ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅವರಲ್ಲಿ ಭದ್ರತೆಯ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಶಸ್ತ್ರ ಅರೆಸೇನಾ ಪಡೆಯ ಯೋಧರು 'ನಿಮ್ಮೊಂದಿಗೆ ನಾವು' ಕಾರ್ಯಕ್ರಮದನ್ವಯ ಮಂಗಳವಾರ ಗಂಗಾವತಿ ನಗರದ ವಿವಿಧ ಪ್ರದೇಶಗಳಲ್ಲಿ ಅಭಯ ಪಥಸಂಚಲನ ನಡೆಸಿ, ಸಾರ್ವಜನಿಕ ವಲಯದಲ್ಲಿ ಸಂಚಲನವನ್ನುಂಟು ಮಾಡಿದರು.
ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ನಿರ್ಭೀತಿಯಿಂದ ಮತ ಚಲಾವಣೆ ಮಾಡಬೇಕು, ಪುಂಡ-ಪೋಕರಿಗಳು ತಮ್ಮ ಯಾವುದೇ ದುಷ್ಕೃತ್ಯ ನಡೆಸಲು ಸಾಧ್ಯವಿಲ್ಲ. ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ ಎನ್ನುವಂತೆ ಅರೆ ಸೇನಾ ಪಡೆಯ ಶಸ್ತ್ರ ಸಜ್ಜಿತ ಯೋಧರು, ಗಂಗಾವತಿ ನಗರದ ಸರ್ಕಾರಿ ಪ.ಪೂ. ಕಾಲೇಜು ಆವರಣದಿಂದ ಪ್ರಾರಂಭಿಸಿ, ನಗರದ ವಿವಿಧ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು. ವಿಧಾನಸಭಾ ಚುನಾವಣೆಯ ಬಂದೋಬಸ್ತ್‌ಗಾಗಿ ಜಾರ್ಖಂಡ್, ಕೇರಳ ಮುಂತಾದ ರಾಜ್ಯಗಳಿಂದ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಪ್ಯಾರಾ ಮಿಲಿಟರಿ ಪಡೆಯ (ಅರೆ ಸೇನಾ ಪಡೆ) ಸುಮಾರು ೫೦೦ ಕ್ಕೂ ಹೆಚ್ಚು ಸಶಸ್ತ್ರ ಯೋಧರಲ್ಲಿ ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪಡೆ ಸೇರಿದಂತೆ ಜಿಲ್ಲಾ ಮೀಸಲು ಪಡೆಯವರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಗಂಗಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಶಿಸ್ತು ಬದ್ಧರಾಗಿ ಕೈಯಲ್ಲಿ ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದ ಯೋಧರನ್ನು ಸಾರ್ವಜನಿಕರು ಆಶ್ಚರ್ಯ ಚಕಿತರಾಗಿ ವೀಕ್ಷಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಯೋಧರು ಸಂಚರಿಸುತ್ತಿದ್ದರೆ, ಮಹಿಳೆಯರು ತದೇಕಚಿತ್ತರಾಗಿ ಪಥಸಂಚಲನವನ್ನು ವೀಕ್ಷಿಸುತ್ತ, 'ಮಿಲ್ಟ್ರಿ ಮಂದಿ ನಮ್ಮೂರ್‍ನಾಗ ಯಾಕ ಬಂದಾರ್ರಿ', ಎಂದರೆ, ಉಳಿದವರು, ಚುನಾವಣೆ ಐತಲ್ರ್ರಿ, ಎಲೆಕ್ಷನ್‌ನಾಗ ಗಲಾಟೆ ಮಾಡೋ ಪುಂಡ ಪೋಕರಿಗಳಿಗೆ 'ಧಮ್ಕಿ ಹಾಕಾಕ ಮಿಲ್ಟ್ರಿ ಮಂದಿ ಬಂದಾರ'. ಮಿಲ್ಟ್ರಿ ಮಂದಿ ಬಂದಾರ ಅಂದ್ರ, ರೌಡಿಗಳ ಆಟ ಏನೂ ನಡಿಯಾಂಗಿಲ್ಲ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.
ಹೀಗೆ ಗಂಗಾವತಿ ನಗರದ ಪ್ರಮುಖ ನಗರದಲ್ಲಿ ಪಥ ಸಂಚಲನ ನಡೆಸಿದ ಅರೆ ಸೇನಾ ಪಡೆ ಸಾರ್ವಜನಿಕ ವಲಯದಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಯಿತು. ಅರೆ ಸೇನಾ ಪಡೆಯೊಂದಿಗೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳೂ ಸಹ ಸಾಥ್ ನೀಡಿದ್ದು ವಿಶೇಷವಾಗಿತ್ತು. ಡಿವೈಎಸ್‌ಪಿ ವಿನ್ಸೆಂಟ್ ಶಾಂತಕುಮಾರ್, ಸಿ.ಪಿ.ಐ ಉಜ್ಜೇನ್‌ಕೊಪ್ಪ, ನಗರ ಪಿ.ಐ ಜೆ. ನಿಕ್ಕಂ ಅವರು ಸಹ ಪಥ ಸಂಚಲನ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment