ಮಡಿಕೇರಿ, ಜ. 7: 80ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಇಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿಲಾಯಿತು.
ರಾಷ್ಟ್ರಧ್ವಜವನ್ನು ಉಸ್ತುವರಿ ಸಚಿವ ಎಚ್.ಚಿ.ಮಹದೇವಪ್ಪ, ಪರಿಷತ್ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಹಾಗೂ ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ.ರಮೇಶ್ ನಾಡಧ್ವಜವನ್ನು ಹಾರಿಸುವ ಮೂಲಕ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ್ದಾರೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಭಾರತೀಸುತ ವೇದಿಕೆ ಹಾಗೂ ಕೊಡಗಿನ ಗೌರಮ್ಮ ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನ ವೇದಿಕೆಯಲ್ಲಿ 20 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, 80 ಸಾವಿರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಸಹಸ್ರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ವೇದಿಕೆಯತ್ತ ಆಗಮಿಸಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೇರಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಕೋ.ಚೆನ್ನಬಸಪ್ಪ ಸೇರಿದಂತೆ ಹಿರಿಯ ಸಾಹಿತಿಗಳು ಹಾಗೂ ಸಚಿವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ನಂತರ ವೇಳಾಪಟ್ಟಿಯಂತೆ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಗೋಷ್ಠಿಗಳು ನಡೆಯಲಿವೆ. ಸಂಜೆ ಕೊಡಗಿನ ಗೌರಮ್ಮ ವೇದಿಕೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.
0 comments:
Post a Comment