PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆ ಮಹತ್ವದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಪ್ರತಿಯೊಂದು ತಾಲೂಕು, ಗ್ರಾಮಗಳಿಗೂ ತನ್ನದೇ ಆದ ಇತಿಹಾಸ ಇದೆ.  ಶಿಕ್ಷಕರು ಸ್ಮಾರಕಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಶಿಕ್ಷಕರಿಗೆ ಕರೆ ನೀಡಿದರು.
  ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲ ಸಿಆರ್‌ಪಿ, ಬಿಆರ್‌ಸಿ, ಸಂಯೋಜಕರು ಹಾಗೂ ದೈಹಿಕ ಶಿಕ್ಷಕರಿಗೆ ಪರಿಸರ ಮತ್ತು ಸ್ಮಾರಕಗಳ ಉಳಿವಿಗಾಗಿ ಶೈಕ್ಷಣಿಕ ಅಧ್ಯಯನ ಚಾರಣ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.



  ಶಿಕ್ಷಕರು ಪ್ರತಿ ನಿತ್ಯ ಕೇವಲ ಪಠ್ಯಪುಸ್ತಕಗಳ ಬೋಧನೆ ನಡೆಸುವುದರ ಜೊತೆಗೆ, ತಿಂಗಳಿಗೊಮ್ಮೆ, ಪ್ರಕೃತಿ ಅಧ್ಯಯನ, ಸ್ಥಳ ಮಹತ್ವ, ಪ್ರವಾಸಿ ತಾಣಗಳು, ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳಿಗೆ ಚಾರಣ ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಬಹಳಷ್ಟು ವಿಷಯಗಳನ್ನು ತಿಳಿಸುವುದರಿಂದ, ಮಕ್ಕಳಿಗೆ ಇಂತಹ ಸಂಗತಿಗಳು ಮನದಟ್ಟಾಗುವುದಲ್ಲದೆ, ಮಾನಸಿಕ ಮತ್ತು ಬೌದ್ಧಿಕ ಸದೃಢತೆಗೆ ಸಹಕಾರಿಯಾಗಲಿದೆ.  ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ.  ದಿನನಿತ್ಯದ ಜಂಜಾಟದ ನಡುವೆ, ಪ್ರಕೃತಿಯ ಸೊಬಗಿನಲ್ಲಿ ವಿದ್ಯಾರ್ಥಿಗಳೊಂದಿಗೆ ವಿಹರಿಸಿದಲ್ಲಿ, ಪ್ರಕೃತಿಯಲ್ಲಿ ಅಡಗಿರುವ ಅನೇಕ ವಿಷಯಗಳು, ಸಸ್ಯ ಪ್ರಬೇಧಗಳು, ಐತಿಹಾಸಿಕ ಮಹತ್ವಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು ಸೂಕ್ತವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಕೃಷ್ಣ ಉದಪುಡಿ ಅವರು ಹೇಳಿದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆ ಅಶೋಕ ಚಕ್ರವರ್ತಿಯ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ ಸೇರಿದಂತೆ ಮಹತ್ವದ ಇತಿಹಾಸವನ್ನು ಕಾಲಗರ್ಭದಲ್ಲಿ ಇರಿಸಿಕೊಂಡಿದೆ.  ಕೊಪ್ಪಳ ನಗರದಲ್ಲಿಯೇ ಅಶೋಕನ ಶಿಲಾಶಾಸನ, ಕೊಪ್ಪಳದ ಕೋಟೆ ಮುಂತಾದ ಮಹತ್ವಪೂರ್ಣ ಐತಿಹಾಸಿಕ ತಾಣಗಳನ್ನು ಹೊಂದಿದೆ.  ಇದಲ್ಲದೆ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳಲ್ಲಿಯೂ ಸಹ ಅನೇಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳಗಳಿವೆ.  ಶಿಕ್ಷಕರು, ತಮ್ಮ ಪ್ರದೇಶ ವ್ಯಾಪ್ತಿಯಲ್ಲಿನ ಮಹತ್ವಪೂರ್ಣ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಆಗಾಗ್ಗೆ ಹೊರಸಂಚಾರದಂತಹ ಕಾರ್ಯಕ್ರಮ ಏರ್ಪಡಿಸಿಕೊಂಡು, ಕರೆದುಕೊಂಡು ಹೋಗಿ, ಅಲ್ಲಿನ ಹಿನ್ನೆಲೆಯನ್ನು ತಿಳಿಸಿಕೊಟ್ಟಲ್ಲಿ, ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಲಿದೆ.  ಅಲ್ಲದೆ ಅಂತಹ ಮಹತ್ವಪೂರ್ಣ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರಿಂದ, ಅವು ಹಾಳಾಗದಂತೆ, ಮುಂದಿನ ಪೀಳಿಗೆಗೂ ಉಳಿಯುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಪರಿಣಾಮಕಾರಿಯಾಗಲಿದೆ ಎಂದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  ಕಾರ್ಯಕ್ರಮದ ಅಂಗವಾಗಿ ಕೊಪ್ಪಳದಲ್ಲಿನ ಅಶೋಕನ ಶಿಲಾಶಾಸನವಿರುವ ಗುಡ್ಡದಲ್ಲಿ ಜಿಲ್ಲೆಯ ಎಲ್ಲ ಸಿಆರ್‌ಪಿ, ಬಿಆರ್‌ಸಿ, ಸಂಯೋಜಕರು ಹಾಗೂ ದೈಹಿಕ ಶಿಕ್ಷಕರೂ ಸೇರಿದಂತೆ ನೂರಕ್ಕೂ ಹೆಚ್ಚು ಜನ ಚಾರಣ ನಡೆಸಿದರು.

Advertisement

0 comments:

Post a Comment

 
Top