PLEASE LOGIN TO KANNADANET.COM FOR REGULAR NEWS-UPDATES

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂತಾದ ವಿಷಯಗಳ ಕುರಿತು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಜು. ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ತಿಳಿಸಿದ್ದಾರೆ.
  ರೈತರು, ಬಡ ಜನರು, ಪ.ಜಾತಿ, ಪ.ವರ್ಗ ಸೇರಿದಂತೆ ಸಾಮಾನ್ಯ ನಾಗರೀಕರಿಗೂ ತಲುಪಿಸಬಹುದಾದಂತಹ ಹಲವಾರು ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯು ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ.  ಉದ್ಯೋಗಖಾತಿ ಯೋಜನೆ, ನಿರ್ಮಲ ಭಾರತ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಜಾರಿಗೆ ಫಲಾನುಭವಿಗಳನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಇದೆ.  ಜಿಲ್ಲೆಯಲ್ಲಿ ಸುಮಾರು ೭೪೦೪೬ ಸಣ್ಣ ರೈತರು, ೫೭೩೫೮- ಅತಿ ಸಣ್ಣ ರೈತರು, ೧೮೯೪೬- ಪ.ಜಾತಿಯ ರೈತರು, ೨೨೦೮೨- ಪ.ಪಂಗಡ ರೈತರಿದ್ದಾರೆ.  ಇವರಿಗೆ ಕೃಷಿ, ತೋಟಗಾರಿಕೆ ಮುಂತಾದ ಇಲಾಖೆಗಳ ಮೂಲಕ ಹಲವು ಯೋಜನೆಗಳ ಸೌಲಭ್ಯ ಪಡೆಯಲು ಅವಕಾಶವಿದೆ.  ನಿರ್ಮಲ ಭಾರತ ಯೋಜನೆಯಡಿ ವಯಕ್ತಿಕ ಶೌಚಾಲಯ ನಿರ್ಮಿಸಲು ಸಹಾಯಧನ ಪಡೆಯಬಹುದಾಗಿದೆ.  ಇಂತಹ ಹಲವು ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಗ್ರಾಮೀಣ ಪ್ರದೇಶಗಳ ಎಲ್ಲ ಸಾರ್ವಜನಿಕರು, ರೈತರು ಜು. ೦೧ ರಿಂದ ೦೭ ರವರೆಗೆ ಜರುಗುವ ವಾರ್ಡ/ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಕುಟುಂಬ ಸದಸ್ಯರ ಫೋಟೊ ಜೊತೆ ತಪ್ಪದೆ ನೋಂದಾಯಿಸಬಹುದಾಗಿದೆ.
  ವಿವಿಧ ಯೋಜನೆಗಳ ಜಾರಿ, ಫಲಾನುಭವಿಗಳ ಆಯ್ಕೆ ಹಾಗೂ ಗ್ರಾಮ ಸಭೆಗಳ ಮಹತ್ವ ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜು. ೨೯ ರಂದು ಕೊಪ್ಪಳದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತಿಗಳ ಸದಸ್ಯರು ತಪ್ಪದೆ ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕು.  ಗ್ರಾಮ ಪಂಚಾಯತಿಗಳ ಆಸಕ್ತ ಸದಸ್ಯರುಗಳೂ ಸಹ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.  ಈ ಮೂಲಕ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ  ಮನವಿ ಮಾಡಿಕೊಂಡಿದ್ದಾರೆ.

Advertisement

0 comments:

Post a Comment

 
Top