ಕಳೆದ ವರ್ಷ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಮಕ್ಕಳಿಂದಲೇ ತಂದೆ, ತಾಯಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಪ್ಪಳದ ತ್ವರಿತ ನ್ಯಾಯಾಲಯ ತೀರ್ಪು ನೀಡಿದ್ದು, ಕೊಲೆಗೈದವರಿಗೆ ಶಿಕ್ಷೆಯನ್ನು ಪ್ರಕಟಿಸಿದೆ.
ತಾಳಕೇರಿ ಗ್ರಾಮದ ಅಮೀನಸಾಬ್ ಮತ್ತು ಇಮಾಮ್ ಸಾಬ್ ಎಂಬುವವರು ತಮ್ಮ ತಂದೆ ಶ್ಯಾಮೀದ್‌ಸಾಬ ಹಾಗೂ ತಾಯಿ ರಾಜಾಬೀ @ ರಾಜಮ್ಮ ಇವರನ್ನು ಕಳೆದ ೨೦೧೨ ರ ಜನೇವರಿ ೩೧ ರಂದು ಕೊಲೆ ಮಾಡಿದ ದಾರಣ ಘಟನೆ ಸಂಭವಿಸಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೊಪ್ಪಳದ ೧ನೇ ತ್ವರಿತ ನ್ಯಾಯಾಲಯ ಅಮೀನಸಾಬ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೋರ್ವ ಆರೋಪಿ ಇಮಾಮಸಾಬ ಎಂಬಾತನಿಗೆ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳಾದ ಅಮೀನಸಾಬ ಹಾಗೂ ಇಮಾಮಸಾಬ ಈ ಇಬ್ಬರು ಆಸ್ತಿಗಾಗಿ ಸ್ವತಃ ತನ್ನ ತಂದೆ ಶ್ಯಾಮೀದ್‌ಸಾಬ್‌ಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು,, ಆ ಸಮಯದಲ್ಲಿ ಬಿಡಿಸಲು ಬಂದ ಮೃತನ ಹೆಂಡತಿ ರಾಜಾಬೀ @ ರಾಜಮ್ಮ ಈಕೆಗೂ ಸಹ ಕಟ್ಟಿಗೆಯಿಂದ ಹೊಡೆದು ಬಾರಿ ಕೊಲೆ ಮಾಡಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇವೂರು ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ ಮೇ.೨೮ ರಂದು ಪ್ರಕರಣದ ವಿಚಾರಣೆ ನಡೆಸಿದ ೧ನೇ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಲೆಕ್ಕದಪ್ಪ ಜಂಬಗಿ ಅವರು, ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿ ಅಮೀನಸಾಬ ಎಂಬಾತನಿಗೆ ಭಾ.ದ.ಸ. ಕಲಂ: ೩೦೨ ರ ಅಡಿಯಲ್ಲಿ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ.೧೦,೦೦೦/- ದಂಡ ವಿಧಿಸಿದ್ದು, ದಂಡ ಕೊಡಲು ತಪ್ಪಿದಲ್ಲಿ ೨ ವರ್ಷ ಕಠಿಣ ಶಿಕ್ಷೆ ಹಾಗೂ ಇನ್ನೋರ್ವ ಆರೋಪಿ ಇಮಾಮಸಾಬ ಎಂಬಾತನಿಗೆ ಭಾ.ದ.ಸ. ಕಲಂ: ೧೦೯ ರ ಅಡಿಯಲ್ಲಿ ಮಾಡಿದ ಅಪರಾಧಕ್ಕೆ ೨ ವರ್ಷ ಸಾದಾ ಶಿಕ್ಷೆ ಹಾಗೂ ೨ ಸಾವಿರ ರೂಪಾಯಿ ದಂಡ, ದಂಡ ಕೊಡಲು ತಪ್ಪಿದಲ್ಲಿ ೩ ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಇವರು ವಾದ ಮಂಡಿಸಿದ್ದರು.
0 comments:
Post a Comment