ಆನೆಗೊಂದಿ ಉತ್ಸವವನ್ನು ಮಾ. ೨ ಮತ್ತು ೩ ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದರು.
ಆನೆಗೊಂದಿ ಉತ್ಸವ ಆಚರಣೆ ಕುರಿತಂತೆ ಗಂಗಾವತಿ ತಾಲೂಕು ಆನೆಗೊಂದಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಎಂದೇ ಖ್ಯಾತಿ ಹೊಂದಿರುವ ಆನೆಗೊಂದಿಯ ಐತಿಹಾಸಿಕ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಸುವ ಉದ್ದೇಶದಿಂದ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸರ್ಕಾರ ಈಗಾಗಲೆ ಇದಕ್ಕಾಗಿ ೩೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಉತ್ಸವದ ಅದ್ಧೂರಿ ಆಚರಣೆಗೆ ಈ ಅನುದಾನ ಸಾಲದೇ ಇದ್ದರೂ, ಇನ್ನಷ್ಟು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅಲ್ಲದೆ ಸಂಪನ್ಮೂಲ ಕ್ರೋಢೀಕರಣಕ್ಕೆ ಯತ್ನಿಸಲಾಗುವುದು. ಒಟ್ಟಾರೆಯಾಗಿ ಸ್ಥಳೀಯರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯ ಮಟ್ಟದ ಖ್ಯಾತನಾಮ ಕಲಾವಿದರನ್ನೂ ಕರೆಯಿಸಿ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿ, ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಮಾರ್ಚ್ ಎರಡನೆ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿರುವುದರಿಂದ, ಇವೆಲ್ಲ ಸಾಧಕ, ಬಾಧಕಗಳನ್ನು ಅವಲೋಕಿಸಿ, ಮಾರ್ಚ್ ೨ ಮತ್ತು ೩ ರಂದು ಆಚರಿಸಲು ನಿರ್ಧರಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳೇ ಇರಲಿ, ಸಮ್ಮೇಳನ ಅಥವಾ ಉತ್ಸವಗಳೇ ಆಗಲಿ, ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನೆಲೆಯನ್ನು ಗಂಗಾವತಿ ತಾಲೂಕು ಹೊಂದಿದೆ. ಉತ್ಸವದ ಯಶಸ್ವಿಗೆ ಎಲ್ಲ ಜನಪ್ರತಿನಿಧಿಗಳು, ಸಂಘಟನೆಗಳು, ಸಾರ್ವಜನಿಕರು, ಅಧಿಕಾರಿಗಳ ಸಹಕಾರ ಅತ್ಯಂತ ಅವಶ್ಯವಾಗಿದೆ. ಇಂದಿನಿಂದಲೇ ಉತ್ಸವದ ಸಿದ್ಧತೆಯನ್ನು ಪ್ರಾರಂಭಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಸ್ಥಳೀಯರ ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ, ತಾ.ಪಂ. ಸದಸ್ಯೆ ರಾಜೇಶ್ವರಿ ಅವರು ಉತ್ಸವದ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೂ ವಹಿಸಬೇಕು, ಸ್ಥಳೀಯರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಉತ್ಸವದ ಯಶಸ್ವಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ನುಡಿದರು. ಕಾಡಾ ಅಧ್ಯಕ್ಷ ಹೆಚ್. ಗಿರೇಗೌಡ, ಗಣ್ಯರಾದ ಲಲಿತಾರಾಣಿ, ನಾಗರಾಜ ಬಿಲ್ಗಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉತ್ಸವ ಕುರಿತಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ. ಸದಸ್ಯ ಅಮರೇಶ್ ಕುಳಗಿ ಸೇರಿದಂತೆ ಹಲವು ಗಣ್ಯರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment