PLEASE LOGIN TO KANNADANET.COM FOR REGULAR NEWS-UPDATES


ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷರು, ವೀರಶೈವ ಸಮಾಜದ ಮುಖಂಡರು, ನಗರದ ಸಾಮಾಜಿಕ ರಂಗದ ಪ್ರಮುಖರಾದ ಮಲ್ಲಿಕಾರ್ಜುನ ಅಗಡಿಯವರು ದಿ. ೦೭.೧೧.೧೩, ಬುಧವಾರದಂದು ನಿಧನರಾಗಿದ್ದು, ದಿ. ೦೮.೧೧.೧೩ ಗುರುವಾರ ಸಾಯಂಕಾಲ ಅಂತ್ಯಕ್ರಿಯೆಯ ನಿಮಿತ್ಯ ನಾಡಿನ ವಿವಿಧ ಗಣ್ಯರು ಬಂದು ಅಗಲಿದ ಧೀಮಂತ ವ್ಯಕ್ತಿ ಮಲ್ಲಿಕಾರ್ಜುನ ಅಗಡಿಯವರ ಅಂತಿಮ ದರ್ಶನ ಪಡೆದರು. ಇಲಕಲ್ ಪೂಜ್ಯ ವಿಜಯ ಮಹಾಂತ ಸ್ವಾಮಿಗಳು ಮತ್ತು ಗುರು ಮಹಾಂತ ಸ್ವಾಮಿಗಳು, ಗದಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು, ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀಗಳು, ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಸ್ವತಂತ್ರ ಬಸವಲಿಂಗ ಸ್ವಾಮಿಗಳು, ಶಿರೋಳದ ರಾಮಾರೂಢ ಮಹಾಸ್ವಾಮಿಗಳು, ನಿಜಗುಣಾನಂದ ಸ್ವಾಮಿಗಳು ಬೈಲೂರು, ಕಾಂಗ್ರೆಸ್ ಮುಖಂಡ ಅಲ್ಲಮ ವೀರಭದ್ರಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಕ್ಷೇತ್ರ ಸಂಸದ ಶಿವರಾಮಗೌಡ, ಕೊಪ್ಪಳ ಸೇರಿದಂತೆ ನಾಡಿನ ಎಲ್ಲ ಭಾಗಗಳಿಂದ ಬಂದ ರಾಜಕೀಯ, ಸಾಮಾಜಿಕ ನಾಯಕರುಗಳು, ಧಾರ್ಮಿಕ ಮುಖಂಡರು, ಉತ್ತರ ಕರ್ನಾಟಕದ ಎಲ್ಲ ಸಮಸ್ತ ಬಣಜಿಗ ಸಮುದಾಯದ ಜಿಲ್ಲಾ, ತಾಲೂಕಾ, ಗ್ರಾಮ, ಹೋಬಳಿ ಮಟ್ಟದ ಪದಾಧಿಕಾರಿಗಳು, ನಗರದ ವ್ಯಾಪಾರ-ವಾಣಿಜ್ಯ ವಲಯದ ಮುಖಂಡರು ಮತ್ತು ಮಲ್ಲಿಕಾರ್ಜುನ ಅಗಡಿಯವರ ಅಪಾರ ಸಂಖ್ಯೆಯ ಅಭಿಮಾನಿಗಳು ೧೦,೦೦೦ ಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕರ ಅಂತಿಮ ದರ್ಶನ ಪಡೆದರು.
ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವ ಕಾರಣ ಸಚಿವರು, ಶಾಸಕರಾದಿಯಾಗಿ, ವೀರಶೈವ ಸಮಾಜದ ಮುಖಂಡ ಭೀಮಣ್ಣ ಖಂಡ್ರೆ, ಜಗದೀಶ ಶೆಟ್ಟರ್, ಯಡಿಯೂರಪ್ಪ ಮೊದಲಾದವರು ದೂರವಾಣಿ ಮೂಲಕ ತಮ್ಮ ಸಂತಾಪವನ್ನು ಸೂಚಿಸಿ, ದುಃಖ ವ್ಯಕ್ತಪಡಿಸಿದ್ದಾರೆ.
ವೀರಶೈವ ಸಮಾಜದ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ, ಜಾತ್ಯತೀತ ಮನೋಬಲದ ನಾಯಕ, ಬಸವ ತತ್ವಾಭಿಮಾನಿ ಮಲ್ಲಿಕಾರ್ಜುನ ಅಗಡಿಯವರು ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಸೇರಿದಂತೆ ಅಪಾರ ಪ್ರಮಾಣದ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

Advertisement

0 comments:

Post a Comment

 
Top