ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ವಕೀಲರಿಗಾಗಿ ಏರ್ಪಡಿಸಲಾದ ನಾಲ್ಕು ದಿನಗಳ ಮಧ್ಯಸ್ಥಿಕಾ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೊಪ್ಪಳ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಿಗಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಸೀನಿಯರ್ ಸಿವಿಲ್ ಜಡ್ಜ್ ಶಿವರಾಮ ಕೆ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ರಾಜ್ಯ ವಕೀಲರ ಪರಿಷತ್ತಿನ ಲಾ ಅಕಾಡೆಮಿ ಸದಸ್ಯರಾದ ಸಂದ್ಯಾ ಬಿ.ಮಾದಿನೂರ, ಮಧ್ಯಸ್ಥಿಕಾ ತರಬೇತಿದಾರರಾಗಿದ್ದ ವಕೀಲ ಪ್ರಸಾದ ಸುಬ್ಬಣ್ಣ, ಮಧ್ಯಸ್ಥಿಕಾ ಕೇಂದ್ರದ ಟ್ರೇನರ್ ಶೀಲಾಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಅನೇಕ ವಕೀಲರುಗಳು ಮಧ್ಯಸ್ಥಿಕಾ ವ್ಯವಸ್ಥೆಯ ತರಬೇತಿ ಪಡೆದುಕೊಂಡರು. ಕೊಪ್ಪಳದಲ್ಲಿ ಮಧ್ಯಸ್ಥಿಕಾ ತರಬೇತಿ ಕೇಂದ್ರಕ್ಕೆ ಶಿಫಾರಸ್ಸುಗೊಂಡ ೨೩ ಪ್ರಕರಣಗಳ ಪೈಕಿ ೦೪ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
0 comments:
Post a Comment