PLEASE LOGIN TO KANNADANET.COM FOR REGULAR NEWS-UPDATES


 ನಾವಿಂದು ಹಳೆಯ ಮನಸ್ಥಿತಿಯಲ್ಲೇ ಇದ್ದೇವೆ. ಇಲ್ಲಿ ಲಿಂಗಾಯತರು ಹಾಗೂ ಬ್ರಾಹ್ಮಣರು ತಮ್ಮ ಜಾತಿಗೊಂದು ಪ್ರತ್ಯೇಕ ಟೌನ್‌ಶಿಪ್ ನಿರ್ಮಿಸುತ್ತಿದ್ದರೂ ಅದನ್ನು ಸಹಜವೆಂಬಂತೆ ಸ್ವೀಕರಿಸಿ ಸುಮ್ಮನಿದ್ದೇವೆ. ಆದರೆ ನಾವು ಹಳೆಯ ಭಾರತವನ್ನಲ್ಲ, ಹೊಸ ಭಾರತವನ್ನು ಕಟ್ಟಬೇಕಾಗಿದೆ ಎಂದು ಪದ್ಮಶ್ರೀ, ನಾಡೋಜ ಪ್ರಶಸ್ತಿ ವಿಜೇತ ಕನ್ನಡದ ಖ್ಯಾತ ಸಾಹಿತಿ, ಚಿಂತಕ ದೇವನೂರು ಮಹಾದೇವ ಪ್ರತಿಪಾದಿಸಿದ್ದಾರೆ.ಉಡುಪಿಯ ಎಂಜಿಎಂ ಕಾಲೇಜು, ಎಂ.ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್‌ನ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನೆರೆದ ಸಾಹಿತ್ಯಪ್ರಿಯರು, ಅಭಿಮಾನಿ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ ಸುಮಾರು ಅರ್ಧಗಂಟೆಯ ಭಾಷಣದುದ್ದಕ್ಕೂ ಜಾತೀಯತೆ, ಜೀತಪದ್ಧತಿ, ಶೋಷಣೆ, ಅಸ್ಪಶ್ಯತೆಯನ್ನು ಕಟುವಾಗಿ ಟೀಕಿಸಿದ ದೇವನೂರು, ಬೆಂಗಳೂರು ಸಮೀಪ ಇತ್ತೀಚೆಗೆ ತಲೆ ಎತ್ತಲು ಯತ್ನಿಸುತ್ತಿರುವ ಲಿಂಗಾಯತರು ಮತ್ತು ಬ್ರಾಹ್ಮಣರಿಗೆ ಮಾತ್ರ ಮೀಸಲಾದ ಟೌನ್‌ಶಿಪ್ ನಿರ್ಮಾಣದ ಉದ್ದೇಶವನ್ನು ಅವರು ಖಂಡಿಸಿದರು. ಇವರು ಯಾವ ಕಾಲದಲ್ಲಿದ್ದಾರೆಂಬುದೇ ತಿಳಿಯುತ್ತಿಲ್ಲ.
ಇದರ ವಿರುದ್ಧ ಏನನ್ನೂ ಮಾಡದೇ ಸಹಜ ಎಂಬಂತೆ ನಾವು ಕುಂತಿದ್ದೀವಲ್ಲ, ನಮಗೇನಾಗಿದೆ ಎಂದು ಪ್ರಶ್ನಿಸಿದ ದೇವನೂರು, ಯಾರ ಜೀವಕ್ಕೂ ಅಪಾಯವಾಗದಂತೆ ಹೊಸ ಜಾಗಕ್ಕೆ ಬಾಂಬು ಹಾಕಬೇಕೆಂದು ನನಗೆ ಅನ್ನಿಸುತ್ತದೆ ಎಂದು ಸಿಟ್ಟು ಹಾಗೂ ನೋವಿನಿಂದ ನುಡಿದರು.ನಾವಿಂದು ಹಳೆಯ ಭಾರತವನ್ನಲ್ಲ, ಹೊಸ ಭಾರತವನ್ನು ಕಟ್ಟಬೇಕು. ಆದರೆ ಇದು ಕಷ್ಟದ ಕೆಲಸವೆಂಬುದು ನನಗೆ ಗೊತ್ತು. ಇದಕ್ಕೆ ನಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಿದೆ ಎಂದ ದೇವನೂರು, ಈವೇಳೆ ರಾಜ್ಯದ ನೂತನ ಸರಕಾರ ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿಯನ್ನು ಬಡವರಿಗೆ ನೀಡುವ ಸಂಬಂಧ ಕೇಳಿಬಂದ ಅಪಸ್ವರದ ಧ್ವನಿಯನ್ನು ಪ್ರಸ್ತಾಪಿಸಿದರು.
ಜೀತ ಮಾಲಕನ ಮನಸ್ಥಿತಿ: ಒಂದು ರೂ.ಗೆ ಒಂದು ಕೆ.ಜಿ.ಅಕ್ಕಿಯನ್ನು ಕೊಟ್ಟರೆ ಬಡವ ಸೋಮಾರಿಯಾಗುತ್ತಾನೆ. ಕೂಲಿಗೆ ಜನ ಸಿಗೋದಿಲ್ಲ ಎಂದು ಮಧ್ಯಮ ವರ್ಗ ಸೇರಿದಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಇವರು ಬಳಸುವ ಗ್ಯಾಸ್‌ಗೆ ಸಿಗುವ 400ರಿಂದ 500 ರೂ. ಸಬ್ಸಿಡಿ ಬಗ್ಗೆ, ಇವರ ವಾಹನಕ್ಕೆ ಬಳಸುವ ಪೆಟ್ರೋಲಿಗೆ 1,000ರೂ.ವರೆಗೆ ಸಬ್ಸಿಡಿ ಪಡೆಯಲು ಕಿಂಚಿತ್ತೂ ಅಳುಕು ತೋರಿಸದ ಇವರು, ಹೊಟ್ಟೆಗೆ ಇಲ್ಲದ ಬಡವನಿಗೆ ತುತ್ತು ನೀಡಿದರೆ ಟೀಕಿಸುತ್ತಾರೆ ಎಂದರು.
ಇದು ನಮ್ಮ ಸಮಾಜದ ಜೀತದ ಮಾಲಕನ ಮನಸ್ಥಿತಿಯನ್ನು ತೋರಿಸುತ್ತದೆ. ಬಡವ ಅಥವಾ ದಲಿತ ಜೀತಪದ್ಧತಿಯನ್ನು ಬಿಟ್ಟು ಹೋಗುತ್ತಾನೆ ಎಂಬ ಹೆದರಿಕೆ ಇವರಿಗಿದೆ. ಇವರು ಜೀತದ ಮಾಲಕನ ಮನಸ್ಥಿತಿಯಿಂದ ಇನ್ನೂ ಬಿಡುಗಡೆ ಪಡೆದಿಲ್ಲ. ಬಡವನಲ್ಲಿ ಇವರು ಈಗಲೂ ದೈನ್ಯತೆಯನ್ನು ಅಪೇಕ್ಷಿಸುತ್ತಾರೆ ಹಾಗೂ ಕೂಲಿಕಾರ್ಮಿಕನಲ್ಲಿ ಬೇರೆ ಆಯ್ಕೆಗಳಿರ ಬಾರದು ಎಂದು ನಿರೀಕ್ಷಿಸುತ್ತಾರೆ ಎಂದು ದೇವನೂರು ಕಟುವಾಗಿ ನುಡಿದರು.
ಮೀಸಲಾತಿ, ಪ್ರತಿಭೆ: ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸುವವರು, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಪ್ರತಿಭೆ ಯೊಂದಕ್ಕೆ ಮಾತ್ರ ಆದ್ಯತೆ ನೀಡಬೇಕು ಎಂದು ವಾದಿಸುತ್ತಾರೆ. ಆದರೆ ಪ್ರತಿಭೆಗೆ ಮಾತ್ರ ಮಾನ್ಯತೆ ಎಂದು ಹೇಳುವವರ್ಯಾರು ಸಹ ಡೊನೇಷನ್ ಬಗ್ಗೆ ಚಕಾರ ಎತ್ತುವುದಿಲ್ಲ. ಅಂದರೆ ಇವರ ಮಟ್ಟಿಗೆ ದುಡ್ಡು ಸಹ ಪ್ರತಿಭೆಯೇ ಎಂದು ದೇವನೂರು ವ್ಯಂಗ್ಯವಾಡಿದರು.
ಮೀಸಲಾತಿಯನ್ನು ಕಟುವಾಗಿ ವಿರೋಧಿಸಿ, ನಮ್ಮಲ್ಲಿ ಪ್ರತಿಭೆಗೆ ಮಾತ್ರ ಮನ್ನಣೆ ಎಂದು ಸಾರುವ ಇನ್ಫೋಸಿಸ್, ವಿಪ್ರೋ, ರಿಲಯನ್ಸ್‌ಗಳಂಥ ಬೃಹತ್ ಸಂಸ್ಥೆಗಳು ಹೇಗೆ ಮೇಲ್ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪ್ರತಿಭೆಯುಳ್ಳ ಹಿಂದುಳಿದ, ದಲಿತ, ಹಾಗೂ ಮುಸ್ಲಿಂ ಅಭ್ಯರ್ಥಿಗಳನ್ನು ತಿರಸ್ಕರಿಸುತ್ತವೆ ಎಂಬುದು 5-6 ವರ್ಷಗಳ ಹಿಂದೆ ಯುಜಿಸಿಯ ಅಂದಿನ ಯುಪಿಎಸ್‌ಸಿ ಅಧ್ಯಕ್ಷ ಸುಖದೇವ್ ತೋರಾಟ್ ನೇತೃತ್ವದಲ್ಲಿ ನಡೆಸಿದ ಕುಟುಕು ಕಾರ್ಯಾಚರಣೆ (ಸ್ಟ್ರಿಂಗ್ ಆಪರೇಷನ್) ಬಹಿರಂಗಪಡಿಸಿತ್ತು ಎಂದವರು ಹೇಳಿದರು.

ಈ ಕಾರ್ಯಾಚರಣೆಯ ವೇಳೆ ಮೇಲ್ವರ್ಗದಿಂದ ಅರ್ಜಿ ಹಾಕಿದ ಎಲ್ಲರಿಗೂ ಸಂದರ್ಶನಕ್ಕೆ ಕರೆ ಬಂದರೆ, ಹಿಂದುಳಿದ ವರ್ಗದ ಶೇ.70, ದಲಿತರ ಶೇ.20 ಹಾಗೂ ಮುಸ್ಲಿಂನ ಶೇ.10ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನಕ್ಕೆ ಕರೆ ಬಂದಿತ್ತು. ಇದು ನಮ್ಮಲ್ಲಿ ಸ್ವಭಾವತ ಜಾತಿ ಇದೆ ಎಂಬುದಕ್ಕೆ ಉದಾಹರಣೆ ಎಂದರು. ಬಳಿಕ ದೇವನೂರು, ಸಾಹಿತ್ಯಾಭಿಮಾನಿಗಳಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಹಾಲಾ ನಾಯಕ್ ಅವರು ದೇವನೂರು ಅವರಿಗೆ ವಿ.ಎಂ. ಇನಾಂದಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಅಭಿನವ ಪ್ರಕಾಶನ ಹೊರತಂದ ‘ಎದೆಗೆ ಬಿದ್ದ ಅಕ್ಷರ’ದ 8ನೆ ಮುದ್ರಣವನ್ನು ಹಾಲಾ ನಾಯಕ್ ಬಿಡುಗಡೆಗೊಳಿಸಿದರು.ಅಂಕಣಕಾರ ಹಾಗೂ ಲೇಖಕ ಡಾ.ಬಿ.ಭಾಸ್ಕರ ರಾವ್ ಹಾಗೂ ಅಭಿನವ ಪ್ರಕಾಶನದ ರವಿ ಉಪಸ್ಥಿತರಿದ್ದರು. ಡಾ.ಪು.ತಿ.ವಸಂತ್ ಸ್ವಾಗತಿಸಿ, ವಂದಿಸಿದರು. ಪ್ರೊ.ಹೆರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ದೇವನೂರು ಹೇಳಿದ ಗೂಬೆ ಕತೆ
ತಮ್ಮ ಮಾತಿನ ನಡುವೆ ದೇವನೂರು, ನಮ್ಮವರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಗೂಬೆಯ ಕತೆಯೊಂದನ್ನು ಹೇಳಿದರು. ಕೃಷಿಕರಾದ ದೇವನೂರು ಒಮ್ಮೆ, ಮನೆಯಲ್ಲಿ ತೆಂಗಿನಗಿಡ ನೆಡಲು, ಒಳ್ಳೆಯ ಸಸಿ ಸಿಗುವ ಖ್ಯಾತ ಕತೆಗಾರ ದಿ.ಕೃಷ್ಣ ಆಲನಹಳ್ಳಿಯವರ ಅತ್ತಿಗೆಯವರ ಚೆನ್ನರಾಯಪಟ್ಟಣದ ಮನೆಗೆ ಹೋಗಿದ್ದರಂತೆ. ಅವರು ಹೋಗುವ ಸಮಯಕ್ಕೆ ಸರಿಯಾಗಿ ಆ ಮನೆಗೊಂದು ಗೂಬೆ ನುಗ್ಗಿತ್ತಂತೆ. ಮನೆಯವರು ಗೋಳೊ ಎಂದು ಅಳತೊಡಗಿದ್ದರು. ‘ನಾನು ಮನೆಗೆ ಕಾಲಿಡುವ ವೇಳೆಯೇ ಗೂಬೆ ನುಗ್ಗಬೇಕೇ. ನನಗೆ ಕಸಿವಿಸಿ ಎನಿಸತೊಡಗಿತು’ ಎಂದ ದೇವನೂರು, ಅತ್ತಿಗೆ ಅಳುತ್ತಾ ಪಕ್ಕದಲ್ಲಿದ್ದ ತನ್ನ ಸಂಬಂಧಿಯ ಮನೆಗೆ ತೆರಳಿದರು. ಸ್ವಲ್ಪವೇ ಹೊತ್ತಿನಲ್ಲಿ ಅವರು ನಗುತ್ತಾ ಮರಳಿ ಬಂದರು. ಇದರಿಂದ ನನಗೆ ಆಶ್ಚರ್ಯವಾಯಿತು. ವಿಷಯ ಏನೆಂದು ಪ್ರಶ್ನಿಸಿದರೆ, ಆ ಸಂಬಂಧಿಯ ಮನೆಗೂ ಗೂಬೆ ನುಗ್ಗಿತ್ತಂತೆ ಎಂದರು.

Advertisement

0 comments:

Post a Comment

 
Top