- ಸನತ್‌ಕುಮಾರ ಬೆಳಗಲಿ
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆ ಅನಿರೀಕ್ಷಿತವಾಗಿರಲಿಲ್ಲ. ಆರೆಸ್ಸೆಸ್‌ನ ಉನ್ನತ ಮಟ್ಟದ ಸಮಿತಿ ಇದನ್ನು ಮೊದಲೇ ನಿರ್ಧರಿಸಿತ್ತು. ಈ ನಿರ್ಧಾರವನ್ನು ಪ್ರಕಟಿಸುವುದು ಮಾತ್ರ ಬಿಜೆಪಿ ಪಾಲಿನ ಕರ್ತವ್ಯವಾಗಿತ್ತು. ಆ ಕೆಲಸವನ್ನು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಅತ್ಯಂತ ನಿಷ್ಠೆಯಿಂದ ಮಾಡಿದರು. ಆರಂಭದಲ್ಲೇ ಅಪಸ್ವರ ತೆಗೆದ ವಯೋವೃದ್ಧ ನಾಯಕ ಅಡ್ವಾಣಿ ಅವರನ್ನು ಮೂಲೆಗೆ ತಳ್ಳಿ ಕೊನೆಗೂ ನಾಗಪುರದ ಸಂಘಪರಿವಾರದ ಸರ್ವಾಧಿಕಾರಿಗಳ ಆದೇಶ ವನ್ನು ಜಾರಿಗೆ ತರಲಾಯಿತು. ಮೊದಲು ಗೊಣಗಾಡಿದ್ದ ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಶಿ ಕೊನೆಗೆ ತೆಪ್ಪಗಾದರು.
ಬಿಜೆಪಿ ಎಂಬುದು ಸ್ವತಂತ್ರ ರಾಜಕೀಯ ಪಕ್ಷವಲ್ಲ. ಎಬಿವಿಪಿ, ವಿಎಚ್‌ಪಿ, ಬಿಎಂಎಸ್, ಭಜರಂಗದಳಗಳಂತೆ ಅದು ಆರೆಸ್ಸೆಸ್‌ನ ಅಂಗ. ಸಾವರ್ಕರ, ಗೋಳ್ವಲ್ಕರರು ಹಿಂದೂ ರಾಷ್ಟ್ರ ಕಲ್ಪನೆಯನ್ನು ಸಾಕಾರಗೊಳಿಸಲು ನಿರ್ಮಿಸಿದ ರಾಜಕೀಯ ವೇದಿಕೆ. ಇದನ್ನು ಆರೆಸ್ಸೆಸ್ ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ‘ಬಿಜೆಪಿಗೂ ತಮಗೂ ಸಂಬಂಧವಿಲ್ಲ’ ಎಂದು ಸಂಘದ ವಕ್ತಾರ ರಾಮಮಾಧವ್ ಕಳೆದ ವಾರವೇ ಹೇಳಿದರು. ಆದರೆ ಅದೆಲ್ಲ ಬರೀ ಬೊಗಳೆ. ಸುಳ್ಳಿನ ಕಂತೆ ಎಂಬುದು ಎಲ್ಲರಿಗೂ ಗೊತ್ತು. ಇಂಥ ಸುಳ್ಳುಗಳನ್ನು ಸೃಷ್ಟಿಸುವುದು ಸಂಘಕ್ಕೆ ಹೊಸದಲ್ಲ. ಜರ್ಮನಿಯ ನಾಜಿ ಸರ್ವಾಧಿಕಾರಿ ಹಿಟ್ಲರ್ ಮತ್ತು ಗೊಬೆಲ್ಸ್‌ಗಳಿಂದ ಸಂಘ ಕಲಿತ ಪಾಠವಿದು.
ವರ್ಣಾಶ್ರಮ ಆಧರಿತ ‘ಹಿಂದು ರಾಷ್ಟ್ರ’ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಳಸಿ ಕೊಂಡು ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಆರೆಸ್ಸೆಸ್‌ನ ವೊದಲ ಹೆಜ್ಜೆ. ಒಮ್ಮೆ ಅಧಿಕಾರ ದೊರೆತ ನಂತರ ಸರಕಾರದ ವಿವಿಧ ಅಂಗಗಳನ್ನು ಕೋಮುವಾದೀಕರಣ ಗೊಳಿಸುವುದು ಎರಡನೆ ಹೆಜ್ಜೆ. ಈ ಕೇಸರೀಕರಣಕ್ಕೆ ಸಂವಿಧಾನ ಎಂಬುದು ತಾಂತ್ರಿಕ ಅಡ್ಡಿಯಾದರೆ ಆ ಸಂವಿಧಾನವನ್ನೇ ಕಿತ್ತು ಬಿಸಾಡಿ,ಮನುಧರ್ಮ ಶಾಸ್ತ್ರವನ್ನೇ ಕೊಂಚ ಮಾರ್ಪಡಿಸಿ ಅದನ್ನೇ ರಾಜ್ಯಾಂಗವನ್ನಾಗಿ ಮಾಡುವುದು ಮೂರನೆ ಹೆಜ್ಜೆ.ಹೀಗೆ ಒಂದೊಂದಾಗಿ ಹೆಜ್ಜೆಗಳನ್ನು ಇಡುತ್ತಲೇ ಕೊನೆಗೆ ಪ್ರಜಾ ಪ್ರಭುತ್ವವನ್ನೇ ಸಮಾಧಿ ಮಾಡಿ ಭಗವಾಧ್ವಜ ಹಾರಿಸುವುದು ಅದರ ಗುರಿ.
ಈ ಗುರಿ ಸಾಧನೆಗಾಗಿ ನರೇಂದ್ರ ಮೋದಿ ಅತ್ಯುತ್ತಮ ಸ್ವಯಂ ಸೇವಕ. ಅಟಲ್ ಬಿಹಾರಿ ವಾಜಪೇಯಿ ಅವರಂತೆ ಆತ ಮುಖವಾಡ ವಲ್ಲ. ತೋರಿಕೆಯ ಉದಾರವಾದಿ ವ್ಯಕ್ತಿತ್ವವೂ ಆತನದಲ್ಲ. ಮುಸಲ್ಮಾನರನ್ನು, ಕ್ರೈಸ್ತರನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುವ ಅದ್ಭುತ ಕಲೆ ಆತನಿಗೆ ಗೊತ್ತಿದೆ. 2002ರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಕೊಲ್ಲಿಸಿದ ಸಾಧನೆ ಆತನದು. ಇದಿಷ್ಟೇ ಅಲ್ಲ ಈ ಹತ್ಯಾಕಾಂಡಕ್ಕೆ ಎಂದೂ ವಿಷಾದ ವ್ಯಕ್ತಪಡಿಸಿದ ಹೃದಯಹೀನ ವ್ಯಕ್ತಿ ಆತ. ಅಂತಲೇ ಆರೆಸ್ಸೆಸ್‌ನ ಸಹಜ ಆಯ್ಕೆ ಮೋದಿ ಆಗಿದ್ದರು. ಹೀಗೆ ಅಲ್ಪಸಂಖ್ಯಾತರನ್ನು, ಬಡವರನ್ನು ಕೊಂದು ದಕ್ಕಿಸಿಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲ.
‘ಮೋದಿಯದು ಒಟ್ಟುಗೂಡಿಸಿಕೊಂಡು ಹೋಗುವ ವ್ಯಕ್ತಿತ್ವವಲ್ಲ. ಒಡೆದು ವಿಭಜಿಸಿ ಆಳುವ ಆತನ ಆಯ್ಕೆ ಸಂದರ್ಭದಲ್ಲೂ ಬಿಜೆಪಿ ಎರಡು ಹೋಳಾಗಿದೆ. ಇಂಥ ವಿಭಜಕ, ವಿಧ್ವಂಸಕ ವ್ಯಕ್ತಿಯೇ ಆರೆಸ್ಸೆಸ್‌ಗೆ ಬೇಕು’ ಎಂದು ವಾಜಪೇಯಿ ಪ್ರಧಾನಿ ಯಾಗಿದ್ದಾಗ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಅಡ್ವಾಣಿ ಆಪ್ತ, ನನ್ನ ಗತಕಾಲದ ಗೆಳೆಯ ಸುಧೀಂದ್ರ ಕುಲಕರ್ಣಿ ಹೇಳಿದರು. ಇಂಥ ರಾತ್ರಿ ಕಂಡ ಬಾವಿಯಲ್ಲಿ ಹಗಲಲ್ಲೆ ಬಿದ್ದು ಅವರು ಒದ್ದಾಡುತ್ತಿದ್ದಾರೆ.
ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಆರೆಸ್ಸೆಸ್‌ನ ಪ್ರಧಾನ ಶತ್ರುಗಳು. ಹಿಂದುರಾಷ್ಟ್ರದಲ್ಲಿ ಅವರಿಗೆ ಜಾಗವಿಲ್ಲ. ಅಂತಲೇ ಇವರನ್ನು ನಿರ್ಮೂಲನೆ ಮಾಡಲು ಹೊರಟ ಸಂಘಕ್ಕೆ ಅಡಾಲ್ಪ ಹಿಟ್ಲರ್ ಸ್ಫೂರ್ತಿಯ ಸೆಲೆ. ಆರೆಸ್ಸೆಸ್‌ನ ಎಡನೆ ಸರಸಂಘ ಚಾಲಕ ಗೋಳ್ವಲ್ಕರ್ ತಮ್ಮ ಪುಸ್ತಕವೊಂದರಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದಾರೆ. “ತನ್ನ ರಾಷ್ಟ್ರದ ಸಂಸ್ಕೃತಿ ಹಾಗೂ ಪಾವಿತ್ರ ಉಳಿಸಿಕೊಳ್ಳಲು ಹಾಗೂ ಅಪಾಯಕಾರಿ ಜನಾಂಗವಾದ ಯಹೂದ್ಯ ಕುಲದವರನ್ನು ನಿರ್ನಾಮ ಮಾಡಿ ಪರಿಶುದ್ಧಗೊಳ್ಳಲು ಮುಂದಾದ ಜರ್ಮನಿ ಕಂಪನ ಉಂಟುಮಾಡಿತು.ಜರ್ಮನಿಯಿಂದ ಹಿಂದುಸ್ತಾನ ಪಾಠ ಕಲಿಯಬೇಕಾಗಿದೆ” ಎಂದು ಗೋಳ್ವಲ್ಕರ್ ಆಗಲೇ ಹೇಳಿದ್ದರು.
ಆರೆಸ್ಸೆಸ್‌ನ ಮನುವಾದ ಮಿಶ್ರಿತ ಈ ಹಿಟ್ಲರ್ ಪಾಠವನ್ನು ಚೆನ್ನಾಗಿ ಕಲಿತು ಪಾರಂಗತನಾದ ನರೇಂದ್ರ ಮೋದಿ ಸಂಘದ ಸಾಮಾನ್ಯ ಪ್ರಚಾರಕನ ಸ್ಥಾನದಿಂದ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ನಂತರ ಗೋಳ್ವಲ್ಕರ್ ಹೇಳಿದ್ದನ್ನು ಅಕ್ಷರಶಃ ಜಾರಿಗೆ ತಂದರು. ಅಂತಲೇ ಇಂಥ ಜನಹಂತಕ ವ್ಯಕ್ತಿ ಪ್ರಧಾನಿಯಾಗಬೇಕೆಂಬುದು ಸಂಘ ಪರಿವಾರದ ಸಹಜ ಆಯ್ಕೆಯಾಗಿತ್ತು. ಇದಕ್ಕೆ ಪೂರಕವಾಗಿ ಕಾರ್ಪೊರೇಟ್ ಉದ್ಯಮಪತಿಗಳು ತಮ್ಮ ಪಾದಸೇವೆ ಮಾಡುವ ಈ ಸ್ವಯಂ ಸೇವಕನ ಬೆಂಗಾವಲಿಗೆ ನಿಂತಿದ್ದಾರೆ. ಯಾಕೆಂದರೆ ದೇಶ ಕೊಳ್ಳೆ ಹೊಡೆಯಲು ಮೋದಿಯಂಥ ಪ್ರಧಾನಿ ಅವರಿಗೆ ಬೇಕು.
‘ಹಿಂದು ರಾಷ್ಟ್ರ’ ಕಟ್ಟಲು ಹೊರಟ ಆರೆಸ್ಸೆಸ್‌ಗೆ ಸಮಾನತೆ ಎಂಬುದು ವೊದಲ ಶತ್ರು. ‘ಸಮಾಜವಾದ ನಮಗೆ ಪರಕೀಯ ವಾದುದು’ ಎಂದು ಗೋಳ್ವಲ್ಕರ್ 50ರ ದಶಕದಲ್ಲೇ ಹೇಳಿದ್ದರು. ಅಂತಲೆ ಇಂಥ ಸಂಘಟನೆ ಬಗ್ಗೆ ಕಾರ್ಪೊರೇಟ್ ಬಂಡವಾಳಿಗರಿಗೆ ವಿಶೇಷ ಪ್ರೇಮ. ಯಾಕೆಂದರೆ ಇದರಿಂದ ಅವರ ಉದ್ಯೋಗ ದಂಧೆಗಳಿಗೆ, ಲೂಟಿ, ದರೋಡೆಗಳಿಗೆ ಅನುಕೂಲವಾಗುತ್ತದೆ. ಇಂಥ ಸಂಘದಲ್ಲೇ ಬೆಳೆದ ಮೋದಿ ಮುಖ್ಯಮಂತ್ರಿಯಾದ ನಂತರ ಸಹಜವಾಗಿ ಉದ್ಯಮಪತಿಗಳ ಸೇವೆಗೆ ನಿಂತರು. ರೈತರಿಂದ ಕೃಷಿಯೋಗ್ಯ ಭೂಮಿಯನ್ನು ಕಿತ್ತುಕೊಂಡು ಅಂಬಾನಿ, ಟಾಟಾಗಳಿಗೆ ನೀಡಿ ದರು. ಅಂತಲೇ ಮುಖೇಶ್ ಅಂಬಾನಿ ಗುಜರಾತಿಗೆ ಹೋಗಿ ಮೋದಿ ಬೆನ್ನು ಚಪ್ಪರಿಸಿದರು.
ಕೇಂದ್ರದ ಯುಪಿಎ ಸರಕಾರದ ಬಗ್ಗೆ ಅತ್ಯಂತ ಕೆಳಮಟ್ಟದ ಟೀಕೆ ಮಾಡುವ ಮೋದಿ ಅದೇ ಸರಕಾರ ಅಂಬಾನಿಗಳಿಗೆ ನೀಡಿದ ಸವಲತ್ತುಗಳ ಬಗ್ಗೆ ಎಂದೂ ಟೀಕಿಸುವುದಿಲ್ಲ. ಬಡ ಮಧ್ಯಮ ವರ್ಗದವರನ್ನು ಹಿಂಡಿ ಹಿಪ್ಪೆಮಾಡಿದ ಬೆಲೆ ಏರಿಕೆ ಬಗ್ಗೆ ಉಸಿರೆತ್ತುವುದಿಲ್ಲ. ಮನಬಂದಂತೆ ಇಂಧನ (ಅಡಿಗೆ ಅನಿಲ) ಬೆಲೆ ಹೆಚ್ಚಳ ಮಾಡಲು ಈ ಅಂಬಾನಿಗಳಿಗೆ ಅವಕಾಶ ನೀಡಿದ ಮನ ಮೋಹನ ಸಿಂಗ್ ಸರಕಾರದ ಬಗ್ಗೆ ಚಕಾರ ಎತ್ತುವುದಿಲ್ಲ. ಯಾಕೆಂದರೆ ಈಮೋದಿ ಅಂಬಾನಿಗಳ ಆಜ್ಞಾಧಾರಕ, ಸೆಕ್ಯುರಿಟಿ ಗಾರ್ಡ್.
ಇಂಥ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯಥಿ ಎಂದು ಚುನಾಯಿಸಿದ ಮಾತ್ರಕ್ಕೆ ಆತ ಪ್ರಧಾನಿ ಆಗುವುದಿಲ್ಲ. ಮೋದಿಯನ್ನು ಇಷ್ಟಪಡು ವವರು ಸಂಘಪರಿವಾರದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿರಬಹುದು. ಈ ದೇಶದ ಶೇ.೭೫ರಷ್ಟು ಕಾರ್ಪೊರೇಟ್ ಧಣಿಗಳು ತಮ್ಮ ಈ ನಮ್ರಸೇವಕ ಪ್ರಧಾನಿಯಾಗಬೇಕೆಂಬ ಕನಸು ಕಾಣುತ್ತಿರಬಹುದು. ಆದರೆ ಈ ದೇಶದ ನೂರ ಹತ್ತುಕೋಟಿ ಜನರಲ್ಲಿ ಇಂಥವರ ಸಂಖ್ಯೆ ತುಂಬ ಕಡಿಮೆ. ಕೆಲವೇ ಕೆಲವರು ಬ್ಲಾಗುಗಳಲ್ಲಿ ಮೋದಿಯಲ್ಲಿ ಪ್ರಧಾನಿತ್ವ ಕಂಡು ಸಂತಸ ಪಡಬಹುದು. ಆದರೆ ಮತಪೆಟ್ಟಿಗೆಗಳು ನೀಡುವ ಸಂದೇಶವೇ ಬೇರೆ ಆಗಿರುತ್ತದೆ.
ಪ್ರಧಾನಿಯಾಗುವ ಕನಸನ್ನು ಯಾರು ಬೇಕದರೂ ಕಾಣಬಹುದು. ಈ ಕನಸಿನ ಪ್ರಧಾನಿಯ ರಾಜ್ಯ ಹೇಗಿರುತ್ತದೆ ಎಂದು ಊಹೆ ಮಾಡಲು ಹೊರಟರೆ ಅದ್ಭುತ ದೃಶ್ಯಗಳು ಕಾಣುತ್ತದೆ. ಛತ್ತೀಸಗಡ ಸೇರಿದಂತೆ ಈ ದೇಶದ ಅರಣ್ಯಗಳೆಲ್ಲ ಕಾರ್ಪೊರೇಟ್ ತಿಮಿಂಗಲಗಳ ಒಡಲನ್ನು ಸೇರಿರುತ್ತದೆ.ಬಾಲಕಿಯರ ಮೇಲೆ ಅತ್ಯಾಚಾರ ಮಾಡುವ ಅಸಾರಾಂ ಬಾಪುರಂಥವರು ಜೈಲಿನಿಂದ ಹೊರಗೆ ಬಂದು ಮೋದಿಯ ರಾಜಗುರುಗಳಾಗಿತ್ತಾರೆ.
ಸೂಲಿಬೆಲೆಯಂಥ ಆಸಾರಾಮ ಭಜನಾ ಮಂಡಲಿ ಭಕ್ತರು ದಲಿತರ ಮೀಸಲಾತಿಯ ರದ್ಧತಿಗಾಗಿ ಪ್ರಾಚಾರ್ಯ ಶುರು ಮಾಡುತ್ತಾರೆ.ಕಮ್ಯುನಿಸ್ಟರು ಮತ್ತು ಅಲ್ಪಸಂಖ್ಯಾತರ ನಾಶಕ್ಕಾಗಿ ಹಿಟ್ಲರ ರೂಪಿಸಿದಂತೆ ಗ್ಯಾಸ್ ಚೇಂಬರ್ ತಯಾರಾಗುತ್ತದೆ. ಈ ಕನಸಿನ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು.
ಆದರೆ ಕನಸು ನನಸಾಗುವುದು ಸುಲಭವಲ್ಲ. ರಾಜಕೀಯ ವಲಯದಲ್ಲಿ ಎಲ್ಲರಿಗೂ ಬೇಕಾಗಿದ್ದ ತೋರಿಕೆಗಾದರೂ ಉದಾರ ವ್ಯಕ್ತಿತ್ವ ಹೊಂದಿದ್ದ ಅಟಲ ಬಿಹಾರಿ ವಾಜಪೇಯಿ ನೇತೃತ್ವವಿದ್ದಾಗಲೇ ಬಿಜೆಪಿ ಲೋಕಸಭೆಯ 180ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಅಡ್ವಾಣಿಯ ರಥಯಾತ್ರೆ ಯಲ್ಲಿ ಹರಿದ ಮನುಷ್ಯನ ನೆತ್ತರು ಕೂಡ ಈ ಪಕ್ಷಕ್ಕೆ ನಿಚ್ಚಳ ಬಹುಮತ ತಂದು ಕೊಡಲಿಲ್ಲ ಹಾಗೂ ಹೀಗೂ ಸರ್ಕಸ್ ಮಾಡಿ 22 ಪ್ರಾದೇಶಿಕ ಪಕ್ಷಗಳ ನೆರವು ಪಡೆದು ವಾಜಪೇಯಿ ಪ್ರಧಾನಿಯಾದರು.
ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿದ್ದ ಎಲ್ಲ ಪಕ್ಷಗಳು ದೂರವಾಗಿವೆ. ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳಗಳು ಮಾತ್ರ ಜೊತೆಗಿವೆ. ಇಂಥ ಸನ್ನಿವೇಶದಲ್ಲಿ ಮೋದಿ ಪ್ರಧಾನಿಯಾಗುವ ಸ್ವಪ್ನ ಕಾಣುತ್ತಿದ್ದಾರೆ. ಫ್ಯಾಸಿಸ್ಟ್ ನರಹಂತಕನೊಬ್ಬನ ಈ ಸ್ವಪ್ನ ಕೋಟ್ಯಂತರ ಭಾರತೀಯರ ಪಾಲಿಗೆ ದುಃಸ್ವಪ್ನವಾಗಿದೆ. ಎಂತೆಂಥವರಿಗೂ ಮರೆಯಲಾಗದ ಪಾಠ ಕಲಿಸಿದ ಈ ದೇಶದ ಜನ ಈ ಸ್ವಪ್ನಕೋರ ಪಿಂಡಾರಿಗಳಿಗೂ ತಕ್ಕ ಪಾಠ ಕಲಿಸಲಿದ್ದಾರೆ. ಸಮಾಜವನ್ನು ಒಡೆದು ಜಾತಿಧರ್ಮಗಳ ಧ್ರುಕರಣದ ಮೂಲಕ ಅಧಿಕಾರಕ್ಕೆ ಬರಲು ಹೊರಟ ಮೋದಿ ಮತ್ತು ಅವರ ನಾಜಿ ಪರಿವಾರಕ್ಕೆ ಅದೇ ಧ್ರುಕರಣವೇ ತಿರುಗು ಬಾಣವಾಗಲಿದೆ.
ಕಳೆದ ಐದು ವರ್ಷಗಳಲ್ಲಿ ಕೇಂದ್ರದ ಯುಪಿಎ ಸರಕಾರದ ನೇತೃತ್ವ ವಹಿಸಿದ ಕಾಂಗ್ರೆಸ್ ಎಷ್ಟೇ ಹಗರಣಗಳನ್ನು ಮಾಡಿರಬಹುದು.ಆದರೆ ಸುಡುತ್ತಿರುವ ಒಲೆಯ ಮೇಲಿನ ಪಾತ್ರೆಯಲ್ಲಿ (ತೆವೆ) ಬಿದ್ದು ಒದ್ದಾಡುತ್ತಿರುವ ಜನರು ಉರಿಯುತ್ತಿರುವ ಒಲೆಗೆ ಹಾರಿ ಸುಟ್ಟು ಬೂದಿಯಾಗಲು ಬಯಸುವುದಿಲ್ಲ. ಇದ್ದುದರಲ್ಲಿ ಅದಕ್ಕಿಂತ ಇದೇ ವಾಸಿ ಎಂಬ ತೀರ್ಮಾನಕ್ಕೆ ಬರುತ್ತಾರೆ. ಯಾಕೆಂದರೆ ಕಾಂಗ್ರೆಸ್ ಮತ್ತು ಸಂಘಪರಿವಾರ ಬಿಟ್ಟರೆ ಬೇರೆ ಪರ್ಯಾಯ ಜನತೆಗೆ ಕಾಣುತ್ತಿಲ್ಲ. ಎಡಪಕ್ಷಗಳು ಮುಂಚಿನ ಸಾಮರ್ಥ್ಯ ಕಳೆದು ಕೊಂಡಿವೆ.
ಇಂಥ ಸಂದರ್ಭಗಳಲ್ಲೆಲ್ಲ ಜ್ಯೋತಿಬಸು ಮತ್ತು ಸುರ್ಜಿತ ಪದೇ ಪದೇ ನೆನಪಿಗೆ ಬರುತ್ತಾರೆ. ತೊಂಬತ್ತರ ದಶಕದಲ್ಲಿ ಇಂಥದೇ ಸನ್ನಿವೇಶ ನಿರ್ಮಾಣವಾದಾಗ ಮೂರನೆಯ ರಂಗ ಕಟ್ಟಿ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದವರು ಈ ಬಸು ಮತ್ತು ಸುರ್ಜಿತ.ರಾಜಕೀಯದಲ್ಲಿ ಇಂಥವರನ್ನು ಮುತ್ಸದ್ದಿಗಳೆಂದು ಕರೆಯುತ್ತಾರೆ. ಜನರೇ ಚರಿತ್ರೆಯನ್ನು ನಿರ್ಮಿಸಿದರೂ ಇಂಥ ಮುತ್ಸದ್ದಿಗಳ ಪಾತ್ರವೂ ಮುಖ್ಯವಾಗಿರುತ್ತದೆ. ಆದರೆ ಅಂಥ ಮುತ್ಸದ್ದಿಗಳ ಈಗ ಎಲ್ಲಿದ್ದಾರೆ. varthabharati
0 comments:
Post a Comment