PLEASE LOGIN TO KANNADANET.COM FOR REGULAR NEWS-UPDATES

 ನ. ೫. ಯಲಬುರ್ಗಾ ತಾಲ್ಲೂಕಿನ ಗಾಣಧಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವ ಸೇನೆ ಹಾಗೂ ವಾಲ್ಮೀಕಿ ನಾಯಕ ಸಮಾಜವು ಸೋಮವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತೋತ್ಸವ ಹಾಗೂ ವಾಲ್ಮೀಕಿ ವೃತ್ತದ ಉದ್ಘಾಟನೆಯು ವಿಜೃಂಭಣೆಯಿಂದ ಜರುಗಿತು.
ಗಾಣಧಾಳದ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ  ನಡೆದ ಸಮಾರಂಭವನ್ನು ಕೊಪ್ಪಳ ಜಿಲ್ಲಾ ವಾಲ್ಮೀಕಿ-ನಾಯಕ ಸಮಾಜದ ಅಧ್ಯಕ್ಷ ಟಿ.ರತ್ನಾಕರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.  ಉದ್ಘಾಟನಾ ಭಾಷಣ ಮಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿರುವಂತೆ ಪ್ರತಿಯೊಂದು ಶೋಷಿತ ಸಮುದಾಯಕ್ಕೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು, ಆದರೆ ನ್ಯಾಯಯುತವಾಗಿ ವಾಲ್ಮೀಕಿ ಜನಾಂಗಕ್ಕೆ ಸಂವಿಧಾನದತ್ತವಾಗಿರುವ ಮೀಸಲು ಪ್ರಮಾಣ ಈ ವರೆಗೂ ಸಿಕ್ಕಿಲ್ಲ. ಇದನ್ನು ಪಡೆಯಲು ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಮೀಸಲು ಪ್ರಮಾಣವನ್ನು ಶೇಕಡಾ ೭.೫ ಕ್ಕೆ ಹೆಚ್ಚಳವಾಗುವವರೆಗೂ ನಿರಂತರವಾಗಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕಾಗಿದೆ. ನಮ್ಮೊಳಗಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ರಾಜಕೀಯ ಅಧಿಕಾರ ಪಡೆಯಬೇಕು. ಒಗ್ಗಟ್ಟಾಗಿದ್ದರೆ ಮಾತ್ರ  ಇಡೀ ಸಮುದಾಯದಲ್ಲಿ ನಾವೂ ಕೂಡ ಒಂದು ಶಕ್ತಿಯಾಗಿ ಹೊರ ಹೊಮ್ಮಲು ಸಾಧ್ಯವಿದೆ. ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು, ಕಲಾವಿದರಿಗೆ ಸಿಗಬೇಕಾದ ಅವಕಾಶಗಳು ಹಾಗೂ ಸೌಲಭ್ಯ ಒದಗಿಸಲು ತಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ರತ್ನಾಕರ ತಿಳಿಸಿದರು.

ಉಪನ್ಯಾಸ ನೀಡಿದ ಹೊಸಪೇಟೆ ಆಕಾಶವಾಣಿಯ ಪ್ರಸಾರ ನಿರ್ವಾಹಕ ಮಂಜುನಾಥ ಡಿ. ಡೊಳ್ಳಿನ, ೨೦೧೧ ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಠ ಪಂಗಡದ ಪ್ರಮಾಣ ಶೇಕಡಾ ೮.೧೬ ರಷ್ಟಿದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ವರ್ಗಕ್ಕೆ ಕೇಂದ್ರ ಸರಕಾರ ನೀಡಿರುವಂತೆ ಶೇಕಡಾ ೭.೫ ರಷ್ಟಾದರೂ ಮೀಸಲಾತಿ ಪಡೆಯಲು ಹೋರಾಡಬೇಕು . ವಾಲ್ಮೀಕಿ  ಒಬ್ಬ ಪ್ರತಿಭಾವಂತ ಮೊಟ್ಟ ಮೊದಲ ಕವಿ ಆತನ ರಾಮಾಯಣ ಮಹಾಕಾವ್ಯದಿಂದಲೇ ಮಹಾತ್ಮಾ ಗಾಂಧೀಜಿಯವರು ಸತ್ಯ ಮಾರ್ಗದ ಮಹತ್ವ ಕಂಡುಕೊಂಡರು. ನಾವೆಲ್ಲರೂ  ಅದೇ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತೆ  ಹಿರಿಯರು,ಯುವಕರು ಎಚ್ಚರ ವಹಿಸಬೇಕು. ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ೩೭೧ ಜೆ ಕಲಮಿನಡಿ ವಿಶೇಷ ಸವಲತ್ತುಗಳನ್ನು ಕಲ್ಪಿಸುತ್ತಿರುವದರಿಂದ ನಾವೆಲ್ಲ ಆ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ವಿಶೇಷ ಉಪನ್ಯಾಸ ನೀಡುತ್ತಾ, ಪ್ರಸ್ತುತ ವಾಲ್ಮೀಕಿ ಜನಾಂಗದ ೧೮ ಜನ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಲೋಕಸಭಾ ಸದಸ್ಯರಿದ್ದಾರೆ. ಆದರೆ ಇವರ‍್ಯಾರೂ ಮೀಸಲಾತಿ ಹೆಚ್ಚಳದ ಹೋರಾಟ ರೂಪಿಸುತ್ತಿಲ್ಲ. ಸದನದಲ್ಲಿ ಆ ಬಗೆಗೆ ಧ್ವನಿ ಎತ್ತಿಲ್ಲ. ಎಲ್ಲ  ೨೦ ಜನ ಶಾಸಕರು ಪಕ್ಷ ಬೇಧ ಮರೆತು ವಿಧಾನ ಮಂಡಲದಲ್ಲಿ ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸಬೇಕು. ಸಂವಿಧಾನದತ್ತವಾಗಿ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಪ್ರಮಾಣದಲ್ಲಿ ಮೀಸಲು ಸೌಲಭ್ಯ ಸಿಗುವವರೆಗೂ ಯಾರೂ ವಿಶ್ರಮಿಸಬಾರದು. ಜನಾಂಗದ ಸರ್ವತೋಮುಖ ಏಳ್ಗೆಗೆ ಇದು ಬೀಜಮಂತ್ರವಾಗಿದೆ.ಶಬರಿಮಲೈ ಸ್ವಾಮಿ ಅಯ್ಯಪ್ಪ, ರಬೇಡರ ಕಣ್ಣಪ್ಫ, ರಾಮನಿಗಾಗಿ ಕಾದ ಶಬರಿ, ಗಂಡುಗಲಿ ಕುಮಾರರಾಮ, ಮದಕರಿನಾಯಕ, ವೀರ ಸಿಂಧೂರ ಲಕ್ಷ್ಮಣ, ಹಲಗಲಿಯ ಬೇಡರು, ಸುರಪುರ ವೆಂಕಟಪ್ಪ ನಾಯಕ, ದ್ರಾವಿಡ ಚಳುವಳಿಯ ಡಿ.ಎಂ.ಕೆ. ಪಕ್ಷ ಕಟ್ಟಿದ ಪೆರಿಯಾರ್  ರಾಮಸ್ವಾಮಿ ನಾಯ್ಕರ್ ಮೊದಲಾದ ಮಹನೀಯರ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರ ಹಾಗೂ ಗುರುಪೀಠಗಳು ವರ್ಷವಿಡೀ ಸಂಘಟಿಸಬೇಕು. ಬೇಟೆಗಾರನಾಗಿದ್ದ ವ್ಯಕ್ತಿಯು ರಾಮನಾಮ ಸಂಸ್ಕಾರದಿಂದ ಮಹಾಋಷಿಯಾಗಿ ಪರಿವರ್ತನೆಯಾದ. ರಾಮಾಯಣದಂತಹ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಪ್ರಪಂಚ ಮೊಟ್ಟ ಮೊದಲ ಕವಿ ಎನಿಸಿಕೊಂಡ. ಆದರೆ ಆತನ ವಂಶಜರಾದ ನಾವು ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಬಿದ್ದಿರುವದು ವಿಪರ್ಯಾಸ. ಜನಾಂಗದ ಪ್ರತಿಯೊಂದು ಮಗುವೂ ಶಾಲೆಗೆ  ಹೋಗುವಂತೆ ಆಯಾ ಗ್ರಾಮಗಳ ಜನರು ಎಚ್ಚರ ವಹಿಸಬೇಕು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗುಲ್ಬರ್ಗಾ ವಿಶ್ವವಿದ್ಯಾಲಂiiದ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಯಮನೂರಪ್ಪ ತಳವಾರ ಹೊಮ್ಮಿನಾಳ ಮಾತನಾಡಿದರು.
ಕೊಪ್ಪಳ ಜಿಲ್ಲಾ  ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಶಂಕ್ರಪ್ಪ ಸುರಪುರ ವಕೀಲರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಹಿರೇಮನ್ನಾಪುರದ  ಮಹರ್ಷಿ ವಾಲ್ಮೀಕಿ ಗುರುಕುಲಾಶ್ರಮದ  ಅಪ್ಪಯ್ಯ ನಾಯಕ ಸ್ವಾಮಿಗಳು  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಿಜುತಾರಾಣಿ ಸುರಪುರ ಭರತನಾಟ್ಯ ಪ್ರದರ್ಶಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತರಿಗೆ ಪವಿತ್ರ ಎಸ್. ಸುರಪುರ  ಸನ್ಮಾನಿಸಿ ಗೌರವಿಸಿದರು.
ಜಿ.ಪಂ.ಮಾಜಿ ಸದಸ್ಯ ಹನುಮಗೌಡ ಪೂಜಾರ, ಲಕ್ಷ್ಮಣಗೌಡ ಸಾಲಭಾವಿ,ಹನುಮಗೌಡ ಕೋರಿ.ಗಿರಿಯಪ್ಪ ನಾಗರಾಳ, ಯಂಕಪ್ಪ ಮೂಕಪ್ಪನವರ, ಹನುಮಂತಪ್ಪ ಯಮ್ಮಿ , ಹನುಮಗೌಡ ಮಾಲಿಪಾಟೀಲ, ತಿಮ್ಮಣ್ಣ ಶಿಲ್ಪಿ,ಮುದಿಯಪ್ಪ ಗದ್ದಿ, ಹನುಮಂತಪ್ಪ ನಾಗರಾಳ, ಶೇಖರಪ್ಪ ಜರಕುಂಟಿ,ಬಾಲಪ್ಪ ಮಾಸ್ತರ ಜಾಲಿಹಾಳ, ದುರಗಪ್ಪ ಪ್ಯಾಟಿಹಾಳ, ಮಾರುತಿ ಗೋಂಧಳಿ, ಯಮನೂರಪ್ಪ, ತಿರುಪತಿಗೌಡ,ರೇಣುಕಪ್ಪ ತಿಪ್ಪನಾಳ, ಕುಂಟೆಪ್ಪ ಗೌರಿಪುರ ಮೊದಲಾದವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನೇಕರನ್ನು ಸನ್ಮಾನಿಸಲಾಯಿತು. ಕರ್ಯಕ್ರಮಕ್ಕೂ ಮುನ್ನ ವಿಜೃಂಭಣೆಯ ಮೆರವಣಿಗೆ ನಡೆಯಿತು, ಮಹಿಳೆಯರು ಕುಂಭ ಹೊತ್ತು ಸಂತಸದಿಂದ ಪಾಲ್ಗೊಂಡಿದ್ದರು.
ತಿಮ್ಮನಗೌಡ ಪೋಲೀಸ್‌ಪಾಟೀಲ ಪ್ರಾರ್ಥಿಸಿದರು, ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ಹಾಗೂ ವಾಲ್ಮೀಕಿ ಯುವ ಸೇನೆ ಅಧ್ಯಕ್ಷ ವೀರಭದ್ರ ನಾಯಕ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top