PLEASE LOGIN TO KANNADANET.COM FOR REGULAR NEWS-UPDATES

   ಸಹಕಾರ ಚಳುವಳಿಯ ಜನಕ, ಸಹಕಾರಿ ರಂಗದ ಪಿತಾಮಹ ಸಿದ್ಧನಗೌಡ ಪಾಟೀಲರ ಹೆಸರಿನಲ್ಲಿ ಸಹಕಾರ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕಾದ ಅಗತ್ಯವಿದೆ ಎಂದು ಸಾಹಿತಿ, ಪತ್ರಕರ್ತ ಮಂಜುನಾಥ ಬೊಮ್ಮನಕಟ್ಟಿ ಅವರು ಹೇಳಿದ್ದಾರೆ.
ಕೊಪ್ಪಳ ನಗರದ ಗವಿಶ್ರೀನಗರದಲ್ಲಿರುವ ವರ್ತಕ ಶಿವಾನಂದ ಯಲ್ಲಮ್ಮನವರ ಮನೆಯಲ್ಲಿ ಕನಕ ಸಾಂಸ್ಕೃತಿಕ ಪರಿಷತ್ ಹಮ್ಮಿಕೊಂಡ

ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಸಹಕಾರ ರಂಗದ ಪಿತಾಮಹ ಸಿದ್ದನಗೌಡ ಪಾಟೀಲರು ಎಂಬ ವಿಷಯ ಕುರಿತು ಮಾತನಾಡಿದರು.
ಏಷ್ಯಾ ಖಂಡದಲ್ಲಿಯೇ ಮೊಟ್ಟ ಮೊದಲ ಸಹಕಾರ ಸಂಘವನ್ನು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ೧೯೦೫ ರಲ್ಲಿ ಸ್ಥಾಪಿಸಿದ ಸಿದ್ದನಗೌಡ ಪಾಟೀಲರು ಸಹಕಾರ ಚಳುವಳಿ ಜನಕರೆಂದೇ ಪ್ರಸಿದ್ದರಾಗಿದ್ದಾರೆ. ಹಾಲುಮತ ಧರ್ಮದ ಸಣ್ಣ ರಾಮನಗೌಡ ಮತ್ತು ನೀಲಮ್ಮ ದಂಪತಿಗಳ ಏಕಮಾತ್ರ ಪುತ್ತರನಾಗಿ ಜನಿಸಿದ ಸಿದ್ದನಗೌಡ ಪಾಟೀಲರು ಕಣಗಿನಹಾಳ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಸಿದ್ಧನಗೌಡರ ಪ್ರಯತ್ನದ ಫಲವಾಗಿ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಪ್ರಕಾರದ ಸಹಕಾರ ಸಂಘಗಳು ಸ್ಥಾಪನೆಗೊಂಡಿವೆ. ರೈತರಿಗೆ, ಕಾರ್ಮಿಕ ವರ್ಗದವರಿಗೆ, ಶ್ರಮಜೀವಿಗಳಿಗೆ ಆಶಾಕಿರಣವಾಗಿ ಅವರ ಜೀವನ ಉತ್ಸಾಹವನ್ನು ಸಹಕಾರ ಕ್ಷೇತ್ರ ಇಮ್ಮಡಿಗೊಳಿಸಿದೆ. ಸಹಕಾರ ತತ್ವದ ಮೇಲೆ ವಿಶ್ವಾಸವನ್ನಿಟ್ಟಿಕೊಂಡು ವ್ಯವಹರಿಸುವ ಪ್ರತಿಯೊಂದು ಸಂಘ ಸಂಸ್ಥೆ ಪದಾಧಿಕಾರಿಗಳು ಸಿದ್ಧನಗೌಡ ಪಾಟೀಲರನ್ನು ಸ್ಮರಿಸುವುದು ಅಗತ್ಯವಾಗಿದೆ. ಸಹಕಾರಿ ರಂಗದ ಪಿತಾಮಹ ಸಿದ್ಧನಗೌಡ ಪಾಟೀಲರ ಹೆಸರು ಜನಮನದಲ್ಲಿ ಶಾಶ್ವತವಾಗಿ ಉಳಿಯಲು, ಸಹಕಾರ ರಂಗಕ್ಕೆ ಚೇತನ ನೀಡಲು ಕಣಗಿನಹಾಳ ಗ್ರಾಮದಲ್ಲಿ ಹಾಳು ಬಿದ್ದ ಸಿದ್ಧನಗೌಡ ಪಾಟೀಲರ ಮನೆಯನ್ನು ಸರಕಾರ ಸಹಕಾರಿ ವಸ್ತು ಸಂಗ್ರಹಾಲಯ ಮತ್ತು ಸಿದ್ಧನಗೌಡರ ಹೆಸರಿನಲ್ಲಿ ಸಹಕಾರ ವಿಶ್ವವಿದ್ಯಾಲಯ ಸ್ಥಾಪಿಸುವಂತಾಗಬೇಕು ಎಂದು ಪರ್ತಕರ್ತ ಮಂಜುನಾಥ ಬೊಮ್ಮನಕಟ್ಟಿ ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮನುಷ್ಯ ಜಾತಿಯನ್ನು ಮೀರಿ ಬೆಳೆಯಬೇಕು. ಕಮಲವು ನೀರಿನಲ್ಲಿ ಇರುತ್ತದೆ. ಆದರೆ ಅದು ನೀರಿಗೆ ಅಂಟಿರುವುದಿಲ್ಲ. ನಾವು ಎಲ್ಲ ಜಾತಿಗಳ ಜನರ ಜೊತೆಯಲ್ಲಿ ಬೆರೆಯಬೇಕು. ಇದು ಉತ್ತಮ ಸಂಸ್ಕೃತಿಯ ಪಾಠ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಪಿಎಂಸಿಯ ಕಾರ್ಯದರ್ಶಿ ಶಂ.ನಿಂ. ತಿಮ್ಮನಗೌಡರು ಮಾತನಾಡಿ, ಎಲ್ಲ ಧರ್ಮಗಳ ತಿರುಳು ಒಂದೆ. ಸತ್ಯ ಮಾನವೀಯತೆ ಸಹಬಾಳ್ವೆಗಳ ಪ್ರತಿಪಾದನೆಯಾಗಿರುತ್ತದೆ. ಎಲ್ಲ ಧರ್ಮಗಳ ಸಂಸ್ಕೃತಿ ಆಚರಣೆ ಆಯಾ ಜನಗಳ ಆರ್ಥಿಕ ಮತ್ತು ಪರಿಸರವನ್ನು ಅವಲಂಭಿಸಿರುತ್ತದೆ ಎಂದರು. 
ಶಿವಾನಂದ ಯಲ್ಲಮ್ಮನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಗವಿಸಿದ್ಧಪ್ಪ ಹಿಟ್ನಾಳ, ಗವಿಸಿದ್ಧೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕ ಶಂಕರಗೌಡ ಹಿರೇಗೌಡ್ರ, ಜಿಲ್ಲಾ ಕನಕ ದಳ ಸೇವಾ ಸಮಿತಿ ಅಧ್ಯಕ್ಷ ಕರಿಯಪ್ಪ ಬೇವಿನಾಳ, ಜಿಲ್ಲಾ ಕನಕ ನೌಕರರ ಸಂಘದ ಮಾಜಿ ಅಧ್ಯಕ್ಷ ಜಂಬಣ್ಣ ನಂದ್ಯಾಪೂರ, ಶಿಕ್ಷಕ ಹನುಮಂತಪ್ಪ ಮರೇಬಾಳ, ನಗರಸಭೆ ಮಾಜಿ ಸದಸ್ಯ ವಿರುಪಾಕ್ಷಪ್ಪ ಮೋರನಾಳ, ರಾಜ್ಯ ಕುರಿ ಉಣ್ಣೆ ನಿಗಮದ ಮಾಜಿ ಉಪಾಧ್ಯಕ್ಷ ಸರ್ವಜ್ಞ ಮೂರ್ತಿ ಭೂತಣ್ಣನವರ, ಕೊಪ್ಪಳ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಕರ್ನಾಟಕ ಜಾನಪದ ಪರಿಷತ್ತಿನ ಖಜಾಂಚಿ ಮಲ್ಲಪ್ಪ ಗಟ್ಟಿ, ಷಣ್ಮುಖಪ್ಪ ಭೂತಣ್ಣನವರ, ತಾಲೂಕ ಪಂಚಾಯತ ಸದಸ್ಯ ಮುದೇಗೌಡ, ಪತ್ರಕರ್ತ ನೂರ ಅಹ್ಮದ ಮಕಾನದಾರ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲಿ ಪತ್ರಕರ್ತ ಮಂಜುನಾಥ ಬೊಮ್ಮನಕಟ್ಟಿ ಮತ್ತು ಎಸ್.ಎನ್. ತಿಮ್ಮನಗೌಡರನ್ನು ಸನ್ಮಾನಿಸಲಾಯಿತು.
ಎಂ. ಬಿ. ಗಟ್ಟಿ ಪ್ರಾರ್ಥಿಸಿದರು. ರಾಜ್ಯ ಅಂಗವಿಕಲ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ನಿರೂಪಿಸಿದರು. ಕನಕ ಸಾಂಸ್ಕೃತಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಅಂಡಗಿ ಅತಿಥಿಗಳ ಪರಿಚಯಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ  ಅರುಣಾ ನರೇಂದ್ರ ಪ್ರಾಸ್ತಾವಿಕವಾಗಿ ಮಾತಾಡಿದರು. ಶಿಕ್ಷಕ ಹನುಮಂತಪ್ಪ ಕರಿಗಾರ ವಂದಿಸಿದರು.

Advertisement

0 comments:

Post a Comment

 
Top