ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಸರ್ಕಾರಿ ವ್ಯವಸ್ಥೆಯ ಜೊತೆಗೆ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆ ಸಿಪಿಐ ವಿಜಯ ಬಿರಾದಾರ್ ಅವರು ಅಭಿಪ್ರಾಯಪಟ್ಟರು.
ರಾಜ್ಯ ಗೃಹರಕ್ಷಕದಳ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ ಸೇವಾದಳ ಭಾರತ ಸ್ಕೌಟ್ಸ್ ಗೈಡ್ಸ್ ಇವರ ಸಹಯೋಗದೊಂದಿಗೆ ಪೊಲೀಸ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಹಾನಿ ತಡೆಯಲು ಈ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಂಕಿ ಅಕಸ್ಮಿಕಗಳು ಸೇರಿದಂತೆ ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಸಮಯಪ್ರಜ್ಞೆ ಅತ್ಯಂತ ಮಹತ್ವದ್ದಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಯಾವುದೇ ಸ್ಥಳಗಳಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಕೂಡಲೇ ಅಗ್ನಿಶಾಮಕ ಇಲಾಖೆಯ ೧೦೧ ಈ ದೂರವಾಣಿಗೆ ಕರೆ ಮಾಡಿ ವಿಷಯ ತಿಳಿಸಬಹುದಾಗಿದ್ದು, ವಿದ್ಯಾರ್ಥಿಗಳು, ಜನಸಾಮಾನ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸಬಹುದಾದ ಆಕಸ್ಮಿಕ ಅಗ್ನಿಯನ್ನು ತಡೆಗಟ್ಟುವಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಸಾಮಾನ್ಯ ಜನರಿಗೆ ಅನುಕೂಲವಾಗಲು ಭವಿಷ್ಯದಲ್ಲಿ ಆಗುವ ವಿಪತ್ತುಗಳನ್ನು ತಡೆಗಟ್ಟುವ ಕೆಲಸ ವಿದ್ಯಾರ್ಥಿಗಳು ಮಾಡಿ ತಮ್ಮ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ರವೀಂದ್ರ ಶೀಗನಹಳ್ಳಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಆರ್.ವಿ.ಪತ್ತಾರ, ಸೆಕೆಂಡ್ ಇನ್ ಕಮಾಂಡ್ ಜಲಾಲಸಾಬ ಹುಡೇದ, ಹಿರಿಯ ಬೋಧಕ ರಾಮಪ್ರಸಾದ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ಕೆ.ಎಮ್., ರಾಜಶೇಖರ ಪಾಟೀಲ್, ಎಸ್.ಬಿ.ಮೇಳಿ, ಲಿಂಗಪ್ಪ.ವೈ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೀಣಾ ಹಾಗೂ ಪ್ರಿಯಾಂಕ ಸಂಗಡಿಗರಿಂದ ಪ್ರಾರ್ಥನೆ ಮಾಡಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ಕೆ.ಎಮ್. ವಂದಿಸಿದರು.
0 comments:
Post a Comment