PLEASE LOGIN TO KANNADANET.COM FOR REGULAR NEWS-UPDATES


 : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕೇಬಲ್ ಟಿ.ವಿ. ಮೂಲಕ ಅಥವಾ ಟಿ.ವಿ. ಚಾನೆಲ್ ಗಳ ಮೂಲಕ ಪ್ರಚಾರ ನಡೆಸುವುದಕ್ಕೆ ಮುನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಕೇಬಲ್ ಆಪರೇಟರ್‌ಗಳು ಮತ್ತು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆ ನೀಡಿದ್ದಾರೆ.
  ಚುನಾವಣೆ ಸಂದರ್ಭದಲ್ಲಿ ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ನಿಯಂತ್ರಣಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ವಾರ್ತಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೊಪ್ಪಳ ತಹಸಿಲ್ದಾರರು ಜಿಲ್ಲಾ ಮಟ್ಟದ ಸಮಿತಿಯ ಸದಸ್ಯರುಗಳಾಗಿರುತ್ತಾರೆ.
  ಕೇಬಲ್ ಆಪರೇಟರ್‌ಗಳಿಗೂ ಸಹ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ತಾವು ಪ್ರಸಾರ ಮಾಡುವ ಯಾವುದೇ ಚುನಾವಣಾ ಪ್ರಚಾರದ ವಿಷಯಕ್ಕೆ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರಗೊಳಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವಂತಹ ಯಾವುದೇ ಪ್ರಚಾರದ ವಿಡಿಯೋ ಅಥವಾ ಧ್ವನಿಮುದ್ರಿಕೆ ಪ್ರಸಾರಗೊಂಡಲ್ಲಿ ಅಂತಹ ಕೇಬಲ್ ಆಪರೇಟರ್‌ಗಳ ಎಲ್ಲ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 
  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ/ವಯಕ್ತಿಕ ಚುನಾವಣಾ ಪ್ರಚಾರವನ್ನು ವಿವಿಧ ಮಾಧ್ಯಮಗಳ ಮೂಲಕ ಮಾಡಲಿದ್ದು, ಇಂತಹ ಪ್ರಚಾರಗಳಲ್ಲಿ ನೈತಿಕತೆ, ಸಭ್ಯತೆ ಸೂಕ್ಷತೆ ಮೀರುವಂತಹ ಅಂಶಗಳನ್ನು ತಮ್ಮ ಪ್ರಚಾರಗಳಲ್ಲಿ ಬಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವಂತಹುದನ್ನು ನಿಯಂತ್ರಿಸುವ ಸಲುವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪುಗಳ ಅನ್ವಯ ಭಾರತ ಚುನಾವಣಾ ಆಯೋಗದವು ಪಾಲಿಸುವ ಮಾದರಿಯಂತೆ ರಾಜ್ಯ ಚುನಾವಣಾ ಆಯೋಗವು ಕೂಡ ಸಮಿತಿಯನ್ನು ರಚಿಸಿ, ಪ್ರಚಾರ ನಿಯಂತ್ರಣಕ್ಕೆ ಉದ್ದೇಶಿಸಿದೆ.  ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದು, ಟಿ.ವಿ. ಚಾನಲ್ ಅಥವಾ ಕೇಬಲ್ ನೆಟ್‌ವರ್ಕ್‌ಗಳಲ್ಲಿ ಪ್ರಚಾರ ನೀಡಬಯಸುವ ಪ್ರತಿಯೊಂದು ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಅಥವಾ ಸ್ಪರ್ಧಿಸುವ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಯು ಅಂತಹ ಪ್ರಚಾರದ ದೂರದರ್ಶನ ಪ್ರಸಾರ ಪ್ರಾರಂಭವಾಗುವ ದಿನಾಂಕಕ್ಕಿಂತ ಮೂರು ದಿನ ಮೊದಲು ಅರ್ಜಿ ಸಲ್ಲಿಸಬೇಕು.  ಯಾವುದೇ ವ್ಯಕ್ತಿ ಅಥವಾ ನೋಂದಾಯಿತವಲ್ಲದ ರಾಜಕೀಯ ಪಕ್ಷವಾದಲ್ಲಿ, ದೂರದರ್ಶನ ಪ್ರಸಾರ ಪ್ರಾರಂಭದ ದಿನಾಂಕಕ್ಕಿಂತ ೦೭ ದಿನ ಮೊದಲು ಅರ್ಜಿ ಸಲ್ಲಿಸಬೇಕು.  ಅಂತಹ ಅರ್ಜಿಯು ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳನ್ನು ವಿದ್ಯುನ್ಮಾನ ರೂಪದಲ್ಲಿ (ಸಿ.ಡಿ) ಹಾಗೂ ಜೊತೆಗೆ ದೃಢೀಕೃತಗೊಂಡಿರುವ ಅದರ ಸಂಭಾಷಣೆಯ ಹಸ್ತಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.  ಇದಕ್ಕಾಗಿ ನಿಗದಿತ ನಮೂನೆಯನ್ನು ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿದ್ದು, ಈ ಅರ್ಜಿ ನಮೂನೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದಲ್ಲಿ ಲಭ್ಯವಿರುತ್ತದೆ.  ಅಥವಾ ಕೊಪ್ಪಳದ ವೆಬ್‌ಸೈಟ್  www.koppal.nic.in  ನಿಂದಲೂ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗಕ್ಕೆ ಸಲ್ಲಿಸಬೇಕು.  ಅರ್ಜಿ ಸಲ್ಲಿಸಿದ ಮೂರು ದಿನಗಳ ಒಳಗಾಗಿ ಅಂತಹ ಜಾಹೀರಾತನ್ನು ಪರಿಶೀಲಿಸಿ, ಪ್ರಚಾರ ವಿಷಯ ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಅರ್ಹತೆಯ ಪ್ರಮಾಣಪತ್ರ ನೀಡುವರು.
  ರಾಜ್ಯ ಚುನಾವಣಾ ಆಯೋಗವು ದಿನಾಂಕ: ೧೭-೧೨-೨೦೧೨ ರಂದು ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಹೊರಡಿಸಿರುವ ಆದೇಶವನ್ನು ಎಲ್ಲ ಕೇಬಲ್ ಆಪರೇಟರ್‌ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top