PLEASE LOGIN TO KANNADANET.COM FOR REGULAR NEWS-UPDATES

        ಕೊಪ್ಪಳ : ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಅಽಕಾರ ಸ್ವೀಕರಿಸಿದಾಗಿನಿಂದ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ತಂಗಡಗಿ ಬೆಂಬಲಿಗರ ಉಪಟಳ ವಿಪರೀತವಾಗಿದೆ ಎಂದು ಕೆಜೆಪಿ ಪಕ್ಷದ ಜಿಲ್ಲಾ ಸಂಚಾಲಕ ಬಸವರಾಜ ದಡೇಸೂಗೂರು ಆರೋಪಿಸಿದರು.
         ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಶಿವರಾಜ ತಂಗಡಗಿಯವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಿರದ ಸಂಗತಿಯೇನಲ್ಲ. ಈಗ ಅವರ ಬೆಂಬಲಿಗರ ದಬ್ಬಾಳಿಕೆ ಜಿಲ್ಲೆಯಲ್ಲಿ ಜೋರಾಗತೊಡಗಿದೆ. ಜಿಲ್ಲೆಯ ಹುಲಿಹೈದರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಅವರ ಅಧಿಕಾರದ ಮದವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
            ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ತಿಂಗಳುಗಳೇ ಉರುಳಿ ಹೋಗಿವೆ. ಶಿವರಾಜ ತಂಗಡಗಿಯವರು ಸಚಿವರಾದ ಮೇಲೆ ವಿಜಯೋತ್ಸವದ ನೆಪದಲ್ಲಿ ಅವರ ಬೆಂಬಲಿಗರು ಸೂಳೆಕಲ್‌ನಲ್ಲಿ ಕೆಜೆಪಿ ಕಾರ್ಯಕರ್ತರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ನಾವು ಸೋಲಿನಿಂದ ಹತಾಶರಾಗಿಲ್ಲ. ತಾಳ್ಮೆಯಿಂದಲೇ ಅವರ ಆಡಳಿತ ವೈಖರಿ ಗಮನಿಸುತ್ತೇವೆ ಎಂದರು.
             ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಚಿವರ ಆದ್ಯತೆ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಇರಬೇಕೇ ಹೊರತು ಸೇಡಿನ ರಾಜಕಾರಣದಲ್ಲಿ ಇರಬಾರದು, ಜನ ಈ ಬಾರಿ ಅವರನ್ನು ಆಶೀರ್ವದಿಸಿದ್ದಾರೆ. ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವೂ ಇರುತ್ತದೆ. ಅಭಿವೃದ್ಧಿಯ ಕಡೆಗೆ ಗಮನ ಹರಿಸದಿದ್ದರೆ ಶೀಘ್ರವೇ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ಜಿಲ್ಲೆಯ ಜನರಿಗೆ ಬೇಸರ ತಂದಿರುವ ಸಚಿವ ತಂಗಡಗಿ ಜಿಲ್ಲೆಯ ಪ್ರಗತಿ ಕಾರ್ಯಗಳ ಕಡೆಗೆ ಗಮನ ಹರಿಸಲಿ, ಇಲ್ಲದಿದ್ದರೆ ಇದುವರೆಗೂ ಸಹನೆಯಿಂದ ಕೆಜೆಪಿ ಪಕ್ಷದ ಕಾರ್ಯಕರ್ತರು ಸಚಿವರ ಕಾರ್ಯವೈಖರಿ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮಗೆ ಪಕ್ಷಕ್ಕಿಂತ ಯಡಿಯೂರಪ್ಪ ಮುಖ್ಯ :
             ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆದುಕೊಳ್ಳಲು ಒತ್ತಡ ಹೆಚ್ಚುತ್ತಿದೆ. ಯಡಿಯೂರಪ್ಪನವರು ಬಿಜೆಪಿ ಸೇರಿದರೆ ನಾವೂ ಅವರನ್ನು ಹಿಂಬಾಲಿಸುತ್ತೇವೆ. ಅವರು ಕೆಜೆಪಿಯನ್ನೇ ಕಟ್ಟಿದರೆ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗುತ್ತೇವೆ. ನಮಗೆ ಪಕ್ಷಕ್ಕಿಂತ ಯಡಿಯೂರಪ್ಪನವರು ಮುಖ್ಯ ಎಂದು ಬಸವರಾಜ ದಡೇಸೂಗೂರು ಹೇಳಿದರು.
               ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಮುಖಂಡರಾದ ಬೂದಿ ಗಿರಿಯಪ್ಪ, ಬಾಲಪ್ಪ ಹೂಗಾರ, ಯಮನೂರಪ್ಪ, ಬಸವರಾಜ ಬೇಲೂರು, ಗುಡದನಗೌಡ, ಹೊನ್ನೂರಪ್ಪ ಮಡಿವಾಳರ ಮತ್ತಿತರರು ಇದ್ದರು.

Advertisement

0 comments:

Post a Comment

 
Top