PLEASE LOGIN TO KANNADANET.COM FOR REGULAR NEWS-UPDATES

  ಯಲಬುರ್ಗಾ ತಾಲೂಕು ಬಿನ್ನಾಳ ಮತ್ತು ತಾಳಕೇರಿ ಗ್ರಾಮಗಳಿಗೆ ಪದವಿಪೂರ್ವ ಕಾಲೇಜನ್ನು ಮಂಜೂರು ಮಾಡಲಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಹೇಳಿದರು.



  ಯಲಬುರ್ಗಾ ತಾಲೂಕು ಕುದರಿಮೋತಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾಗಿರುವ ನೂತನ ಪ್ರೌಢಶಾಲಾ ಕಟ್ಟಡದ ಶಂಕುಸ್ಥಾಪನೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪ್ರತಿಯೊಬ್ಬ ವ್ಯಕ್ತಿಯೂ ಇತಿಹಾಸದಲ್ಲಿ ಕಳೆದು ಹೋಗಬೇಕಾಗಿರುವುದರಿಂದ, ಜನಪ್ರತಿನಿಧಿಗಳು, ಇತಿಹಾಸದಲ್ಲಿ ತಮ್ಮ ಹೆಸರು ಅಚ್ಚಳಿಯದೇ ಉಳಿಸಬೇಕಾದಲ್ಲಿ, ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು.  ಪಕ್ಷ ಬೇಧಗಳು ಚುನಾವಣೆಗಷ್ಟೇ ಸೀಮಿತವಾಗಿದ್ದು, ಅಭಿವೃದ್ಧಿಯ ವಿಷಯ ಬಂದಾಗ ಪಕ್ಷ ಬೇಧ ಮರೆತು, ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ.  ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದ್ದರಿಂದ, ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ೧೨ ಸಾವಿರ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ನಿವೃತ್ತಿಯಿಂದ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ನಿವೃತ್ತ ಶಿಕ್ಷಕರ ಸೇವಾ ಅವಧಿಯನ್ನು ೨೦೧೪ ರ ಮಾರ್ಚ್ ೩೧ ರವರೆಗೂ ಮುಂದುವರೆಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ.  ಬಡ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ಮನಗಂಡ ಸರ್ಕಾರ, ವಾರದಲ್ಲಿ ಮೂರು ದಿನ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.  ಇದಕ್ಕಾಗಿ ಸರ್ಕಾರ ೬೦೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಕುದರಿಮೋತಿಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಮಂಜೂರಾದ ನೂತನ ಶಾಲಾ ಕಟ್ಟಡದಲ್ಲಿ ೬೦ ಲಕ್ಷ ರೂ. ವೆಚ್ಚದಲ್ಲಿ ಒಟ್ಟು ೧೦ ಕೊಠಡಿಗಳನ್ನು ನಿರ್ಮಿಸಲಾಗಿದೆ.  ಈ ಉನ್ನತೀಕರಿಸಿದ ಶಾಲೆ ಮುಂದಿನ ದಿನಗಳಲ್ಲಿ ಪಿಯುಸಿ ವರೆಗೂ ವಿಸ್ತರಣೆಗೊಳ್ಳಲಿದೆ.  ಕುದರಿಮೋತಿ ಗ್ರಾಮಕ್ಕೆ ಸಧ್ಯದಲ್ಲೆ ಮೊರಾರ್ಜಿ ಶಾಲೆ ಮಂಜೂರಾಗಲಿದೆ.  ಯಲಬುರ್ಗಾ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ನೀರಾವರಿ ಮತ್ತು ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದ್ದು, ೧. ೨೭ ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಗುರಿಯನ್ನು ಹೊಂದಿದ್ದೇನೆ.  ಬಹಳಷ್ಟು ಅಭಿವೃದ್ಧಿ ಯೋಜನೆಗಳು ಯಲಬುರ್ಗಾ ತಾಲೂಕಿಗೆ ಮಂಜೂರಾತಿ ಮಾಡಿಸಲಾಗುತ್ತಿದೆಯಾದರೂ, ನಿವೇಶನ ದೊರೆಯದ ಕಾರಣ ಅನುಷ್ಠಾನ ಆಗುವುದರಲ್ಲಿ ತೊಂದರೆ ಉಂಟಾಗುತ್ತಿದೆ.  ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ, ಜಿ.ಪಂ. ಸದಸ್ಯರುಗಳಾದ ಅಶೋಕ್ ತೋಟದ, ರಾಮಣ್ಣ ಸಾಲಭಾವಿ, ತಾ.ಪಂ. ಅಧ್ಯಕ್ಷೆ ಲಕ್ಷ್ಮವ್ವ ರಾಠೋಡ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top