PLEASE LOGIN TO KANNADANET.COM FOR REGULAR NEWS-UPDATES

  ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಮತಗಟ್ಟೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ   ಸ್ವೀಪ್ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ದಾಖಲೆಯ ೭೩. ೫೨ ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಸುಮಾರು ಶೇ. ೧೧ ರಷ್ಟು ಏರಿಕೆ ದಾಖಲಾಗಿದೆ.
  ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮತದಾರರನ್ನು ಜಾಗೃತಗೊಳಿಸಿ, ಮತದಾನಕ್ಕೆ ಅವರನ್ನು ಪ್ರೇರೇಪಿಸುವಂತೆ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ರೂಪಿಸಿ, ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲಾವಾರು ಮತದಾನ ಪ್ರಮಾಣ ಗಮನಿಸಿದಾಗ, ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಬೆಂಗಳೂರು ನಗರ ಕೊನೆಯ ಸ್ಥಾನ ಪಡೆದಿದೆ.  ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ೧೮ನೇ ಸ್ಥಾನದಲ್ಲಿದೆ.  ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆ ಶೇ. ೭೩. ೫೨ ರಷ್ಟು ಮತದಾನ ದಾಖಲಿಸಿ, ಅಗ್ರ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂದರೆ ಶೇ. ೫೬. ೩೦ ರಷ್ಟು ಮತದಾನವಾಗಿತ್ತು.  ಆದ್ದರಿಂದ ಸ್ವೀಪ್ ಕಾರ್ಯಕ್ರಮವನ್ನು ಕನಕಗಿರಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಏರ್ಪಡಿಸಲು ಒತ್ತು ನೀಡಲಾಗಿತ್ತು.  ಈ ಆದ್ಯತೆ ಉತ್ತಮ ಪರಿಣಾಮ ಬೀರಿದ್ದು, ಈ ಬಾರಿ ಕನಕಗಿರಿ ಕ್ಷೇತ್ರದಲ್ಲಿ ಶೇ. ೭೩. ೭೫ ರಷ್ಟು ದಾಖಲೆಯ ಮತದಾನವಾಗಿದೆ.  ಇದರಿಂದಾಗಿ ಶೇ. ೧೭ ರಷ್ಟು ಏರಿಕೆಯಾದಂತಾಗಿದೆ.  ಉಳಿದಂತೆ ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಶೇ. ೭೧. ೩೩ ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ. ೬೦. ೭೩ ರಷ್ಟಾಗಿತ್ತು.  ಈ ಬಾರಿಯ ಮತದಾನದಲ್ಲಿ ಶೇ. ೧೧ ರಷ್ಟು ಏರಿಕೆಯಾಗಿದೆ.  ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಶೇ. ೭೩. ೭೫ ಮತದಾನವಾಗಿದ್ದು, ಕಳೆದ ಬಾರಿ ಶೇ. ೬೩. ೩೪ ರಷ್ಟಾಗಿತ್ತು.  ಇಲ್ಲಿ ಶೇ. ೧೦ ರಷ್ಟು ಏರಿಕೆಯಾಗಿದೆ.  ಯಲಬುರ್ಗಾ ಕ್ಷೇತ್ರದಲ್ಲಿ ಈ ಸಲ ಶೇ. ೭೫. ೫೩ ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. ೬೬. ೫೪ ರಷ್ಟು ಮತದಾನವಾಗಿತ್ತು.  ಇಲ್ಲಿ ಶೇ. ೯ ರಷ್ಟು ಏರಿಕೆ ಕಂಡಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. ೭೩. ೭೭ ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. ೬೫. ೨೨ ರಷ್ಟಾಗಿತ್ತು.  ಇದರಿಂದಾಗಿ ಶೇ. ೮ ರಷ್ಟು ಏರಿಕೆಯಾದಂತಾಗಿದೆ.
  ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮತದಾರರನ್ನು ಜಾಗೃತಗೊಳಿಸಲು ಮ್ಯಾರಥಾನ್ ಓಟ, ಜಾಗೃತಿ ರ್‍ಯಾಲಿ, ಮತದಾರರ ಪ್ರತಿಜ್ಞಾ ವಿಧಿ ಬೋಧನೆ, ಕಾರ್ಮಿಕರಲ್ಲಿ ಜಾಗೃತಿ, ಮಾನವ ಸರಪಳಿ, ಬೈಕ್ ರ್‍ಯಾಲಿ, ಪ್ಯಾರಾಗ್ಲೈಡಿಂಗ್ ಹೀಗೆ ಹತ್ತು ಹಲವು ಬಗೆಯ ಕಸರತ್ತು ನಡೆಸುವ ಮೂಲಕ ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ನೆರವೇರಿಸಲಾಗಿತ್ತು.  ಅಲ್ಲದೆ ಜಿಲ್ಲೆಯಲ್ಲಿ ಶೇ. ೮೦ ರಷ್ಟು ಮತದಾನವಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು.  ಆದರೆ ಪ್ರತಿ ಚುನಾವಣೆಯಲ್ಲಿ ಕಂಡಂತೆ, ಈ ಬಾರಿಯೂ ನಗರವಾಸಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು, ನಿರ್ಲಕ್ಷ್ಯ ಮನೋಭಾವ ಪ್ರದರ್ಶಿಸಿದ್ದರಿಂದ ನಿರೀಕ್ಷಿತ ಮಟ್ಟದ ಗುರಿ ತಲುಪಲು ಸಾಧ್ಯವಾಗಲಿಲ್ಲ.  ಸಮಾಧಾನದ ಸಂಗತಿಯೆಂದರೆ, ಗ್ರಾಮೀಣ ಪ್ರದೇಶದ ಮತದಾರರು ಹಿಂದೆಂದಿಗಿಂತಲೂ ಉತ್ಸಾಹದಿಂದ ಅತಿ ಹೆಚ್ಚು ಮತದಾನ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.  ಇನ್ನಾದರೂ ನಗರ ಮತ್ತು ಪಟ್ಟಣ ವಾಸಿಗಳು ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು, ತಪ್ಪದೆ ಮತದಾನ ಮಾಡಲು ಮುಂದಾಗಬೇಕು.  ೨೦೧೪ ರಲ್ಲಿ ಲೊಕಸಭಾ ಚುನಾವಣೆ ನಡೆಯಲಿದ್ದು, ಈ ಬಾರಿಯ ಸ್ವೀಪ್ ಕಾರ್ಯಕ್ರಮ ಮುಂದಿನ ಚುನಾವಣೆಗೆ ಒಂದು ಬಗೆಯ ಸಿದ್ದತೆಯ ತಾಲೀಮು ನಡೆಸಿದಂತಾಗಿದೆ.  ಮುಂದಿನ ಬಾರಿ ಸ್ವೀಪ್ ಕಾರ್ಯಕ್ರಮ ಮತ್ತೆ ಜಾರಿಗೊಂಡಲ್ಲಿ, ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಯತ್ನ ನಡೆಸಲಾಗುವುದು.  ಸ್ವೀಪ್ ಕಾರ್ಯಕ್ರಮದ ಯಶಸ್ವಿಯಲ್ಲಿ ವಾರ್ತಾ ಇಲಾಖೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.  ಉಳಿದಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳು, ಶಿಕ್ಷಣ, ಕಾರ್ಮಿಕ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಯುವಜನ ಸೇವಾ ಮತ್ತು ಕ್ರೀಡೆ ಮುಂತಾದ ಇಲಾಖೆಗಳು ಅಲ್ಲದೆ ಹೊಸಪೇಟೆ ಆಕಾಶವಾಣಿ ಕೇಂದ್ರದವರ ಸಹಕಾರ ಪ್ರಶಂಸನೀಯ.  ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಮತ್ತು ಕರಪತ್ರ ವಿತರಣೆ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರೆ, ನಿರೀಕ್ಷಿತ ಗುರಿ ಸಾಧಿಸಬಹುದಾಗಿತ್ತು ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ.

Advertisement

0 comments:

Post a Comment

 
Top