ಪ್ರಸಕ್ತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮೇ. ೦೮ ರಂದು ಬೆಳಿಗ್ಗೆ ೦೭ ಗಂಟೆಯಿಂದ ನಗರದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ.
ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೧೪ ಟೇಬಲ್‌ಗಳನ್ನು ವ್ಯವಸ್ಥಿತಗೊಳಿಸಲಾಗಿದ್ದು, ಪ್ರತಿ ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್‍ಸ್ ಗಳನ್ನು ನಿಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಗೆ ಒಟ್ಟು ೭೦ ಟೇಬಲ್‌ಗಳಂತೆ, ೭೦ ಜನ ಎಣಿಕಾ ಮೇಲ್ವಿಚಾರಕರು, ೭೦ ಜನ ಎಣಿಕಾ ಸಹಾಯಕರು ಮತ್ತು ೭೦ ಜನ ಎಣಿಕಾ ಮೈಕ್ರೋ ಅಬ್ಸರ್ವರ್‍ಸ್‌ಗಳನ್ನು ನೇಮಕ ಮಾಡಲಾಗಿದೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೪೫ ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ೧೭ ಸುತ್ತು ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಕನಕಗಿರಿ ಕ್ಷೇತ್ರದಲ್ಲಿ ಒಟ್ಟು ೨೨೫ ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ೧೬ ಸುತ್ತು. ಗಂಗಾವತಿ ಕ್ಷೇತ್ರದಲ್ಲಿ ೨೦೦ ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೧೪ ಸುತ್ತು. ಯಲಬುರ್ಗಾ ಕ್ಷೇತ್ರದಲ್ಲಿ ೨೨೯ ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ೧೬ ಸುತ್ತು. ಹಾಗೂ ಕೊಪ್ಪಳ ಕ್ಷೇತ್ರದಲ್ಲಿ ಒಟು ೨೩೭ ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ೧೭ ಸುತ್ತು ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಾಲೇಜಿನ ನೆಲ ಮಹಡಿಯ ಕೊಠಡಿ ಸಂಖ್ಯೆ ೦೧ ರಲ್ಲಿ ಯಲಬುರ್ಗಾ ಕ್ಷೇತ್ರ, ಕೊಠಡಿ ಸಂಖ್ಯೆ-೦೮ ರಲ್ಲಿ ಕುಷ್ಟಗಿ ಹಾಗೂ ಕೊಠಡಿ ಸಂಖ್ಯೆ ೧೨ ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಮೊದಲನೆ ಮಹಡಿಯ ಕೊಠಡಿ ಸಂಖ್ಯೆ ೨೯ ರಲ್ಲಿ ಗಂಗಾವತಿ ಹಾಗೂ ಕೊಠಡಿ ಸಂಖ್ಯೆ ೩೨ ಮತ್ತು ೩೩ ರಲ್ಲಿ ಕೊಪ್ಪಳ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಪ್ರತಿ ಸಲದಂತೆ ಈ ಬಾರಿಯೂ ನೆಲ ಮಹಡಿಯ ಕೊಠಡಿಯಲ್ಲಿ ಮಾಧ್ಯಮದವರಿಗೆ ಅವಕಾಶ ಕಲ್ಪಿಸಲಾಗಿದೆ. ಮತಎಣಿಕೆಯ ನಂತರ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದು, ಮೆರವಣಿಗೆ ನಡೆಸುವುದು ಹಾಗೂ ಪಟಾಕಿ ಸಿಡಿಸುವುದರಿಂದ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು / ಕಾರ್ಯಕರ್ತರು ಗಲಾಟೆ ನಡೆಸಿ, ಶಾಂತಿ ಕದಡುವುದನ್ನು ತಡೆಗಟ್ಟಲು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಯ ಉದ್ದೇಶದಿಂದ ಮೇ ೦೮ ರಂದು ಮಧ್ಯಾಹ್ನ ೨ ಗಂಟೆಯಿಂದ ಮೇ ೦೯ ರ ಬೆಳಿಗ್ಗೆ ೦೬ ಗಂಟೆಯವರೆಗೆ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯೆ ಸಂಹಿತೆ ೧೪೪ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
0 comments:
Post a Comment