PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲಾ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಮೇ ತಿಂಗಳ ೮ ಹಾಗೂ ೯ 

ಕೊಪ್ಪಳ ಜಿಲ್ಲಾ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಯಲಬುರ್ಗಾ ತಾಲೂಕಿನ ಕರಮುಡಿಯಲ್ಲಿ ಇದೇ ಮೇ ತಿಂಗಳ ೮ ಹಾಗೂ ೯ ರಂದು ಜರುಗಲಿದ್ದು, ಅಧ್ಯಕ್ಷರಾಗಿ ಸರ್ವಾನು ಮತದಿಂದ ಜಿಲ್ಲೆಯ ಹಿರಿಯ ಸಾಹಿತಿಗಳಾದ ಎಚ್. ಎಸ್. ಪಾಟೀಲರು ನಿಯೋಜಿತರಾಗಿದ್ದಾರೆ. ಇವರು ಕೊಪ್ಪಳದ ಹತ್ತಿರದ ಬಿಸರಹಳ್ಳಿಯಲ್ಲಿ ಅಲ್ಲಿಯ ಸಿದ್ಧನಗೌಡ ಪಾಟೀಲ ಹಾಗೂ ಫಕೀರಮ್ಮ ದಂಪತಿಗಳ ಮಗನಾಗಿ ದಿ. ೨೦-೦೮-೧೯೪೨ ರಂದು ಜನಿಸಿದರು. ಎಂ.ಎ., ಬಿಎಡ್ ಪದವೀಧರರಾಗಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ೧೩ ವರ್ಷ ಸೇವೆ ಸಲ್ಲಿಸಿ ಅಳವಂಡಿ ಶ್ರೀ ಸಿದ್ದೇಶ್ವರ ಪ.ಪೂ. ಕಾಲೇಜಿನ ಪ್ರಥಮ ಮುಖ್ಯೋಪಾಧ್ಯಾಯರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ೧೯೯೦ರಿಂದ ಕೊಪ್ಪಳದ ಕಾಳಿದಾಸ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ೨೦೦೦ರಲ್ಲಿ ನಿವೃತ್ತರಾದ ಮೇಲೆ ಕೇದಾರಲಿಂಗ ಬಿಸಿಎ ಕಾಲೇಜು ಹಾಗೂ ಶ್ರೀಮತಿ ರೇಣುಕಮ್ಮ ಬಸಪ್ಪ ದಿವಟರ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೊಪ್ಪಳ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದಾರೆ. ೧೯೯೮ರಿಂದ ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾಗಿ ೨೦೦೨ರ ನವಂಬರ್ ೧ ರಂದು ಹೈ. P. ಪ್ರತ್ಯೇಕತಾ ಧ್ವಜವನ್ನು ಸಾಹಿತ್ಯ ಭವನದ ಎದುರಿನಲ್ಲಿ ಹಾರಿಸಿ, ಹೋರಾಟಕ್ಕೆ ತೀವ್ರತೆ ತಂದುಕೊಟ್ಟರು. ಕೊಪ್ಪಳ ಜಿಲ್ಲೆಯ ಸಾಹಿತ್ಯಕ ಸಾಂಸ್ಕೃತಿಕ ಹಾಗೂ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತಾ ತಮ್ಮನ್ನು ನಿರಂತರವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.
೧೯೮೯ರಲ್ಲಿ ಎಂ.ಬಿ. ದಿವಟರವರು ಶಾಸಕರಾಗಿ ಆಯ್ಕೆಯಾದ ಮೇಲೆ, ಕೊಪ್ಪಳದಲ್ಲಿ ನಿಂತು ಹೋಗಿದ್ದ ನಾಡಹಬ್ಬಕ್ಕೆ ಚಾಲನೆ ನೀಡಿದರು. ಕವಿ ಗವಿಸಿದ್ಧ ಎನ್. ಬಳ್ಳಾರಿ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರೊಂದಿಗೆ ನಿರಂತರವಾಗಿ ಜಿಲ್ಲೆಯ ಸಾರ್ವಜನಿಕ ಹೋರಾಟ, ಕೊಪ್ಪಳ ನಾಡಹಬ್ಬ, ಕೊಪ್ಪಳದಲ್ಲಿ ಜರುಗಿದ ೬೨ನೆಯ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಮತ್ತು ಸ್ಮರಣ ಸಂಚಿಕೆಗಳ ಹಾಗೂ ಗ್ರಂಥಗಳ ಸಂಪಾದಕತ್ವಗಳ ಹೊಣೆಗಾರಿಕೆ ಹೊತ್ತುಕೊಂಡು ಕಾರ್‍ಯ ನಿರ್ವಹಿಸಿದ್ದು, ಇತ್ತೀಚಿಗೆ ಸಂವಿಧಾನದ ೩೭೧ನೇ ಕಲಮಿನ ಜಾರಿಯಾದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
೭೨ನೇ ವೃದ್ದಾಪ್ಯ, ಅನಾರೋಗ್ಯಗಳ ನಡುವೆಯೂ ಅನೇಕ ಸಾಹಿತ್ಯಕ ಸಾಂಸ್ಕೃತಿಕ ಸಮಾರಂಭಗಳಿಗಾಗಿ ಐದಾರು ನೂರು ಕಿಲೋಮೀಟರು ಸುತ್ತಾತ್ತಾರೆ. ಅವರ ಸಾಹಿತ್ಯದ ಓದು, ಅದರ ಪ್ರೀತಿ ಇವರನ್ನು ಸಾಹಿತಿಯಾಗಿ ರೂಪಿಸಿದೆಯೆಂದು ಹೇಳಹಬುದು. ಇವರು ೨೦೦೦ರಲ್ಲಿ ನಿವೃತ್ತರಾದ ಮೇಲೆ ಸಾಹಿತ್ಯ ರಚನೆಗೆ ತೊಡಗಿರುವುದೊಂದು ವಿಶೇಷ.
'ಕೊಪ್ಪಳ  ಜಿಲ್ಲೆಯ ರಂಗಭೂಮಿ' (೨೦೦೨) ಜಿಲ್ಲೆಯ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಕಟ್ಟಿ ಕೊಡುತ್ತದೆ. 'ಕನಕದಾಸರು' ಹಾಗೂ 'ಕಾಂತ್ರಿ ವೀರ ಸಂಗೊಳ್ಳಿ ರಾಯಣ್ಣ' 'ಕವಿಗವಿಸಿದ್ಧ ಎನ್. ಬಳ್ಳಾರಿ' ವಿದ್ಯಾರ್ಥಿಗಳಿಗಾಗಿ ಹಾಗೂ ಸಾಮಾನ್ಯ ಓದುಗರಿಗಾಗಿ ರಚಿಸಿದ ಜೀವನ ಚರಿತ್ರೆಗಳಾಗಿದ್ದರೂ ಪ್ರೌಢ ವಿಚಾರಗಳಿಂದ ತುಂಬಿವೆ.
ಕೊಪ್ಪಳ ಗವಿಸಿಮಠದ ೧೭ನೆಯ ಪೀಠಾಧ್ಯಕ್ಷರಾಗಿದ್ದ ಲಿಂ.ಜ. ಶಿವಶಾಂತವೀರ ಮಹಾಸ್ವಾಮಿಗಳವರನ್ನು ಕುರಿತು ೧೯೯೩ರಲ್ಲಿ ಹೊರತಂದ 'ಶಾಂತಪ್ರಭೆ' ಗೌರವ ಗ್ರಂಥಕ್ಕಾಗಿ ಬರೆದ ೭೭ಪುಟಗಳ ಲೇಖನವೇ ಮುಂದೆ ೨೦೦೯ರಲ್ಲಿ ಅವರ ಜೀವನ ಚರಿತ್ರೆಯಾಗಿ ಹೊರಬಂದಿದೆ. ಕೊಪ್ಪಳ ಗವಿಮಠ ಪರಂಪರೆ ಹಾಗೂ ಅಲ್ಲಿ ಆಗಿ ಹೋಗಿರುವ ೧೭ ಶ್ರೀಶ್ರೀಗಳವರ ಚರಿತ್ರೆಯನ್ನು ಪ್ರಥಮ ಬಾರಿಗೆ ಸಂಶೋಧನಾತ್ಮಕವಾಗಿ ಪ್ರಕಟಿಸಿದ ಕೀರ್ತಿ ಪಾಟೀಲರಿಗೆ ಸಲ್ಲುತ್ತದೆ. ಈಗಲೂ ಗವಿಮಠದ ವಿಷಯವಾಗಿ ಬರೆಯುವವರಿಗೆ, ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ.
ಪಂ. ನಾಗಭೂಷಣಶಾಸ್ತ್ರಿಗಳು ಗದುಗಿನ ಜಗದ್ಗುರು ತೋಂಟದಾರ್‍ಯ ಮಠದ ಲಿಂಗಾಯತ ಪುಣ್ಯ ಪುರುಷರ ಮಾಲಿಕೆಯಲ್ಲಿ ಪ್ರಕಟಗೊಂಡಿರುವ ಕಿರು ಪುಸ್ತಿಕೆ ಜನಪ್ರಿಯವಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯಕ್ಕಾಗಿ, ಸೇಡಂ ಕೊತ್ತಲ ಬಸವೇಶ್ವರ ಸಂಸ್ಥೆಯ ಪುಸ್ತಕ ಮಾಲಿಕೆಗಾಗಿ ಕೊಪ್ಪಳ ಗವಿಸಿದ್ದೇಶ್ವರರು, ಕೊಪ್ಪಳ ಗವಿಮಠ ಕಿರು ಹೊತ್ತಿಗೆಗಳನ್ನು ಸಿದ್ದಪಡಿಸಿಕೊಟ್ಟಿದ್ದು ಪ್ರಕಟಗೊಂಡಿವೆ.
ಕೊಪ್ಪಳ ಜಿಲ್ಲೆಯ ಹೆಮ್ಮೆಯ 'ಕಿನ್ನಾಳ ಕಲೆ' ಕುರಿತು ಕಿರುಪುಸ್ತಿಕೆ ಬರೆದಿದ್ದು ಅದು ಕೂಡ ಜನಪ್ರಿಯಗೊಂಡಿದೆ.
೧೯೧೦ರಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ 'ಕೊಪ್ಪಳ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಪರಂಪರೆ' ಎಂಬ ೨೫೦ ಪುಟಗಳ ಗ್ರಂಥ ಕೊಪ್ಪಳ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಪರಂಪರೆ ಕುರಿತು ಅಧ್ಯಯನ ಮಾಡುವವರಿಗೆ ಮಾಹಿತಿ ಕೋಶವಾಗಿದೆ.
ಕೊಪ್ಪಳ ತಾಲೂಕಾ ದರ್ಶನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಾಲೂಕು ಮಾಹಿತಿ ನೀಡುತ್ತದೆ. ಇತ್ತೀಚಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕನ್ನಡ ಕಟ್ಟಿದವರು ಮಾಲಿಕೆಯಲ್ಲಿ 'ರಂಗ ಅಭಿನೇತ್ರಿ ರೆಹಮಾನವ್ವ ಕಲ್ಮನಿ' ಎಂಬ ಜೀವನ ಚರಿತ್ರೆ ಪ್ರಕಟಗೊಂಡಿದ್ದು, ಇದರಲ್ಲಿ ರಂಗಚಟುವಟಿಕೆಗಳನ್ನು ಕುರಿತು ಪ್ರಥಮ ಬಾರಿಗೆ ಹೊಸ ವಿಷಯಗಳು ಬಂದಿವೆಯೆಂದು ಹೇಳುತ್ತಾರೆ.
ಸಂಪಾದಿತ ಕೃತಿಗಳು:
'ಗವಿದೀಪ್ತಿ' ೧೯೨೬ರಲ್ಲಿ ಕೊಪ್ಪಳ ಗವಿಮಠದ ೧೬ನೆಯ ಪೀಠಾಧಿಪತಿಗಳಾಗಿದ್ದ ಲಿಂ. ಜ. ಮರಿಶಾಂತವೀರ ಮಹಾಸ್ವಾಮಿಗಳವರ ಸಂಸ್ಮರಣ ಗ್ರಂಥ ಹೊರಬಂದಿದ್ದು ಅದನ್ನು ಅಚ್ಚುಕಟ್ಟಾಗಿ ತಂದು ಆಗಿನ ಹಿರಿಯ ಸಾಹಿತಿಗಳಿಂದ ಗವಿದೀಪ್ತಿಯ ಪಾಟೀಲರೆಂದೇ ಕರೆಯಿಸಿಕೊಂಡಿದ್ದಾರೆ.
'ತಿರುಳ್ಗನ್ನಡ' ಬಂಡಾಯ ಸಾಹಿತಿ ಪ್ರೋ. ಅಲ್ಲಮಪ್ರಭು ಬೆಟ್ಟದೂರು ಅವರೊಂದಿಗೆ ಅ. ಭಾ. ೬೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ಸಂಚಿಕೆ ಸಂಪಾದಿಸಿಕೊಟ್ಟಿದ್ದು ಅದೊಂದು ಹೈ.ಕ., ಕಲೆ, ಸಂಸ್ಕೃತಿಕ, ಸಾಹಿತ್ಯಕ್ಕೆ ಆಕರಗ್ರಂಥವಾಗಿದೆ.
'ಶಾಂತಪ್ರಭೆ' ಲಿಂ. ಜ. ೧೭ನೆಯ ಪೀಠಾಧಿಪತಿಗಳವರ ಷಷ್ಠ್ಯಬ್ಧಪೂರ್ತಿ ಗೌರವಗ್ರಂಥ ಡಾ. ಕೆ. ಬಿ. ಬ್ಯಾಳಿಯವರೊಂದಿಗೆ ಸಂಪಾದಕರಾಗಿದ್ದಾರೆ.
'ವಿಮೋಚನೆ' ಕೊಪ್ಪಳ ಜಿಲ್ಲೆಯ ಹೈದರಾಬಾದ ವಿಮೋಚನೆಯ ಕಥೆಯನ್ನು ಕಟ್ಟಿಕೊಡುವ ಮಾಹಿತಿಯುಳ್ಳ ಗ್ರಂಥವಿದಾಗಿದೆ.
ಕೊಪ್ಪಳ ಜಿಲ್ಲಾ ದರ್ಶನವನ್ನು ಗುಲಬರ್ಗಾ ವಿವಿಗಾಗಿ ೨೦೦೫ರಲ್ಲಿ ಪ್ರೋ. ಅಲ್ಲಮಪ್ರಭು ಬೆಟ್ಟದೂರು ಅವರೊಂದಿಗೆ ಸಂಪಾದಿಸಿಕೊಟ್ಟಿದ್ದಾರೆ. ಆನೆಗೊಂದಿ ಅವಲೋಕನ, 'ಕೊಪಣ ಸಿರಿ' ಇವರ ಇತ್ತೀಚಿನ ಸಂಪಾದಿತ ಕೃತಿಗಳಾಗಿವೆ.
ಕರ್ನಾಟಕ ಗೆಜಿಟಿಯರ್ ಮಾಲಿಕೆಯಲ್ಲಿ ಕೊಪ್ಪಳ ಜಿಲ್ಲಾ ಗೆಜಿಟಿಯರ್‌ದಲ್ಲಿ ಕೊಪ್ಪಳ ತಾಲೂಕು ಕುರಿತು ಬರೆಯುತ್ತಿದ್ದಾರೆ. ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಗಾಗಿ ಸಮಗ್ರ ಕರ್ನಾಟಕದ ಕುರುಬರ ಶಿಕ್ಷಣ ಕುರಿತು ಬರೆಯುವ ಹೊಣೆಗಾರಿಕೆ ವಹಿಸಿದ್ದು, ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

0 comments:

Post a Comment

 
Top