ಪ್ರಕೃತಿಯು ಮನುಷ್ಯನಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೊಟ್ಟಿದ್ದರೂ, ಇದಕ್ಕೆ ತೃಪ್ತರಾಗದ ಮನುಜ, ಪರಿಸರದ ಮೇಲೆ ದೌರ್ಜನ್ಯವೆಸಗುತ್ತಿದ್ದಾನೆ. ಪ್ರಕೃತಿಯು ಮನುಷ್ಯನ ಆಸೆಗಳನ್ನು ಪೂರೈಸುವುದೇ ಹೊರತು ದುರಾಸೆಯನ್ನಲ್ಲ ಎಂದು ಪರಿಸರ ಮತ್ತು ವನ್ಯ ಜೀವಿ ತಜ್ಞರು ಆಗಿರುವ ಮುನಿರಾಬಾದ್‌ನ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಅಬ್ದುಲ್ ಸಮದ್ ಕೊಟ್ಟೂರು ಅವರು ಹೇಳಿದರು.
ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕೊಪ್ಪಳ ಜಿಲ್ಲಾ ಪಂಚಾಯತಿಯ ಸಹಯೋಗದೊಂದಿಗೆ ಕೊಪ್ಪಳ ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ 'ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ' ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ಸುಮಾರು ೫೫೨೪೯೫ ಹೆಕ್ಟೇರ್‌ನಷ್ಟಿದ್ದು, ಇದರಲ್ಲಿ
ಅರಣ್ಯ ಕೇವಲ ೨೯೪೫೧ ಹೆಕ್ಟೇರ್ ನಷ್ಟಿದೆ. ಅಂದರೆ ಒಟ್ಟಾರೆ ಶೇ. ೫. ೩ ರಷ್ಟು ಮಾತ್ರ ಜಿಲ್ಲೆಯಲ್ಲಿ ಅರಣ್ಯವಿದೆ. ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶ ಹೆಚ್ಚಾಗಿರುವುದರಿಂದ, ವನ್ಯಜೀವಿಗಳ ಸಂತತಿ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿಯೇ ವನ್ಯ ಜೀವಿಗಳು ಆಹಾರ ಮತ್ತು ನೀರಿನ ಕೊರತೆಯಿಂದ ನಾಡಿಗೆ ದಾಳಿ ಇಡಲು ಪ್ರಾರಂಭಿಸಿವೆ. ಕೊಪ್ಪಳ ಜಿಲ್ಲೆಯಲ್ಲಿ ಅಳವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಅನೇಕ ಪ್ರಬೇಧಗಳಿವೆ. ಇವುಗಳ ಪೈಕಿ ಜಿಲ್ಲೆಯಲ್ಲಿ ಪೆಂಗೋಲಿಯನ್ (ಚಿಪ್ಪುಹಂದಿ), ರಣಹದ್ದುಗಳು ಮುಂತಾದ ಪ್ರಬೇಧಗಳಿದ್ದರೂ, ಜನರಲ್ಲಿ ಅರಿವಿನ ಕೊರತೆ ಹಾಗೂ ಅಕ್ರಮ ಬೇಟೆಯಾಡುವ ಕಾರಣಗಳಿಂದಾಗಿ ನಶಿಸಿ ಹೋಗುತ್ತಿವೆ. ವನ್ಯ ಜೀವಿಗಳ ಬೇಟೆಯಾಡುವುದನ್ನು ಸಾರ್ವಜನಿಕರು ತಡೆಗಟ್ಟಬೇಕು. ನಮ್ಮ ಸುತ್ತಮುತ್ತಲ ಪರಿಸರ, ಪ್ರಾಣಿ, ಪಕ್ಷಿ ಮುಂತಾದ ಜೀವಸಂಕುಲಗಳನ್ನು ಸಂರಕ್ಷಿಸಬೇಕಾಗಿದೆ. ವನ್ಯಜೀವಿಗಳ ಪ್ರಾಣಹರಣದಿಂದ ಪರಿಸರದ ಮೇಲಿನ ಪರಿಣಾಮ ತುಂಬಾ ಅಪಾಯಕಾರಿಯಾಗಿದ್ದು, ಆಹಾರ ಸರಪಳಿಗೆ ಧಕ್ಕೆ ಉಂಟಾಗಲಿದೆ. ಮೊಬೈಲ್ ಟವರ್‌ಗಳ ಸಿಗ್ನಲ್‌ನಿಂದ ಗುಬ್ಬಿಗಳ ಸಂತತಿ ನಶಿಸುತ್ತಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆದರೆ ಮೊಬೈಲ್ ಟವರ್‌ಗಳ ಸಿಗ್ನಲ್‌ನಿಂದ ನಿಜಕ್ಕೂ ತೊಂದರೆ ಇರುವುದು ಜೇನು ನೊಣಗಳ ಸಂತತಿಗೆ. ಆದ್ದರಿಂದ ಪರಿಸರದ ಉಳಿವಿಗಾಗಿ ಮನುಷ್ಯ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಅಬ್ದುಲ್ ಸಮದ್ ಕೊಟ್ಟೂರ್ ಅವರು ಹೇಳಿದರು.
ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪರಿಸರದ ರಕ್ಷಣೆಗಾಗಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಚಿತ್ರದುರ್ಗದ ಡಾ. ಹೆಚ್.ಕೆ. ಸ್ವಾಮಿ, ಗದುಗಿನ ಆರ್.ವಿ. ಪಾಟೀಲ್ ಅವರು ಪರಿಸರ ಸಂರಕ್ಷಣೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment