PLEASE LOGIN TO KANNADANET.COM FOR REGULAR NEWS-UPDATES

 ದಾಸಶ್ರೇಷ್ಠ ಕನಕದಾಸರ ತತ್ವ ಆದರ್ಶಗಳ ಬಗ್ಗೆ ಎಲ್ಲರೂ ಅರಿವು ಹೊಂದುವಂತೆ ಮಾಡಲು, ರಾಜ್ಯದ ಎಲ್ಲ ಜಿಲ್ಲೆಗೊಂದು ಕನಕ ಭವನ ನಿರ್ಮಾಣಕ್ಕೆ ಎಲ್ಲ ಶಾಸಕರು ಒಟ್ಟಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲು ಯತ್ನಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
 



  ಭಕ್ತ ಕನಕದಾಸರ ಜಯಂತಿ ಅಂಗವಾಗಿ ಕೊಪ್ಪಳದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾದ ಸಮಾರಂಭದ ಉದ್ಘಾಟನೆ ಹಾಗೂ ವಾರ್ತಾ ಇಲಾಖೆ ಹೊರತಂದಿರುವ ದಾಸ ಶ್ರೇಷ್ಠ ಭಕ್ತ ಕನಕದಾಸರು ಮಡಿಕೆ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
  ಪ್ರತಿ ಜಿಲ್ಲೆಯಲ್ಲೂ ಕನಕ ಭವನ ನಿರ್ಮಾಣಕ್ಕೆ ಎಲ್ಲ ಶಾಸಕರ ಸಹಕಾರವನ್ನು ಪಡೆದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.  ಕನಕದಾಸರು ದಾಸ ಸಾಹಿತ್ಯದ ಮೂಲಕ ಕನ್ನಡದ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು.  ಕನಕದಾಸರು ಕೀರ್ತನೆಗಳ ಮೂಲಕ ಸಾರಿದ ಸಾಮಾಜಿಕ ತತ್ವಗಳಿಂದ ಸಮಾಜದಲ್ಲಿದ್ದ ಮೇಲು-ಕೀಳು, ಮತ್ತು ಜಾತಿ-ಮತಗಳಂತಹ ಭಾವನೆಗಳನ್ನು ಬದಿಗೆ ಸರಿಯುವಂತೆ ಮಾಡಿದರು.  ಜಾತಿ ಬೇಧಗಳನ್ನು ತೊಡೆದುಹಾಕು ನಾವೆಲ್ಲ ಒಂದು ಎನ್ನುವ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯವನ್ನು ಈ ನಾಡಿಗೆ ನೀಡಿದವರು, ಕನಕದಾಸರು.  ಸಾಮಾಜಿಕ ಚಿಂತನೆಯನ್ನು ಬಿಂಬಿಸುವಂಹ ಕೀರ್ತನೆಗಳನ್ನು ಸಾಮಾನ್ಯ ಜನರಿಗೂ ಮನಮುಟ್ಟುವ ರೀತಿಯಲ್ಲಿ ಸಂಗೀತ ಸಾಹಿತ್ಯದ ಮೂಲಕ ಜಗತ್ತಿಗೆ ಉಣಬಡಿಸಿದರು.  ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ, ಅವರ ಚಿಂತನೆಗಳು ಎಲ್ಲ ವರ್ಗದವರಿಗೂ ಸೌಹಾರ್ದತೆಯನ್ನು ಬೆಸೆಯುವ ಕೊಂಡಿಗಳಾಗಿವೆ.  ಎಲ್ಲ ಸಮಾಜದವರನ್ನೂ ಗೌರವಿಸುವ ಮನೋಧರ್ಮವನ್ನು ಕನಕದಾಸರು ಇಂದಿನ ಪೀಳಿಗೆಗೆ ಬಿಟ್ಟುಹೋಗಿರುವ ಬಳುವಳಿಯಾಗಿದೆ.  ಕನಕದಾಸರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಅರಿತುಕೊಂಡು, ಅವರ ತತ್ವಗಳನ್ನು ಪಾಲಿಸಿದಲ್ಲಿ, ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕನಕದಾಸರು ದಾಸ ಸಾಹಿತ್ಯದ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೌಢ್ಯಗಳನ್ನು ತೊಡೆದುಹಾಕಲು ಶ್ರಮಿಸಿದರು.  ಕನಕದಾಸರು ಜಾತಿ-ಮತಗಳನ್ನು ತೊಡೆದು, ಎಲ್ಲ ಸಮುದಾಯ ಒಂದು ಎಂದು ಸಾರಿದ ಮಹಾನ್ ದಾರ್ಶನಿಕರು.  ಕೆಳವರ್ಗದವರೆಂಬ ಕಾರಣಕ್ಕೆ ಕನಕದಾಸರಿಗೆ ಶ್ರೀ ಕೃಷ್ಣನ ದರ್ಶನವನ್ನು ನಿರಾಕರಿಸಿದಾಗ, ನಿಂತಲ್ಲಿಯೇ ಭಕ್ತಿ ಪರವಶರಾಗಿ ಹರಿ ಕೀರ್ತನೆಯನ್ನು ಹಾಡಿದಾಗ, ಶ್ರೀ ಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ, ಕನಕನಿಗೆ ದರ್ಶನ ನೀಡಿದನಂತೆ.  ಶ್ರೀ ಕೃಷ್ಣನನ್ನೇ ತನ್ನತ್ತ ತಿರುಗುವಂತೆ ಮಾಡಿದ ಮಹಾನ್ ಭಕ್ತರು ಕನಕದಾಸರು ಎಂದು ಬಣ್ಣಿಸಿದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಮಾತನಾಡಿ, ಎಲ್ಲ ಜಾತಿಗಳನ್ನು ಪ್ರೀತಿಸುವಂತಹ ಕನಕದಾಸರ ಚಿಂತನೆಗಳಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ.  ಕನಕದಾಸರನ್ನು ಒಂದು ಜಾತಿಗೆ ಮಾತ್ರ ಸೀಮಿತಗೊಳಿಸುವ ಹುನ್ನಾರ ನಡೆದಿದ್ದು, ಇದು ಸರಿಯಲ್ಲ.  ಕನಕದಾಸರ ದಾಸ ಸಾಹಿತ್ಯಗಳನ್ನು, ಅವರ ಕಾವ್ಯಗಳನ್ನು ಹತ್ತಾರು ಭಾಷೆಗಳಿಗೆ ಅನುವಾದ ಮಾಡುವಂತಹ ಕಾರ್ಯ ಆಗಬೇಕಿದೆ.  ಇದರಿಂದ ಅವರ ತತ್ವ ಸಾರಗಳನ್ನು ಜಗತ್ತಿನಾದ್ಯಂತ ಪ್ರಚುರಪಡಿಸಲು ಸಾಧ್ಯವಾಗಲಿದೆ ಎಂದರು.
  ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಸಿಂಧನೂರಿನ ಬೀರಪ್ಪ ಶಂಭೋಜಿ ಅವರು, ಕನಕದಾಸರು ರಚಿಸಿದ ಮಹಾನ್ ಕಾವ್ಯಗಳಲ್ಲಿ ರಾಮಧಾನ್ಯ ಚರಿತೆ, ಅತ್ಯಂತ ಮಹತ್ವಪೂರ್ಣವಾಗಿದ್ದು, ಇದರಲ್ಲಿ ಮೇಲು ವರ್ಗ ಮತ್ತು ಕೆಳ ವರ್ಗಗಳನ್ನು ಅಕ್ಕಿ ಮತ್ತು ರಾಗಿ ಧಾನ್ಯಕ್ಕೆ ಹೋಲಿಸಿಕೊಂಡು, ಅವರು ರಚಿಸಿರುವ ಕಾವ್ಯ ಅತ್ಯದ್ಭುತವಾಗಿದೆ ಎಂದು ವರ್ಣಿಸಿದರು.
  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್, ತಾ.ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್,  ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ, ರಮೇಶ್ ಹಿಟ್ನಾಳ್, ನಗರಸಭೆ ಸದಸ್ಯರಾದ ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಸ್ವಾಗತಿಸಿದರು, ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 
  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಪಾಸಾದ ವಿದ್ಯಾರ್ಥಿಗಳನ್ನು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದ ಶರಣಪ್ಪ ವಡಿಗೇರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

Advertisement

0 comments:

Post a Comment

 
Top