ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಸ್ಟೆಲ್‌ಗಳಲ್ಲಿನ ಆಹಾರ ಗುಣಮಟ್ಟ ಹೆಚ್ಚಿಸಿ : ಜಿಲ್ಲೆಯ ವಿವಿಧೆಡೆ ಹಾಸ್ಟೆಲ್‌ಗಳಿಗೆ ಆಕಸ್ಮಿಕವಾಗಿ ಖುದ್ದು ಭೇಟಿ ನೀಡಿ, ಆಹಾರ ಹಾಗೂ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಿದ್ದು, ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಪೂರೈಕೆ ಮಾಡಲಾಗುತ್ತಿರುವ ಆಹಾರದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಆದರೆ ಗಂಗಾವತಿ ತಾಲೂಕು ಸಿದ್ದಾಪುರದ ಕಸ್ತೂರಬಾ ಬಾಲಕಿಯರ ವಸತಿ ನಿಲಯದಲ್ಲಿ ಬಾಲಕಿಯರಿಗೆ ಒಳ್ಳೆಯ ಆಹಾರ ನೀಡಲಾಗುತ್ತಿದೆ ಅಲ್ಲದೆ ಅಲ್ಲಿ ತಿಂಗಳಿಗೆ ೨-೩ ಬಾರಿ ನಾನ್‌ವೆಜ್ ಆಹಾರ ಸಹ ನೀಡಲಾಗುತ್ತಿದೆ. ಅಲ್ಲಿ ಸಾಧ್ಯವಾದದ್ದು, ಸಮಾಜಕಲ್ಯಾಣ ಮತ್ತು ಬಿಸಿಎಂ ವಸತಿ ನಿಲಯಗಳಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಹಾಸ್ಟೆಲ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದ್ದರೂ, ಇನ್ನು ಸಹ ಅನುಷ್ಠಾನಗೊಂಡಿಲ್ಲ. ಮುಂದಿನ ದಿನಗಳಲ್ಲಿ ಹಾಸ್ಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ ಸುಧಾರಣೆಯಾಗದಿದ್ದಲ್ಲಿ, ಸಂಬಂಧಪಟ್ಟ ಎಲ್ಲ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ೧೫೦೦ ರೂ. : ಹಾಸ್ಟೆಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ, ಹಾಸ್ಟೆಲ್ ಸೌಲಭ್ಯ ಲಭ್ಯವಾಗದೆ, ಹೊರಗುಳಿಯುವಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ೧೫೦೦ ರೂ. ನಿರ್ವಹಣಾ ವೆಚ್ಚ ನೀಡಲು ಸರ್ಕಾರ ನಿರ್ಧರಿಸಿದ್ದು, ಸಧ್ಯದಲ್ಲೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.
ಪುನರ್ ನೇಮಕಕ್ಕೆ ಸೂಚನೆ : ಗಂಗಾವತಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಪ್ಪಿನಿಂದ ಕೆಲಸ ಕಳೆದುಕೊಂಡ ೨೭ ಅಂಗನವಾಡಿ ಕಾರ್ಯಕರ್ತೆಯರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು. ಈಗಾಗಲೆ ಇಂತಹ ೫ ಅಂಗನವಾಡಿ ಕಾರ್ಯಕರ್ತೆಯರು ನ್ಯಾಯಾಲಯದ ಆದೇಶ ಪಡೆದು, ಪುನರ್ ನೇಮಕ ಆಗಿರುವುದರಿಂದ, ಇದೇ ಆದೇಶದ ಆಧಾರದ ಮೇಲೆ ಬಾಕಿ ಉಳಿದ ಎಲ್ಲ ೨೨ ಅಂಗನವಾಡಿ ಕಾರ್ಯಕರ್ತೆಯರ ಪುನರ್ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರಿಗೆ ಸೂಚನೆ ನೀಡಿದರು.
ದೇವರು ಕ್ಷಮಿಸುವುದಿಲ್ಲ : ಜಿಲ್ಲೆಯಲ್ಲಿನ ಬಹಳಷ್ಟು ಅಂಗನವಾಡಿಯಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಆಹಾರ ಪೂರೈಕೆ ಆಗುತ್ತಿಲ್ಲ. ಮಕ್ಕಳಿಗೆ ಪೂರೈಕೆಯಾಗಬೇಕಾದ ಆಹಾರ ಸಾಮಗ್ರಿಗಳನ್ನು ಮನೆಗಳಿಗೆ ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಸಣ್ಣ ಮಕ್ಕಳ ಆಹಾರವನ್ನು ಕಸಿದುಕೊಂಡು, ಸ್ವಂತಕ್ಕೆ ಬಳಸಿದಲ್ಲಿ, ದೇವರು ಅಂತಹವರನ್ನು ಕ್ಷಮಿಸುವುದಿಲ್ಲ. ಮಕ್ಕಳ ಆಹಾರ ಪೂರೈಕೆಯಲ್ಲಿ ಈ ರೀತಿಯ ಅಕ್ರಮವಾದರೆ, ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಯಾಗುವುದಾದರೂ ಹೇಗೆ ಎಂದು ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.
೧೫೦ ಅಂಗನವಾಡಿ ಕಟ್ಟಡಗಳಿಗೆ ಪ್ರಸ್ತಾವನೆ : ನಬಾರ್ಡ್ ಯೋಜನೆಯಡಿ ಇದುವರೆಗೂ ಪ್ರತಿ ವರ್ಷ ಕೇವಲ ೩೦ ರಿಂದ ೪೦ ಅಂಗನವಾಡಿ ಕಟ್ಟಡಗಳಿಗೆ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗುತ್ತಿತ್ತು. ಆದರೆ ನಬಾರ್ಡ್ ಯೋಜನೆಗೆ ನಾವೇ ಸದಸ್ಯರಾಗಿರುವುದರಿಂದ, ಈ ಬಾರಿ ಜಿಲ್ಲೆಯಲ್ಲಿ ಕನಿಷ್ಠ ೧೫೦ ಅಂಗನವಾಡಿ ಕಟ್ಟಡಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ತಯಾರಿಸಿ ಸಲ್ಲಿಸಬೇಕು. ಅಲ್ಲದೆ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಗುರುತಿಸುವ ಕಾರ್ಯವೂ ತ್ವರಿತವಾಗಿ ಆಗಬೇಕು. ಗಂಗಾವತಿ ತಾಲೂಕಿನಲ್ಲಿ ಬಹಳ ವರ್ಷಗಳಿಂದ ಒಂದೆ ಕಡೆ ಕಾರ್ಯ ನಿರ್ವಹಿಸುತ್ತಿರುವ ಗಂಗಾವತಿ ಸಿಡಿಪಿಓ ಅವರನ್ನು ಕುಷ್ಟಗಿ ತಾಲೂಕಿಗೆ ಕೂಡಲೆ ವರ್ಗಾಯಿಸುವಂತೆ ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment