PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯಲ್ಲಿ ಪೂರೈಕೆಯಾಗಿರುವ ಕೆಲವು ಕಂಪನಿಗಳ ಬಿತ್ತನೆ ಬೀಜ ಮತ್ತು ಗೊಬ್ಬರ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡು ಬಂದಿದ್ದು, ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಶಿವರಾಮಗೌಡ ಅವರು ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರಿಗೆ ಸೂಚನೆ ನೀಡಿದರು.
 ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಜಿಲ್ಲೆಯಲ್ಲಿ ರೈತರಿಗೆ ಪೂರೈಕೆಯಾಗಿರುವ ಕೆಲವು ಕಂಪನಿಗಳ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕಳಪೆ ಗುಣಮಟ್ಟದ್ದು ಎಂಬುದಾಗಿ ಸಾಬೀತಾಗಿದೆ.  ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಬಳಸಿರುವ ರೈತರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ.  ನಷ್ಟಕ್ಕೆ ಒಳಗಾಗಿರುವ ರೈತರ ಸಮಗ್ರ ಮಾಹಿತಿ ಸಂಗ್ರಹಿಸಿ, ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಸಂಸದ ಶಿವರಾಮಗೌಡ ಅವರು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು, ಜಿಲ್ಲೆಯಲ್ಲಿ ಒಟ್ಟು ೦೩ ಕಂಪನಿಗಳು ಗಂಗಾ ಕಾವೇರಿ, ಕಾಂಚನಗಂಗಾ ಹಾಗೂ ಶಕ್ತಿ ಸೀಡ್ಸ್ ಕಂಪನಿಗಳು ಪೂರೈಸಿರುವ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗಿದ್ದು, ಕಳಪೆ ಎಂದು ಕಂಡುಬಂದಿದೆ.  ಇಂತಹ ಬಿತ್ತನೆ ಬೀಜದ ಲಾಟ್‌ನಂಬರ್‌ನ ಮಾಹಿತಿ ಸಂಗ್ರಹಿಸಿ, ಮಾರಾಟವನ್ನು ಹಿಂಪಡೆಯುವಂತೆ ಈಗಾಗಲೆ ಸೂಚನೆ ನೀಡಲಾಗಿದೆ.  ಅಲ್ಲದೆ ಬೀಜ ಅಧಿನಿಯಮದ ಪ್ರಕಾರ ಕಂಪನಿಗಳಿಗೆ ಕಳಪೆ ಗುಣಮಟ್ಟದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.  ಅಲ್ಲದೆ ಗೊಬ್ಬರಗಳಲ್ಲೂ ಸಹ ನಾಗಾರ್ಜುನ ಕಂಪನಿ ಮತ್ತು ಇಫ್ಕೋ ಕಂಪನಿಗಳಿಂದ ಪೂರೈಕೆಯಾಗಿರುವ ಡಿಎಪಿ ಮತ್ತು ಕಾಂಪ್ಲೆಕ್ಸ್ ಗೊಬ್ಬರ ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ವರದಿ ಬಂದಿದ್ದು, ಸಂಬಂಧಪಟ್ಟ ಕಂಪನಿಗಳಿಂದ ಹೇಳಿಕೆಯನ್ನು ಪಡೆದುಕೊಂಡು, ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.  ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಶೇ. ೭೫ ರಷ್ಟು ರಸಗೊಬ್ಬರವನ್ನು ಸಹಕಾರ ಸಂಘಗಳ ಮೂಲಕ ಹಾಗೂ ಶೇ. ೨೫ ರಷ್ಟು ಮಾತ್ರ ಖಾಸಗಿ ಅಂಗಡಿಗಳ ಮೂಲಕ ಮಾರಾಟ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.  ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕೈಗೊಂಡು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ತಾಯಿ ಮರಣ ಹೆಚ್ಚಳಕ್ಕೆ ಕಳವಳ : ಜಿಲ್ಲೆಯಲ್ಲಿ ೨೦೧೩ ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಒಟ್ಟು ೦೮ ತಾಯಿ ಮರಣ ಪ್ರಕರಣ ವರದಿಯಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ.  ತಾಯಿ ಮರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾರಣವನ್ನು ಪರಿಶೀಲಿಸಿ, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.  ಬಹಳಷ್ಟು ತಾಯಿ ಮರಣ ಪ್ರಕರಣಗಳಲ್ಲಿ ಮನೆಗಳಲ್ಲಿ ಹೆರಿಗೆ ಮಾಡಿಸುವುದು ಮತ್ತು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮರಣ ಸಂಭವಿಸುತ್ತಿರುವುದು ಕಂಡುಬಂದಿದೆ.  ಆದ್ದರಿಂದ ಜಿಲ್ಲೆಯಲ್ಲಿ ೧೦೮ ಆಂಬುಲೆನ್ಸ್ ಸೇವೆಯ ಗುಣಮಟ್ಟವನ್ನು ಉತ್ತಮಪಡಿಸಬೇಕಾಗಿದೆ.  ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಾಗದೇ ಇರುವುದು ಸಹ ಕಾರಣಗಳಲ್ಲೊಂದಾಗಿದೆ.  ಅಲ್ಲದೆ ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಇದೊಂದು ಬಗೆಹರಿಸಲಾಗದ ಸಮಸ್ಯೆಯಾಗಿಯೇ ಉಳಿದುಕೊಂಡಿದೆ ಎಂದು ಸಂಸದ ಶಿವರಾಮಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆ.ಜಿಗೆ ೧ ರೂ. ದರದಲ್ಲಿ ೩೦ ಕೆ.ಜಿ. ಅಕ್ಕಿಯನ್ನು ವಿತರಿಸುವ ಅನ್ನಭಾಗ್ಯ ಯೋಜನೆಯ ಬಗ್ಗೆ ನ್ಯಾಯಬೆಲೆ ಅಂಗಡಿಯವರು ಹೆಚ್ಚಿನ ದರ ವಸೂಲು ಮಾಡುತ್ತಿರುವುದು, ಕಡಿಮೆ ತೂಕ ನೀಡುತ್ತಿರುವ ಕುರಿತು ವಜ್ರಬಂಡಿ, ಜಬ್ಬಲಗುಡ್ಡ, ಇಟಗಿ ಸೇರಿದಂತೆ ಬಹಳಷ್ಟು ಕಡೆಗಳಿಂದ ದೂರುಗಳು ಕೇಳಿಬರುತ್ತಿವೆ.  ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ನಿಯಮಿತವಾಗಿ ಮತ್ತು ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿ, ಹೆಚ್ಚಿನ ದರ ಸಂಗ್ರಹಿಸುತ್ತಿರುವ ಮತ್ತು ಕಡಿಮೆ ತೂಕ ನೀಡುತ್ತಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ, ವರದಿ ನೀಡಿದಲ್ಲಿ, ಅಂತಹ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.  ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ಅವರಿಗೆ ಜಿಲ್ಲಾಧಿಕಾರಿ ಮೋಹನ್‌ರಾಜ್ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪ್ರಗತಿಯ ವರದಿ ಸಲ್ಲಿಸಿದರು.

Advertisement

0 comments:

Post a Comment

 
Top