ಜಿಲ್ಲೆಯ ಗಂಗಾವತಿ ತಾಲೂಕಿನ ಜೂರಟಗಿ ಗ್ರಾಮದ ಹೊಲದಲ್ಲಿನ ಕಲ್ಲು ಬಂಡೆಗಳ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೇಗಿ ಗಣೇಶ ತಂದೆ ರಾಮರಾವ್ ಎಂಬಾತನಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಳೆದ ೨೦೧೦ ರ ಜು.೨೫ ರಂದು ಜೂರಟಗಿ ಗ್ರಾಮದ ಆರೋಪಿ ಗಣೇಶ ಇವರ ಹೊಲದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಲ್ಲು ಬಂಡೆಗಳನ್ನು ತೆಗೆದು ಹೊಲವನ್ನು ಲೆವಲ್ ಮಾಡಲೆಂದು ಬಸವರಾಜ ಹೂಗಾರ ಹಾಗೂ ಹನುಮೇಶ ಅವರಿಗೆ ಗುತ್ತಿಗೆ ಕೊಟ್ಟಿದ್ದರು. ಈ ಇಬ್ಬರು ಆರೋಪಿತರು ಮಹೇಂದ್ರ ಕಂಪನಿಯ ಟ್ರಾಕ್ಟರ್‌ಗೆ ಅಳವಡಿಸಿದ ಕಾಂಪ್ರಸರ್‌ದಿಂದ ಕಲ್ಲು ಬಂಡೆಗಳಲ್ಲಿ ರಂದ್ರಗಳನ್ನು ಹಾಕಿ ಯಾವುದೇ ಅಧಿಕೃತ ಲೈಸೆನ್ಸ ಹೊಂದದೇ ಹಾಗೂ ಪರಿಣತಿ ಹೊಂದದೇ ಈ ಸ್ಪೋಟಕ ವಸ್ತುಗಳನ್ನು ತುಂಬಿ ಬ್ಲಾಸ್ಟ್ ಮಾಡಿದ್ದರಿಂದ ಕಲ್ಲುಗಳು ಬ್ಲಾಸ್ಟ್ ಆಗಿ ಬಸವರಾಜ ಹೂಗಾರ, ಹನುಮೇಶ ಹಾಗೂ ಕುಮಾರ ಇವರಿಗೆ ಮುಖಕ್ಕೆ ಮತ್ತು ಕಣ್ಣುಗಳಿಗೆ ಕಲ್ಲುಗಳು ಮತ್ತು ಸಿಡಿಮದ್ದಿನ ಅಂಶ ಬಡಿದು ಸಾದಾ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಬಿ.ಎಸ್.ಶಾಂತಕುಮಾರ ಅವರು ತನಿಖೆ ಮಾಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಕುರಿತಂತೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಡಿ.ಬಬಲಾದಿ ಅವರು, ಬಸವರಾಜ ಹೂಗಾರ ಇತನಿಗೆ ಬಿಡುಗಡೆ ಮಾಡಿದ್ದು, ಆರೋಪಿ ವೇಗಿ ಗಣೇಶ ಎಂಬಾತನನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೨೮೬ ರ ಅಪರಾಧಕ್ಕಾಗಿ ೬ ತಿಂಗಳ ಕಠಿಣ ಶಿಕ್ಷೆ ಹಾಗೂ ರೂ.೧೦೦೦/- ದಂಡ, ಕಲಂ: ೩೩೭ ರ ಅಪರಾಧಕ್ಕಾಗಿ ೬ ತಿಂಗಳ ಶಿಕ್ಷೆ ಮತ್ತು ೫೦೦/- ದಂಡ, ಕಲಂ: ೩೩೮ ರ ಅಪರಾಧಕ್ಕಾಗಿ ೨ ವರ್ಷ ಶಿಕ್ಷೆ ಮತ್ತು ೧೦೦೦/- ದಂಡ, ಸ್ಪೋಟಕ ವಸ್ತು ಕಾಯ್ದೆ ಕಲಂ ೩ ರ ಅಪರಾಧಕ್ಕೆ ೧೦ ವರ್ಷ ಕಠಿಣ ಶಿಕ್ಷೆ ಹಾಗೂ ರೂ.೧ ಲಕ್ಷ ದಂಡ, ಕಲಂ-೪ ರ ಅಡಿ ಅಪರಾಧಕ್ಕೆ ೧೦ ವರ್ಷ ಕಠಿಣ ಶಿಕ್ಷೆ ಹಾಗೂ ೧ ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಎ.ಪಾಟೀಲ್ ಅವರು ವಾದ ಮಂಡಿಸಿದ್ದರು.
0 comments:
Post a Comment