ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರತಿ ಕೆ.ಜಿ.ಗೆ ೧ ರೂ. ನಂತೆ ೩೦ ಕೆ.ಜಿ. ಅಕ್ಕಿಯನ್ನು ನೀಡುವಂತಹ 'ಅನ್ನಭಾಗ್ಯ' ಯೋಜನೆಯು, ಬಡಜನರು ಸ್ವಾಭಿಮಾನದಿಂದ ಬದುಕನ್ನು ಸಾಗಿಸಲು, ವರದಾನವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಬಣ್ಣಿಸಿದರು.
ಕೊಪ್ಪಳ ನಗರದ ಶಾಸಕರ
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 'ಅನ್ನಭಾಗ್ಯ' ಯೋಜನೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸದ್ಯದ ಜೀವನ ವ್ಯವಸ್ಥೆಯಲ್ಲಿ ೧ ರೂ.ಗೆ ಒಂದು ಟೀ ಸಹ ಸಿಗದಂತಹ ದುಬಾರಿ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ೧ ರೂ.ಗೆ ೦೧ ಕೆ.ಜಿ. ಯಂತೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಗರಿಷ್ಠ ೩೦ ಕೆ.ಜಿ. ಅಕ್ಕಿ ನೀಡುವಂತಹ ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದ ೨೪ ಗಂಟೆಯಲ್ಲಿಯೇ ಈ ಯೋಜನೆಯನ್ನು ಘೋಷಿಸುವ ಮೂಲಕ ಸರ್ಕಾರ ಬಡವರ ಅಭ್ಯುದಯಕ್ಕೆ ಬದ್ಧವಾಗಿದೆ ಎಂಬುದನ್ನು ಸಾಬೀತುಗೊಳಿಸಿದೆ. ಬಡಜನರು ಮೂರು ಹೊತ್ತು ನಿಶ್ಚಿಂತೆಯಿಂದ ಹೊಟ್ಟೆತುಂಬ ಊಟ ಮಾಡಿ, ಯಾರ ಬಳಿಯೂ ಅನ್ನಕ್ಕಾಗಿ ಕೈಚಾಚದೆ ಸ್ವಾಭಿಮಾನದ ಬದುಕನ್ನು ಸಾಗಿಸಲು 'ಅನ್ನಭಾಗ್ಯ' ಯೋಜನೆ ವರದಾನವಾಗಲಿದೆ. ಕೊಪ್ಪಳ ಜಿಲ್ಲೆಯ ೧೮೭೨೯೨-ಬಿಪಿಎಲ್ ಮತ್ತು ೩೮೨೫೧-ಅಂತ್ಯೋದಯ ಸೇರಿದಂತೆ ಒಟ್ಟು ೨೨೫೫೪೩ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ. ಇದಕ್ಕಾಗಿ ಈಗಾಗಲೆ ಸಾಕಷ್ಟು ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಪ್ರತಿ ತಿಂಗಳು ಒಟ್ಟು ೬೪೯೧ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಸಾರ್ವಜನಿಕರು ಈ ಯೋಜನೆಯ ಲಾಭ ಪಡೆದು, ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಈ ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮವೆಸಗಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಯಾವುದೇ ಅಕ್ರಮ ಕಂಡುಬಂದಲ್ಲಿ ಅಂತಹ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಖಚಿತ ಎಂದರು.
ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ನೂತನ ಯೋಜನೆ ಹಮ್ಮಿಕೊಂಡಿದ್ದು, ಪ್ರತಿ ವಾರ್ಡ್‌ಗೆ ಒಂದು ಶುದ್ಧ ಕುಡಿಯುವ ನೀರು ಪೂರೈಸುವ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಕೊಪ್ಪಳ ನಗರದ ಜೆ.ಪಿ. ಮಾರುಕಟ್ಟೆಯನ್ನು ಆಧುನಿಕವಾಗಿ ನಿರ್ಮಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು, ಇದಕ್ಕಾಗಿ ಈಗಾಗಲೆ ೬. ೮೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಈ ಮಾರುಕಟ್ಟೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಸರ್ಕಾರ ದೂರದೃಷಿಯನ್ನಿಟ್ಟುಕೊಂಡು, ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಬಡವರ ಅಭ್ಯುದಯ, ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಕೊಪ್ಪಳ ನಗರದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಗರದ ಪ್ರಮುಖ ೦೫ ವೃತ್ತಗಳನ್ನು ಉತ್ತಮ ಮಾದರಿ ವೃತ್ತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಈರಪ್ಪ ಕುಡಗುಂಟಿ, ನಾಗನಗೌಡ ಪಾಟೀಲ್, ಗಂಗಣ್ಣ ಸಮಗಂಡಿ, ಸೀತಾ ಹಲಗೇರಿ, ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಮುಂತಾದವರು ಭಾಗವಹಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸ್ವಾಗತಿಸಿದರು. ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅನ್ನಭಾಗ್ಯ ಯೋಜನೆಯ ಉದ್ಘಾಟನೆ ಅಂಗವಾಗಿ ಫಲಾನುಭವಿಗಳಿಗೆ ಪ್ರತಿ ಕೆ.ಜಿ.ಗೆ ೧ ರೂ. ನಂತೆ ೩೦ ಕೆ.ಜಿ. ಅಕ್ಕಿಯನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಅಲ್ಲದೆ ನಗರಸಭೆಯ ೨೦೧೧-೧೨ ನೇ ಸಾಲಿನ ಎಸ್.ಎಫ್.ಸಿ. ಯೋಜನೆಯಡಿ ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೋವ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
0 comments:
Post a Comment