ಎಳಸು ಹುಡುಗಿ, ಕೂಲ್ ಹುಡುಗನ ‘ಫ್ರೆಶ್ ಪ್ರೀತಿ’
ಫಸ್ಟ್ ಲವ್ ಬಗ್ಗೆ ಸಾಕಷ್ಟು ಪ್ರೇಮಿಗಳು ಭಾಷಣ ಬಿಗಿದದ್ದು ಹೊಸದಲ್ಲ, ಆದರೆ ಎರಡನೇ ಪ್ರೀತಿನೇ ಬೆಸ್ಟ್ ಎಂದು ಹೇಳಿರುವುದು ಬಹುಶಃ ಶ್ರಾವಣಿನೇ ಮೊದಲು. ಚೆಲುವಿನ ಚಿತ್ತಾರದ ಜೋಡಿಯ ಮೋಡಿ ನೋಡಲೆಂದು ಥೇಟರ್ ಒಳಗೆ ಕಾಲಿಟ್ಟರೆ ಖಂಡಿತ ಶ್ರಾವಣಿ ಸುಬ್ರಮಣ್ಯ ಮೋಸ ಮಾಡುವುದಿಲ್ಲ. ಏಕೆಂದರೆ ಅವರದು ಪರಿಶುದ್ಧ ಪ್ರೀತಿ. ಒಂದೇ ಮನೆಯಲ್ಲಿ ಆರು ತಿಂಗಳಿದ್ದರೂ ಇಬ್ಬರೂ ಕೆಟ್ಟ ದೃಷ್ಟಿಯಿಂದ ರೂಢಿಸಿಕೊಂಡರವರಲ್ಲ. ನಂಬಿಕೆನೇ ಬದುಕು ಎಂದು ಬದುಕು ಸಾಗಿಸಿ ಕೊನೆಗೆ ಹಿರಿಯರ ಒಪ್ಪಿಗೆ ಪಡೆದೇ ಮದುವೆಗೆ ಸಜ್ಜಾದವರು.
ಗಣೇಶ್‌ನಿಗೆ ಸಿಂಗರ್ ಆಗೋ ಕನಸು. ಅಮೂಲ್ಯಗೆ ಕನಸೂ ಇಲ್ಲ, ಗುರಿಯೂ ಇಲ್ಲ. ಚಿಕ್ಕಮಕ್ಕಳಂಥ ಮನಸು. ಆದರೂ ಅವಳಿಗೆ ೧೮. ಆ ವಯಸ್ಸೇ ಅಂಥದ್ದು. ಪ್ರೀತಿ ಎಂದರೆ ಏನು ಎಂಬುದನ್ನು ತಿಳಿಯುವುದಕ್ಕಾಗಿ ಪ್ರೀತಿಸುವ ವಯಸು. ಅಮೂಲ್ಯ ಕೂಡಾ ಒಬ್ಬ ಹುಡುಗನನ್ನು ಪ್ರೀತಿಸಿ, ಮನೆ ಬಿಟ್ಟು ಓಡಿ ಹೋಗುತ್ತಾಳೆ. ಪ್ರೀತಿಸಿದ ಹುಡುಗ ಮೋಸದ ತುಡುಗ ಎಂದು ತಿಳಿದ ತಕ್ಷಣ ತಪ್ಪಿಸಿಕೊಳ್ಳುವಾಗ... ಕಟ್ ಮಾಡಿದ್ರೆ ಗಣೇಶ್ ಆಕಸ್ಮಿಕವಾಗಿ ಹಾಜರ್. ಹಿರೋ ಮುಖವಾಡದ ವಿಲನ್‌ಗೆ ಒದೆ.
ದೊಡ್ಡ ಕುಟುಂಬದ ಹುಡುಗಿ ಆಗಲೇ ಮನೆ ಬಿಟ್ಟು ಬಂದಾಗಿದೆ. ಮತ್ತೇ ಮರಳಿ ಮನೆಗೆ ಹೋದರೆ ಏನು ಹೇಳಬೇಕು ಎಂಬುದು ಗೊತ್ತಾಗದೇ ಫಸ್ಟ ಟೈಮ್ ನೀರಿಗೆ ಹಾರಿ ಸುಸೈಡ್ ಅಟೆಂಪ್ಟ್. ಪಕ್ಕದಲ್ಲೇ ಹಿರೋ ಇದ್ದಮೇಲೆ ಬದುಕಿಸಲೇಬೇಕಲ್ಲ. ಸಮಸ್ಯೆ ಕೇಳಿದ್ದೂ ಆಯ್ತು. ತಾನೇ ಪ್ರೀತಿಸಿದ ಹುಡುಗ ಎಂದು ಹೇಳಿದರೆ ಮೊದಲಿಗೆ ಮನೆಯವರು ಒಂದೆರಡು ಬಯ್ಯುತ್ತಾರೆ. ಆಮೇಲೆ ಮನೆ ಮರ್ಯಾದೆ ಎಂದು ಒಳಗೆ ಕರೆಯುತ್ತಾರೆ ಎಂದು ಧೈರ್ಯ ಮಾಡಿ ಮನೆಗೆ ಹೋಗಿ ಹೇಳಿದರೆ ಮನೆಯ ಹಿರಿಯಣ್ಣ ಅವಿನಾಶ್ ನಮ್ಮ ಪಾಲಿಗೆ ನೀವು ಸತ್ತು ಹೋದ್ರಿ ಎಂದು ಬಾಗಿಲು ಹಾಕಿಬಿಡುವುದೇ.
ಇಲ್ಲಿಂದ ಎಳಸು, ಮುಗ್ಧ ಹುಡುಗಿಯೊಂದಿಗೆ ಕೂಲ್ ಹುಡುಗನ ವಾಸ. ಅದೂ ಒಂದೇ ಮನೆಯಲ್ಲಿ. ತಾನು ಸಿಂಗರ್ ಆಗುವ ಕನಸಿನೊಂದಿಗೆ ಅಮೂಲ್ಯಗೊಂದು ಕೆಲಸ ಕೊಡಿಸುವ ಅನಿವಾರ್ಯತೆ ಬೇರೆ ತಳುಕಿ ಹಾಕಿಕೊಂಡು ಹೇಗೋ ಹರಸಾಹಸ ಪಟ್ಟು ಆಕೆಯನ್ನು ಟೀಚರ್ ಮಾಡುತ್ತಾನೆ. ೬ ತಿಂಗಳ ಬಳಿಕ ಇಬ್ಬರಿಗೂ ಪರಸ್ಪರ ಪ್ರೀತಿ ಶುರು. ಆದರೆ ಹೇಳಿಕೊಂಡರೆ ಎಲ್ಲಿ ನಂಬಿಕೆಗೆ ಧಕ್ಕೆ ಬರುತ್ತದೆ ಎಂಬ ಅಳುಕು ಭಾವ ಇಬ್ಬರನ್ನು ಕಟ್ಟಿ ಹಾಕುತ್ತದೆ. ಗಣೇಶ್‌ನಿಗೆ ಒಳ್ಳೇಯದಾಗಲಿ ಎಂದು ಅಮೂಲ್ಯ, ಅಮೂಲ್ಯಗೆ ಒಳ್ಳೇಯದಾಗಲಿ ಎಂದು ಗಣೇಶ್. ಇವರಿಬ್ಬರಿಗೂ ಒಳ್ಳೇಯದಾಗಲಿ ಎಂದು ಮನೆ ಬಾಡಿಗೆ ಕೊಟ್ಟ ಅನಂತನಾಗ್-ತಾರಾ ಜೋಡಿ. ಕೊನೆಗೂ ಗಣೇಶ್‌ನ ಪ್ರಯತ್ನದಿಂದ ಅಮೂಲ್ಯ ಟೀಚರ್ ಆದಂತೆ, ಅಮೂಲ್ಯ ಪ್ರಯತ್ನದಿಂದ ಗಣೇಶ್ ಸಿಂಗರ್ ಆಗ್ತಾನೆ. ಇನ್ನೇನು ಇಬ್ಬರೂ ಪರಸ್ಪರ ತಮ್ಮ ಪ್ರೀತಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ...
ಕ್ಲೈಮ್ಯಾಕ್ಸ್ ನೋಡುತ್ತಿರುವಾಗ ಎಲ್ಲಿ ಇದು ಮತ್ತೊಂದು ಚೆಲುವಿನ ಚಿತ್ತಾರವಾಗುತ್ತದೆಯೋ ಎಂಬ ಕೆಟ್ಟ ಕುತೂಹಲ ಸೃಷ್ಟಿಯಾಗಿಬಿಡುತ್ತೆ. ಅಮೂಲ್ಯ ವಿಷ ಕುಡಿದು ಎರಡನೇ ಬಾರಿ ಸುಸೈಡ್ ಅಟೆಂಪ್ಟ್‌ಗೆ ಕೈ ಹಾಕ್ತಾಳೆ. ಅಮೂಲ್ಯ ಬದುಕುಳಿಯುತ್ತಾಳಾ?, ಗಣೇಶ್ - ಅಮೂಲ್ಯ ಒಂದಾಗ್ತಾರಾ? ಅನಂತನಾಗ್-ತಾರಾ ಜೋಡಿ ಕಥೆ ಏನು? ಅಮೂಲ್ಯ ಮನೆಯವರು ಇವರ ಪ್ರೀತಿ ಒಪ್ಪಿಕೊಳ್ತಾರಾ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀವು ಸಿನಿಮಾ ನೋಡಿದ ನಂತರ...
ಅಮೂಲ್ಯ ಇಡೀ ಸಿನಿಮಾದ ಜೀವಾಳ. ಅವರ ಪೆದ್ದು ಪೆದ್ದಾದ ಮಾತುಗಳು, ನಟನೆ, ಧ್ವನಿಯ ಏರಿಳಿತ ಎಂಥವರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತೆ. ಅಮೂಲ್ಯ ಎದುರು ಗೋಲ್ಡನ್ ಸ್ಟಾರ್ ಕೊಂಚ ಡಲ್ಲ ಎನಿಸುತ್ತಾರಾದರೂ ಕ್ಲೈಮ್ಯಾಕ್ಸ್ ಸಮೀಪಿಸುತ್ತಿದ್ದಂತೆ ಮಳೆಯಲ್ಲಿ ನೆನೆದು ಒಂದೊಂದೇ ಡೈಲಾಗ್ ಹೇಳುವಾಗ ಹಾಳಾದ್ ಆ ಮುಂಗಾರು ಮಳೆ ಸಿನಿಮಾನೇ ನೆನಪಾಗುತ್ತೇ ಕಣ್ರಿ. ಅನಂತನಾಗ್ ಮತ್ತು ತಾರಾರವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ ನಗೆ ಚೆಲ್ಲುವುದರ ಜೊತೆಗೆ ಕಣ್ಣನ್ನೂ ಒದ್ದೆ ಮಾಡುತ್ತಾರೆ. ಸಾಧುಕೋಕಿಲಾ ಕಾಮಿಡಿ ಅಪಹಾಸ್ಯವೆನಿಸದು. ಹೊಸ ರೀತಿಯ ಹಾಸ್ಯ ದೃಶ್ಯಗಳು ಸೆಳೆಯುತ್ತವೆ. ಒಂದು ಆಂಗಲ್‌ನಲ್ಲಿ ಶ್ರಾವಣಿ ಸುಬ್ರಮಣ್ಯ ಮೊದಲಾರ್ಧ ಫುಲ್ ಕಾಮಿಡಿಯ ಮೊಸರನ್ನ. ಸೆಕೆಂಡ್ ಆಫ್ ಕಾಮಿಡಿ, ಟ್ರಾಜಿಡಿ, ಸೆಂಟಿಮೆಂಟ್, ಫೈಟ್, ಎಲ್ಲವನ್ನು ಒಳಗೊಂಡ ಮೀಲ್ಸ್. ಅವಿನಾಶ್, ನೀನಾಸಂ ಸತೀಶ್, ಶಾಂತಮ್ಮ, ವಿನಯಾ ಪ್ರಸಾದ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅರ್ಜುನ್ಯ ಜನ್ಯ, ಮಂಡ್ಯ ರಮೇಶ್, ವಿ.ಮನೋಹರ್ ಹಿಡಿಸುತ್ತಾರೆ.
ನಿರ್ದೇಶಕ ಮಂಜು ಸ್ವರಾಜ್ ಶಿಶಿರ ಚಿತ್ರದ ಮೂಲಕ ಗಮನ ಸೆಳೆದಿದ್ದರು. ಈ ಚಿತ್ರದ ಮೂಲಕ ಖಂಡಿತ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕಚಗುಳಿಯ ಸಂಭಾಷಣೆ ಕುಟುಂಬ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಂತಿದೆ. ಆದರೂ ಎರಡೂ ದೃಶ್ಯಗಳಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಹೆಣ್ಣು ಮಕ್ಕಳು ಥೇಟರ್‌ಗೆ ಬಂದರೆ ಕಿವಿ ಮುಚ್ಚಿಕೊಳ್ಳುವಂತಿವೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಸುರೇಶ ಬಾಬು ಅವರ ಛಾಯಾಗ್ರಹಣ. ಬಸವರಾಜ್ ಅರಸ್ ಅವರ ಕತ್ತರಿ ಪ್ರಯೋಗ ಕಿರಿ ಕಿರಿ ತರದೇ ಸರಾಗವಾಗಿ ನೋಡಿಸಿಕೊಂಡು ಹೋಗುವಂತಿದೆ. ವಿ.ಹರಿಕೃಷ್ಣರ ಸಂಗೀತದ ಬತ್ತಳಿಕೆ ಇನ್ನೂ ಖಾಲಿಯಾಗಿಲ್ಲ ಎಂಬುದನ್ನು ಚಿತ್ರದ ಎರಡು ಹಾಡುಗಳು ಪ್ರೂವ್ ಮಾಡಿವೆ. ಢಿಫರೆಂಟ್ ಡ್ಯಾನಿಯವರ ಸಾಹಸ ಸಂಯೋಜನೆ ಚೆನ್ನಾಗಿದೆ. ಚಿತ್ರ ನೋಡಲು ಫ್ಯಾಮಿಲಿ ಆಡಿಯನ್ಸ್ ಥೇಟರ್‌ಗೆ ಬಂದರೆ ಹಣ ಹಾಕಿರುವ ಕೆ.ಎ.ಸುರೇಶ್ ಸೇಫ್. ನಿಜಕ್ಕೂ ಶ್ರಾವಣಿ ಸುಬ್ರಮಣ್ಯ ಒಂದೆರಡು ಡೈಲಾಗ್ ಹೊರತುಪಡಿಸಿದರೆ ಫ್ಯಾಮಿಲಿ ಸಮೇತ ನೋಡುವಂಥ ಚಿತ್ರ.
ಚಿತ್ರಕ್ಕಿರುವ ಅಡಿ ಬರಹವೇ ಹೇಳುವಂತೆ ಶ್ರಾವಣಿ ಮತ್ತು ಸುಬ್ರಮಣ್ಯ ಮ್ಯಾಡ್ ಫಾರ್ ಇಚ್ ಅದರ್.
-ಚಿತ್ರಪ್ರಿಯ ಸಂಭ್ರಮ್.
ಅಂಕಗಳು : ೧೦೦ ಕ್ಕೆ ೭೦.
0 comments:
Post a Comment