ಕೊಪ್ಪಳ, ಜು.೫. ಕೊಪ್ಪಳದಿಂದ ವರ್ಗವಾದ ಡಿಸಿ ತುಳಸಿ ಮದ್ದಿನೇನಿ ವಿರುದ್ಧ ತನಿಖೆಗೆ ಒತ್ತಾಯಿಸಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಸಾಹಿತ್ಯ ಭವನದ ಮುಂದೆ ಸೇರಿದ ನೂರಾರು ಜನರು ಅಲ್ಲಿಂದ ತಹಶೀಲ್ದಾರ ಕಛೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಅನಾವಶ್ಯಕವಾಗಿ ಗೂಬೆ ಕೂರಿಸುತ್ತಿರುವದರ ವಿರುದ್ಧ ಹಾಗೂ ಅನಾವಶ್ಯಕವಾಗಿ ಒಬ್ಬ ದಲಿತ ನಾಯಕನ ಕುರಿತು ಅಪಪ್ರಚಾರ ಮಾಡಿ ಪರಿಶ್ರಮದಿಂದ ಬಂದಿರುವ ಅಧಿಕಾರವನ್ನು ಕಿತ್ತುಕೊಳ್ಳುವ ಕುತಂತ್ರಕ್ಕೆ ಕಡಿವಾಣ ಹಾಕಲು ಹಾಗೂ ಜಾತಿ ಪ್ರೀತಿ, ಭಾಷೆ ಹಾಗೂ ಆಂಧ್ರ ಲಾಬಿಯಿಂದ ೨ ವರ್ಷ ಜಿಲ್ಲೆಯನ್ನು ಲೂಟಿ ಮಾಡಿದ ತುಳಸಿ ಮದ್ದಿನೇನಿ ವಿರುದ್ಧ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದರು.
ಹಿಂದಿನ ಜಿಲ್ಲಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ೨ ವರ್ಷದ ಅವಧಿಯಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳ ತನಿಖೆಯನ್ನು ಮಾಡಬೇಕು ಹಾಗೂ ಲೋಕಾಯುಕ್ತಕ್ಕೆ ತನಿಖೆ ಆಗಬೇಕು. ಜಿಲ್ಲಾಧಿಕಾರಿಗಳೆ ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರ ಅರೆ ಸರಕಾರಿ ಸಂಸ್ಥೆಯಾಗಿದ್ದು ಅದು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವದಾಗಿದೆ. ಆದರೆ ಇಲ್ಲಿ ಕೊಟ್ಯಂತರ ರೂಪಾಯಿ ಕಾಮಗಾರಿಗಳನ್ನು ನಿಯಮಬಾಹೀರವಾಗಿ ಮಾಡಲಾಗಿದೆ. ಇಲ್ಲಿ ಟೆಂಡರ್ ಪ್ರಕ್ರಿಯೆಗಳು ಇರುವದಿಲ್ಲ, ತಾವೇ ಕಾಮಗಾರಿ ಗುತ್ತಿಗೆ ನೀಡುವವರು, ತಾವೇ ಕಾಮಗಾರಿ ಮಾಡುವವರು, ತಾವೇ ಪರಿಶೀಲಿಸಿ ಬಿಲ್ ಪಾಸ್ ಮಾಡುತ್ತಾರೆ. ಇಲ್ಲಿ ಪಾರದರ್ಶಕತೆಯ ಮೇಲ್ನೋಟಕ್ಕೆ ಇಲ್ಲವೆಂದು ಸಾಬೀತಾಗುತ್ತದೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅವರ ಅವಧಿಯಲ್ಲಿ ಮಾಡಿರುವ ಪ್ರಮುಖ ಕಾಮಗಾರಿಗಳಾದ ಹೆದ್ದಾರೆ ೬೩, ಅದರ ಪಕ್ಕದ ಚರಂಡಿ ಮತ್ತು ನಗರಸಭೆಯ ಯುಜಿಡಿ ಕಾಮಗಾರಿ, ಆಶ್ರಯ ಮನೆಗಳ ನಿರ್ಮಾಣ, ಜಿಲ್ಲಾ ಕ್ರೀಡಾಂಗಣ ನಿರ್ಮಾಣ, ಜಿಲ್ಲಾ ಸಾಂಸ್ಕೃತಿಕ ಭವನ, ವಾಲ್ಮೀಕಿ ಭವನ ಮುಂತಾದವುಗಳ ಕಾಮಗಾರಿ ಕಳಪೆಯಾಗಿದ್ದು ನುರಿತ ತಜ್ಞರಿಂದ ತನಿಖೆ ಮಾಡಿಸಬೇಕು, ಅದರ ವರದಿ ಆದಾರದಲ್ಲಿ ಕ್ರಮ ತೆಗೆದುಕೊಳ್ಳಬೇಕು.
ಜಿಲ್ಲಾಧಿಕಾರಿಗಳು ೨ ವರ್ಷದ ಅವಧಿಯಲ್ಲಿ ಸಹಿ ಮಾಡಿರುವ ಕಡತಗಳು, ಎನ್ ಎ ಗಳು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದ ಕಡತಗಳ ಪೂರ್ಣ ತನಿಖೆ ಮಾಡಿಸಬೇಕು. ಶ್ರೀಮತಿ ಮದ್ದಿನೇನಿ ಅವರ ಸಹೋದರಿ ಹೆಸರಲ್ಲಿ ಜಮಾಪುರ ಗ್ರಾಮ ಸಿದ್ದಾಪೂರ ಹೋಬಳಿಯಲ್ಲಿ ೮೦ ಎಕರೆ ಭೂಮಿ ಖರೀದಿ ಹಾಗೂ ಜಿಲ್ಲೆಯಲ್ಲಿ ಇತರೆ ಆಸ್ತಿಗಳ ಖರೀದಿಯ ಬಗ್ಗೆ ತನಿಖೆ ಮಾಡಬೇಕು.
ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಟ್ಟ ಹಣ (ಸಂಸದರ ನಿಧಿ, ಶಾಸಕರ ನಿಧಿ ಮತ್ತು ನಗರ ಸ್ಥಳಿಯ ಸಂಸ್ಥೆಗಳು) ವನ್ನು ನಿಯಮ ಬಾಹೀರವಾಗಿ ಬೇರೆ ಕಾಮಗಾರಿಗಳಿಗೆ ಬಳಸಿ, ಪರಿಶಿಷ್ಟರಿಗೆ ಮಾಡಿರುವ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮದ್ದಿನೇನಿಯವರ ಸ್ವಜನ ಪಕ್ಷಪಾತತನ, ಜಾತಿ ಮತ್ತು ಆಂಧ್ರ ಲಾಭಿಗೆ ಹೆಚ್ಚಿನ ಒತ್ತು ಕೊಟ್ಟಿರುವಂತೆ ಕಾಣುತ್ತದೆ ಗ್ರಾಮೀಣ ಪ್ರದೇಶ ತುಂಡು ಭೂಮಿಯ ಕುರಿತು ಮಾನ್ಯ ಶ್ರೀ ಶಿವರಾಜ ತಂಗಡಿಯವರ ಸಹೋದರರ ವಿರುದ್ಧ ಕ್ರಮ ತೆಗೆದುಕೊಳ್ಳುವ ನೆಪದಲ್ಲಿ ಅವರ ತೆಜೋವಧೆ ಮಾಡುತ್ತಿದ್ದಾರೆ. ಶ್ರೀ ನಾಗರಾಜ ತಂಗಡಗಿ ವಿರುದ್ಧ ಆರೋಪ ಮಾಡಿರುವ ರಾಮಮೋಹನ್ ಎಂಬ ವ್ಯಕ್ತಿ ಶ್ರೀಮತಿ ಮದ್ದಿನೇನಿಯವರ ಜಾತಿಗೆ ಸೇರಿದವರು ಎಂಬುದನ್ನು ಗಮನಿಸಬೇಕು. ಶ್ರೀಮತಿ ಮದ್ದಿನೇನಿರವರಿಗೆ ಸೇಡಿನ ಮನೋಭಾವ ಇರುವದರಿಂದ ಅವರು ಇಲ್ಲಿ ಇರುವವರೆಗೆ ಯಾರೂ ಅವರ ವಿರುದ್ಧ ಮಾತನಾಡುತ್ತಿರಲಿಲ್ಲ, ಸ್ವತಃ ಸಂಸದರು ಸಹ ಅವರು ವರ್ಗವಾದ ಮೇಲೆ ಅವರ ವಿರುದ್ಧ ಹೇಳಿಕೆ ನೀಡಿರುವದನ್ನು ಗಮನಿಸಬೇಕು. ಆದ್ದರಿಂದ ತುರ್ತಾಗಿ ಕ್ರಮ ತೆಗೆದುಕೊಳ್ಳಲು ಗೊಂಡಬಾಳ ಆಗ್ರಹಿಸಿದ್ದಾರೆ.
ಹೋರಾಟದಲ್ಲಿ ಅಜಮೀರ ಯಲಿಗಾರ, ಕನಕಪ್ಪ ಕನಕಗಿರಿ, ನಾಗರಾಜ ಕೊಪ್ಪಳ, ರಾಮು ಪೂಜಾರ, ಬಸವರಾಜ ದೇಸಾಯಿ, ವೀರೇಶ ಹುನಗುಂದ, ಈರಣ್ಣ ಇಟಗಿ, ಗಂಗಾಧರ ಗಂಗಾಮತ, ವೆಂಕಟೇಶ ಬ., ರಾಮರ್ಣಣ ವಡ್ಡರ, ಗೌಸಸಾಬ ಮೇಸ್ತ್ರಿ, ದುರುಗಪ್ಪ, ವಿರುಪಾಕ್ಷಪ್ಪ, ಶರಣಗೌಡ್ರ, ಹೊನ್ನೂರಸಾಬ, ಸದಾ ಸಮಗಂಡಿ, ರಾಜಾಸಾಬ ನಂದಾಪುರ, ಬಾಬಣ್ಣ, ರವಿಕೊರವರ ಭಜಂತ್ರಿ, ಸಿದ್ದುಸ್ವಾಮಿ ಇತರರು ಇದ್ದರು.
0 comments:
Post a Comment