PLEASE LOGIN TO KANNADANET.COM FOR REGULAR NEWS-UPDATES

  ದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿ, ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ಎಂದು ಮಹಾತ್ಮಾ ಗಾಂಧೀಜಿಯವರು ಅಂದಿನ ದಿನಮಾನಗಳಲ್ಲಿ ನೀಡಿದ ಕರೆ, ಇಂದಿಗೂ ಪ್ರಸ್ತುತವಾಗಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇದು ಅತ್ಯಂತ ಪರಿಣಾಮಕಾರಿಯಾಗಬಲ್ಲದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ ಬಿಸರಳ್ಳಿ ಅವರು ಹೇಳಿದರು.
  ವಾರ್ತಾ ಇಲಾಖೆಯು ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಿದ್ದ  ಮಹಾತ್ಮಾ ಗಾಂಧೀಜಿಯವರ ೧೪೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪ




ನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
  ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹಲವಾರು ನಾಯಕರು ಹೋರಾಟ ಮಾಡಿದ್ದು, ಮಹಾತ್ಮಾ ಗಾಂಧೀಜಿಯವರಂತೆ ಸತ್ಯ, ಶಾಂತಿ ಹಾಗೂ ಅಹಿಂಸೆಯ ಅಸ್ತ್ರಗಳ ಮೂಲಕ ದೇಶದ ಜನರನ್ನು ಹುರಿದುಂಬಿಸಿ ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದ ಯಾವುದೇ ನಿದರ್ಶನ ಈ ಜಗತ್ತಿನಲ್ಲಿ ಕಂಡುಬಂದಿಲ್ಲ.  ದೇಶೀಯ ಉತ್ಪನ್ನಗಳನ್ನೇ ಬಳಸಿ, ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ಎಂದು ಮಹಾತ್ಮಾ ಗಾಂಧೀಜಿಯವರು ನೀಡಿದ್ದ ಕರೆಗೆ ಭಾರತದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.  ಗ್ರಾಮೀಣ ಗುಡಿ ಕೈಗಾರಿಕೆ, ಕರಕುಶಲ ಕಲೆಗಳಿಗೆ ಪ್ರೋತ್ಸಾಹಿಸುವುದರಿಂದ ಮಾತ್ರ ಸ್ವಾವಲಂಬನೆ ಸಾಧ್ಯ ಎಂಬುದು ಗಾಂಧೀಜಿಯವರ ವಾದವಾಗಿತ್ತು.  ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯ ಕನಸು, ಇಂದಿಗೂ ಕನಸಾಗಿಯೇ ಉಳಿದಿದೆ.  ಗಾಂಧೀಜಿಯವರ ಒಂದು ಕರೆಗೆ ಇಡೀ ದೇಶವೇ ಓಗೊಟ್ಟು, ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿತ್ತು.  ಅವರ ಒಂದು ಕರೆಗೆ ಎಷ್ಟೋ ಜನ ತಮ್ಮ ವಿಲಾಸಿ ಜೀವನವನ್ನು ತ್ಯಜಿಸಿ, ದೇಶದ ಹಿತಕ್ಕಾಗಿ ಚಳುವಳಿಗೆ ಧುಮುಕಿದರು. ದೌರ್ಬಲ್ಯ ಹಾಗೂ ದುಶ್ಚಟಗಳಿಗೆ ಯುವ ಪೀಳಿಗೆ ಒಳಗಾಗಬಾರದು ಎಂದು ಮಹಾತ್ಮಾ ಗಾಂಧೀಜಿಯವರು ಕರೆ ಕೊಟ್ಟಿದ್ದರು.  ಅಹಿಂಸಾ ಚಳುವಳಿಯ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧೀಜಿಯವರು, ಸಮಾಜದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿ, ಸೇವಾ ಮನೋಭಾವ ರೂಢಿಸಿಕೊಳ್ಳಬೇಕೆನ್ನುವುದು ಗಾಂಧೀಜಿಯವರ ಸಿದ್ಧಾಂತವಾಗಿತ್ತು. ಜಾತಿ, ಮತಗಳ ಭೇದಭಾವ, ಅಸ್ಪೃಶ್ಯತೆ ಪದ್ಧತಿಯನ್ನು ಬಲವಾಗಿ ವಿರೋಧಿಸುತ್ತಿದ್ದ ಗಾಂಧೀಜಿಯವರು, ಆ ಕಾರಣದಿಂದಾಗಿಯೇ ಇಡೀ ಜಗತ್ತಿನಲ್ಲಿ ಪೂಜಾರ್ಹ ವ್ಯಕ್ತಿಯಾಗಿ ಇಂದಿಗೂ ಜನಮಾನಸಲ್ಲಿ ಉಳಿದಿದ್ದಾರೆ.  ಮಹಾತ್ಮಾ ಗಾಂಧೀಜಿಯವರು ದೊರಕಿಸಿಕೊಟ್ಟ ಸ್ವಾತಂತ್ರ್ಯ ಭಾರತದಲ್ಲಿ ಇಂದಿನ ವ್ಯವಸ್ಥೆ ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಧಕ್ಕೆ ತರುವಂತಿದೆ.  ಎಲ್ಲೆಡೆ ಭ್ರಷ್ಟಾಚಾರ ಕಾಣುತ್ತಿದ್ದು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದು  ಮನವಿ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ ಬಿಸರಳ್ಳಿ ಅವರು ಸ್ವಾತಂತ್ರ್ಯ ಹೋರಾಟ ಸಂದರ್ಭದ ತಮ್ಮ ಅನುಭವಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
  ಮಹಾತ್ಮಾ ಗಾಂಧೀಜಿಯವರ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಪ್ರಕಟಿಸಿರುವ ಜನಪದ- ಗಾಂಧೀಜಿ ವಿಶೇಷಾಂಕ ಮಾಸಿಕ ಪತ್ರಿಕೆ ಹಾಗೂ ಕನ್ನಡ ಅವತರಣಿಕೆಯಲ್ಲಿ ಹೊರತಂದಿರುವ ಗಾಂಧೀಜಿಯವರ ಆತ್ಮ ಚರಿತ್ರೆ ವಿಡಿಯೋ ಸಿ.ಡಿ. ಬಿಡುಗಡೆಗೊಳಿಸಿ ಮಾತನಾಡಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ಗಾಂಧೀಜಿಯವರು ಇಡೀ ಜಗತ್ತಿನಲ್ಲಿ ಅಹಿಂಸಾ ತತ್ವಕ್ಕೆ, ಸತ್ಯಾಗ್ರಹ ಚಳುವಳಿಗೆ ಎಷ್ಟು ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟವರು,  ನಮ್ಮ ದೇಶದಲ್ಲಿ, ಅಹಿಂಸಾ ತತ್ವಗಳಿಂದ ಇಡೀ ಜಗತ್ತಿನ ಗಮನ ಸೆಳೆದ ಮಹತ್ಮಾ ಗಾಂಧೀಜಿಯವರನ್ನು ಕಂಡಂತಹ ಜನತೆ, ಅವರಲ್ಲಿನ ಸದ್ಗುಣಗಳು, ಅತ್ಯಂತ ಸರಳತೆಯ ಜೀವನ ಹಾಗೂ ಆದರ್ಶಕ್ಕಾಗಿಯೇ ಇಂದಿಗೂ ಇಡೀ ಜಗತ್ತಿನಲ್ಲಿ ಅವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.  ಅಂತಹ ಮಹಾನ್ ವ್ಯಕ್ತಿ ಹುಟ್ಟಿದ ದೇಶದಲ್ಲಿ, ನಾವು ಜನಿಸಿ, ಪ್ರಜೆಗಳಾಗಿರುವುದು ನಮ್ಮೆಲ್ಲರ ಪುಣ್ಯವಾಗಿದೆ.  ಅವರ ತತ್ವ, ಸಿದ್ಧಾಂತಗಳ ಪೈಕಿ ಕೆಲವೇ ಸಿದ್ಧಾಂತಗಳನ್ನು ನಮ್ಮ ಜೀವನ ಪದ್ಧತಿಯಲ್ಲಿ ಅಳವಡಿಸಿಕೊಂಡರೆ, ಆದರ್ಶ ವ್ಯಕ್ತಿವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
  ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಉಪವಿಭಾಗಾಧಿಕಾರಿ ಮಂಜುನಾಥ್, ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಭಕ್ತಿ ಪೂರ್ವ ನಮನ ಸಲ್ಲಿಸಿದರು.   ಭಾಗ್ಯನಗರದ ಕು. ಅಂಬಿಕಾ ಮತ್ತು ಸಂಗಡಿಗರು ರಘುಪತಿ ರಾಘವ ರಾಜಾರಾಂ ಗೀತ ಗಾಯನ ನಡೆಸಿಕೊಟ್ಟರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ನಗರದ ಎಸ್‌ಎಫ್‌ಎಸ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಮಹಾತ್ಮಾಗಾಂಧೀಜಿಯವರ ಆತ್ಮ ಚರಿತ್ರೆ ಕುರಿತು ವಾರ್ತಾ ಇಲಾಖೆಯು ಕನ್ನಡ ಅವತರಣಿಕೆಯಲ್ಲಿ ಹೊರತಂದಿರುವ ೩೦ ನಿಮಿಷಗಳ ಅವಧಿಯ ಸಾಕ್ಷ್ಮ ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Advertisement

0 comments:

Post a Comment

 
Top