಮ್ಮನಿಗೆ ಸಮಾಧಾನ ಪಡಿಸಿದರು. ಕೂಸಿನ ಪಾಲನೆಗೆ ಶ್ರೀಗಳು ಶ್ರೀಮಠದಿಂದ ಒಂದು ಹಸುವನ್ನು ದಯಪಾಲಿಸಿ ಆಶೀರ್ವದಿಸಿದರಂತೆ. ಮುಂದೆ ಓಣಿಯ ನಿವಾಸಿಗಳು ಆ ಹಸುವಿನ ಹಾಲನ್ನು ಅರಳೆಯಿಂದ ಎದ್ದಿ ಕೂಸಿಗೆ ಕುಡಿಸುತ್ತಾ ಜೋಪಾನ ಮಾಡಿದರಂತೆ. ಮನೆಯ ಜನ ಮುಂದೆ ಆ ಕೂಸಿಗೆ ತೊಟ್ಟಿಲು ಕಟ್ಟಿ ನಾಮಕರಣ ಮಾಡದೇ ಅಂದು ಶ್ರೀಗಳು ಕೂಗಿ ಕರೆದ ಪ್ರಕಾರ ಭವನೆವ್ವ ಎಂಬ ಹೆಸರನ್ನು ಶಾಶ್ವತಗೊಳಿಸಿದರು. ನಂತರ ಶ್ರೀಗಳ ಸಲಹೆಯಂತೆ ಕರಬಸಯ್ಯನವರು ತಮ್ಮ ವೃದ್ಧಾಪ್ಯದಲ್ಲೂ ಶಿವಗಂಗಮ್ಮ ಎಂಬುವರೊಂದಿಗೆ ಎರಡನೇ ಮದುವೆಯಾಗಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಹೆತ್ತರು.
ದೊಡ್ಡವಳಾದ ನಂತರ ಕೊಪ್ಪಳದ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಹಿಂದಿನ ಜಗದ್ಗುರುಗಳಾದ ಶ್ರೀ ಶಿವಶಾಂತವೀರ ಸ್ವಾಮಿಗಳ ಜತೆಎ ಭವನ್ನೆವ್ವ ವಿದ್ಯಾಭ್ಯಾಸ ಮಾಡಿದಳು. ನಂತರ ಭವನ್ನೆವ್ವ ಜಂತಲಿಯ ವೀರಭದ್ರಯ್ಯ ಹಳ್ಳಿಕೇರಿಮಠ ಅವರನ್ನು ಮದುವೆಯಾಗುವ ಸಂದರ್ಭದಲ್ಲಿ ಮದುವೆ ನಿಶ್ಚಯಿಸಲು ಬಂದ ಜಂತಲಿಯ ಗುರು-ಹಿರಿಯರು ಅರ್ಧ ತೊಲಿ ಬಂಗಾರದ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬಂದು ಕುಳಿತಾಗ ಲಿಂ. ಮರಿಶಾಂತವೀರ ಸ್ವಾಮಿಗಳು ಅವರನ್ನು ಮಠಕ್ಕೆ ಕರೆಯಿಸಿ ಮಾಜಿ ಸಂಸದ ದಿ.ಅಗಡಿ ಸಂಗಣ್ಣ, ಉದ್ಯಮಿ ವೀರಭದ್ರಪ್ಪ ಬೊಳ್ಳೊಳ್ಳಿ, ಲಿಂ. ಲಿಂಗಯ್ಯ ಜುಕ್ತಿಮಠ, ಪಟದಯ್ಯ ಕೊಂಡದಕಟ್ಟಿಮಠ ಅವರ ಮಧ್ಯಸ್ಥಿಕೆಯಲ್ಲಿ ಸಂಬಂಧ ಕುದುರುವಂತೆ ಮಾಡಿದರು. ಶ್ರೀಗಳ ಆಶೀರ್ವಾದದಂತೆ ಭವನ್ನೆವ್ವ ಅವರು ಜಂತಲಿಯ ವೀರಭದ್ರಯ್ಯ ಹಳ್ಳಿಕೇರಿಮಠ ಅವರೊಂದಿಗೆ ತುಂಬು ದಾಂಪತ್ಯ ಜೀವನ ನಡೆಸಿ ದಿ.೮-೦೧-೨೦೧೪ ರಂದು ೭೨ ನೇ ಇಳಿವಯಸ್ಸಿನಲ್ಲಿ ಕೊನೆಯುಸಿರೆಳೆದಾಗ ಎಂಟು ಜನ ಪುತ್ರರು, ಮೂವರು ಪುತ್ರಿಯರು ಇಪ್ಪತ್ತಾರು ಜನ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಭವನ್ನೆವ್ವ ಅವರಿಗೆ ಕೊಪ್ಪಳ ಗವಿಮಠದ ಬಗೆಗೆ ಅದೆಷ್ಟು ಶ್ರದ್ಧಾ ಭಕ್ತಿ ಇತ್ತೆಂದರೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದಾಗ ವೈದ್ಯರು ನಿಮ್ಮ ಊರು ಯಾವುದೆಂದು ಕೇಳಿದರೆ ಕೊಪ್ಪಳ ಗವಿಮಠ ಎಂದು ಕನವರಿಸುತ್ತಿದ್ದಳಂತೆ. ಅಂತ್ಯ ಕಾಲದಲ್ಲೂ ಅವರು ಗವಿಮಠದ ಶ್ರೀಗಳ ಆಶೀರ್ವಾದ ಪಡೆಯಲು ಹಾತೊರೆಯುತ್ತಿದ್ದುದು ಕಂಡು ಬಂತು. ಅವರ ಅಭಿಲಾಷೆಯಂತೆ ಅವರ ಕಿರಿಯ ಪುತ್ರಿ ಶ್ರೀಮತಿ ಪ್ರೇಮಕ್ಕ ಹಿರೇಮಠ ಕೊಪ್ಪಳದಲ್ಲಿ ಈಗಿನ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳನ್ನು ಕಂಡು ಅವರಿಂದ ಪ್ರಸಾದ ಪಡೆದು ಬೆಳಗಾವಿಗೆ ತೇರಳಿ  ತಮ್ಮ ತಾಯಿಗೆ ನೀಡಿದಾಗ ಅವರು ಕೋಮಾ ಸ್ಥಿತಿಯಿಂದ ಎಚ್ಚೆತ್ತು ಮತ್ತೆ ಮೂರು ದಿನಗಳವರೆಗೆ ಮಾತನಾಡುತ್ತಲೇ ಕೊನೆಯುಸಿರೆಳೆದದ್ದನ್ನು ಅವರ ಮನೆಯವರು ಒಂದು ಪವಾಡವೆಂತಲೇ ಭಾವಿಸಿದ್ದಾರೆ. ಪುತ್ರ ಕುಮಾರಸ್ವಾಮಿ ಹಾಗೂ ಅಳಿಯ ಮುತ್ತಣ್ಣ ಅವರಿಂದ ಭವನ್ನೆವ್ವ ಮೃತರಾದ ಸುದ್ದಿ ತಿಳಿದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಬಿಡುವಿಲ್ಲದ ಜಾತ್ರೆಯ ಸಿದ್ಧತೆಗಳ ಮಧ್ಯೆಯೂ ಜಂತಲಿಯಲ್ಲಿನ ಮೃತರ ನಿವಾಸಕ್ಕೆ ದಯಮಾಡಿಸಿ ಆಶೀರ್ವದಿಸಿದ್ದನ್ನು ನೋಡಿದಾಗ ದೇಹಾಂತ್ಯ ಕಾಲದಲ್ಲೂ ಶ್ರೀಗಳ ಆಶೀರ್ವಾದ ಬೇಕೆಂಬ ಮೃತರ ಇಚ್ಛೆ ಈಡೇರಿದಂತಾಗಿದೆ. 
ಹೀಗೆ ಅಸಂಖ್ಯಾತ ಭಕ್ತರು ಇಂದಿಗೂ ಕೊಪ್ಪಳದ ಗವಿಸಿದ್ದೇಶ್ವರನನ್ನು ಹೃದಯಾಂತರಾಳದಲ್ಲಿ ಸ್ಮರಿಸುತ್ತಾ ತಮ್ಮ ಅಭೀಷ್ಟೆಗಳನ್ನು ಪೊರೈಸಿಕೊಳ್ಳುತ್ತಾ ಪುನೀತರಾಗುತ್ತಿದ್ದಾರೆ.


ಎಮ್.ಕೆ. ಹಿರೇಮಠ  
ಕಿರಣ ಪೆಂಡಾಲ್ ಡೆಕೊರೆರ್ಟ್ಸ್ 


Advertisement

0 comments:

Post a Comment

 
Top