PLEASE LOGIN TO KANNADANET.COM FOR REGULAR NEWS-UPDATES

  ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಕಾಲ ಕಾಲಕ್ಕೆ ಸರಿಯಾಗಿ, ವಿಳಂಬಕ್ಕೆ ಆಸ್ಪದ ಇಲ್ಲದಂತೆ ಒದಗಿಸುವ ಉದ್ದೇಶದಿಂದ ಸಕಾಲ ನಾಗರಿಕ ಸೇವಾ ಖಾತ್ರಿ ಯೋಜನೆ ಜಾರಿಗೆ ಬಂದಿದ್ದು, ಈ ಸಕಾಲ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತಹ ಕೆಲಸ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ಅಧಿಕಾರಿಗಳಿಗೆ ಕರೆ ನೀಡಿದರು. 
ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಎರಡು ದಿನಗಳ ಸಕಾಲ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅನೇಕ ಸೇವೆಗಳು ಲಭ್ಯವಿದ್ದು,  ಕೊಪ್ಪಳ ಜಿಲ್ಲೆಯಲ್ಲಿ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ತಿಳಿಸಿದ ಅವರು, ಸಕಾಲ ಯೋಜನೆಯಡಿ ಇರುವ ಸೇವೆಗಳಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳೂ, ಸಕಾಲ ವ್ಯವಸ್ಥೆಯಡಿಯೇ ಕಚೇರಿಗಳಲ್ಲಿ ಸ್ವೀಕೃತಗೊಂಡು, ನಿಗದಿತ ಅವಧಿಯೊಳಗೆ ವಿಲೇವಾರಿಯಾಗಬೇಕು. ತಮ್ಮ ಇಲಾಖೆಯಲ್ಲಿ ಸಕಾಲ ಯೋಜನೆಯಡಿ ಲಭ್ಯವಿರುವ ಸೇವೆಗಳು ಹಾಗೂ ನಿಗದಿತ ಅವಧಿಯ ವಿವರವುಳ್ಳ ಫಲಕವನ್ನು ತಪ್ಪದೆ ಪ್ರದರ್ಶಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ಹೇಳಿದರು.
ನಂತರ ಸಕಾಲ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಬೋಧಕರಾದ ಜಿ.ಎಂ. ಸರ್ವೆಶ್ವರ ಅವರು ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ  ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಲಾಯಖ್ ಅಲಿ, ಶಶೀಧರ ಸೇರಿದಂತೆ ಶಿಕ್ಷಣ ಇಲಾಖೆಯ ನಾಲ್ಕು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
sakal

Advertisement

0 comments:

Post a Comment

 
Top