ಕೊಪ್ಪಳ ಜಿಲ್ಲೆಯಲ್ಲಿ ನಡೆಸಲಾಗುವ ಯಾವುದೇ ಸಾಮೂಹಿಕ ವಿವಾಹಕ್ಕೆ ಆಯಾ ತಾಲೂಕಿನ ತಹಸಿಲ್ದಾರರ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಅಂತಹ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯಿಂದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಶಿವರಾಜ ವಿ.ಪಾಟೀಲ್‌ರವರ ಕೋರ್ ಕಮಿಟಿಯ ವರದಿಯಂತೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ವಿಧಿ ವಿಧಾನಗಳ ಬಗ್ಗೆ ಕಂದಾಯ ಇಲಾಖೆಯ ಹೊರಡಿಸಿರುವ ಉಲ್ಲೇಖ (೧) ರ ಸುತ್ತೋಲೆಯಲ್ಲಿರುವಂತೆ ಮಾರ್ಗಸೂಚಿಗಳನ್ನು ಅನುಸರಿಸದೆ, ರಾಜ್ಯದ ನಾನಾ ಕಡೆ ರೀತಿ ನೀತಿ ನಿಯಮಗಳನ್ನು ಉಲ್ಲಂಘಿಸಿ ಸಾಮೂಹಿಕ ವಿವಾಹ ಆಯೋಜಕರುಗಳು, ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‌ಗಳು, ಇತ್ಯಾದಿ ಸಂಘ ಸಂಸ್ಥೆಗಳು ಸಂಬಂಧಪಟ್ಟ ತಾಲ್ಲೂಕುಗಳ ತಹಶೀಲ್ದಾರರಿಂದ ಪೂರ್ವಾನುಮತಿ ಪಡೆಯದೇ ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಿರುವುದು ಇಲಾಖೆಯ ಗಮನಕ್ಕೆ ಕಂಡು ಬಂದಿರುತ್ತದೆ. ಒಂದು ವೇಳೆ ಸಾಮೂಹಿಕ ವಿವಾಹ ಆಯೋಜಕರು ನೋಂದಣಿ ಮಾಡಿಕೊಳ್ಳದೇ, ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದು ಕಂಡು ಬಂದಲ್ಲಿ ಕಾನೂನು ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.
ಜಿಲ್ಲೆಯ ಎಲ್ಲಾ ಸಾಮೂಹಿಕ ವಿವಾಹದ ಆಯೋಜಕರು, ಖಾಸಗಿ ಸಾಮೂಹಿಕ ವಿವಾಹ ಆಯೋಜಕರುಗಳು, ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‌ಗಳು, ಇತ್ಯಾದಿ ಸಂಘ ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ಸಾಮೂಹಿಕ ವಿವಾಹ ಆಯೋಜಕರೆಂದು ಜಿಲ್ಲಾ ನೋಂದಣಿ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಒಂದು ಬಾರಿ ನೋಂದಾಯಿಸಿದ ನಂತರ ಪ್ರತಿ ೫ ವರ್ಷಕ್ಕೊಮ್ಮೆ ನೊಂದಣಿಯನ್ನು ನವೀಕರಿಸಿಕೊಳ್ಳಬೇಕು. ಸಾಮೂಹಿಕ ವಿವಾಹಗಳ ಆಯೋಜಕರು ನೋಂದಾಯಿಸಿದ ಪಕ್ಷದಲ್ಲಿ ಸಾಮೂಹಿಕ ವಿವಾಹಗಳನ್ನು ಸಂಘಟಿಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment