ತಮ್ಮ ಸಾಧನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಕಲಾವಿದರ ಕೀರ್ತಿ ಎಂದೆಂದಿಗೂ ಅಮರ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ದಾ. ಬಬಲಾದಿ ಅವರು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ, ಕಿನ್ನಾಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಲಾಗಿದ್ದ ದಿ. ಹನುಮಂತರಾವ ಬಂಡಿ (ಕುಲಕರ್ಣಿ) ಸಂಗೀತ ಕಲಾವಿದರು ಇವರ ೩ನೇ ವರ್ಷದ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿ. ಹನುಮಂತರಾವ್ ಬಂಡಿ ಅವರು ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದಿದ್ದಕ್ಕಾಗಿಯೇ, ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಅವರ ಸ್ಮರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಗೀತ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರಿಗೆ ಸ್ವರ ಶ್ರದ್ಧಾಂಜಲಿ ಅರ್ಪಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ದಾ. ಬಬಲಾದಿ ಅವರು ಅಭಿಪ್ರಾಯಪಟ್ಟರು.
ಕೊಪ್ಪಳದ ವಸಂತ ಪೂಜಾರ್ ಅವರು ಮಾತನಾಡಿ, ದಿ. ಹನುಮಂತರಾವ್ ಬಂಡಿ ಅವರು ಅನೇಕ ಹಿರಿಯ ಸಂಗೀತಗಾರರನ್ನು ಕೊಪ್ಪಳಕ್ಕೆ ಪರಿಚಯಿಸಿದ್ದರಲ್ಲದೆ, ಜನರಲ್ಲಿ ಸಂಗೀತದ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜೀವನದುದ್ದಕ್ಕೂ ಕಷ್ಟಗಳ ಜೊತೆ, ಜೊತೆಗೆ ಸಂಗೀತದ ಹುಚ್ಚು ಹಚ್ಚಿಕೊಂಡ ಬಂಡಿಯವರು, ಸಂಗೀತದ ಬಂಡಿಯೇ ಆಗಿದ್ದರು ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಯೋಜನೆಯಡಿ ಹಮ್ಮಿಕೊಂಡ ಈ ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ ಎಂ. ವೆಂಕಟೇಶಕುಮಾರ ಧಾರವಾಡ ಅವರ ಶಾಸ್ತ್ರೀಯ ಸಂಗೀತ ಗಾಯನ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಇವರು ಹಾಡಿದ ರಾಗ ಕೇದಾರ ವಿಲಂಬಿತ ಏಕತಾಲ್, ತೀನ್‌ತಾಲ್ ದಲ್ಲಿ ’ಕಾನರೆ ನಂದ ನಂದ ಹೇ ದುಃಖ ಬಂಜನ’ ಮತ್ತು ಅನೇಕ ದಾಸರ ಪದಗಳು, ವಚನಗಳು ಅವರ ಸಿರಿ ಕಂಠಗಳಿಂದ ಹೊರಹೊಮ್ಮಿದವು. ಇವರ ಗಾಯನಕ್ಕೆ ಸಾಥ್ ನೀಡಿದವರೆಂದರೆ, ಹಾರ‍್ಮೋನಿಯಂ- ಲಚ್ಚಣ್ಣ ಕಿನ್ನಾಳ, ತಬಲಾ- ಶಿವಲಿಂಗಪ್ಪ ಕಿನ್ನಾಳ, ತಾನಪೂರ- ವೀರಭದ್ರಪ್ಪ ಮಾದಿನೂರ, ತಾಳ- ಕೃಷ್ಣಾ ಸೊರಟೂರ, ವಿನಾಯಕ ಕಿನ್ನಾಳ, ರಂಗಪ್ಪ ಕಿನ್ನಾಳ ಅವರು ಪಾಲ್ಗೊಂಡರು. ಕಿನ್ನಾಳದ ಸುಧಾ ರಾಮಾಚಾರ ಅಡವಿ ಮತ್ತು ಸಂಗಡಿಗರು ಇದೇ ಸಂದರ್ಭದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಪೂರ್ವದಲ್ಲಿ ಉಮೇಶ್ ಹಳ್ಳದ ಅವರು ನಡೆಸಿಕೊಟ್ಟ ಸಿತಾರ ವಾದನ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು. ಗುರುರಾಜ ಕುಲಕರ್ಣಿ ಇವರಿಗೆ ತಬಲಾ ಸಾಥ್ ನೀಡಿದರು.
ಹನುಮಸಾಗರದ ಹಿರಿಯ ಸಂಗೀತ ಕಲಾವಿದರಾದ ವಾಜೇಂದ್ರಾಚಾರ ಜೋಷಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ನ್ಯಾಯವಾದಿ ವಿ.ಎಂ. ಭೂಸನೂರ ಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಗಣ್ಯರಾದ ಶೈಲಪ್ಪ ಅಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀನಿವಾಸಜೋಷಿ ಹಾಗೂ ವಾದಿರಾಜ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment