ಸ್ಥಳೀಯ ಸಂಸ್ಥೆ ಚುನಾವಣೆ :
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಬಯಸುವವರು ತಮ್ಮ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮ ಹಾಗೂ ಸಲ್ಲಿಸಬೇಕಾಗಿರುವ ಅಗತ್ಯ ದಾಖಲೆಗಳ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆಗಳನ್ನು ನೀಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಕನಿಷ್ಠ ೨೧ ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳು ನಾಮ ಪತ್ರದಲ್ಲಿ ತಮ್ಮ ಭಾವಚಿತ್ರವನ್ನು ಲಗತ್ತಿಸಬೇಕು. ಚರ ಮತ್ತು ಸ್ಥಿರಾಸ್ತಿಗಳ ಕುರಿತು ಪ್ರಮಾಣ ಪತ್ರವನ್ನು ರೂ.೨೦.೦೦ ಬಾಂಡ್ ಪೇಪರ್ ಮೇಲೆ ಸಲ್ಲಿಸಬೇಕು. ಚರ ಮತ್ತು ಸ್ಥಿರಾಸ್ತಿಗಳ ಪ್ರಮಾಣ ಪತ್ರವನ್ನು ನೋಟರಿ ಮುಂದೆ ಪ್ರಮಾಣೀಕರಿಸಬೇಕು. ಚರ ಮತ್ತು ಸ್ಥಿರಾಸ್ತಿಗಳ ಪ್ರಮಾಣ ಪತ್ರದ ೨ ಮೂಲ ಪ್ರತಿಗಳು ಮತ್ತು ೧ ಝೆರಾಕ್ಸ್ ಪ್ರತಿಯನ್ನು ಚುವಾನಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ವಾರ್ಡಿಗೆ ಮೀಸಲಾಗಿರುವ ಮೀಸಲಾತಿಯಂತೆ ಮೀಸಲಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಚುನಾವಣೆಗಾಗಿ ನೀಡಲ್ಪಟ್ಟಿರುವ ಹಿಂದುಳಿದ "ಎ" ಪ್ರವರ್ಗ, ಹಿಂದುಳಿದ "ಬಿ" ಪ್ರವರ್ಗಗಳ ಪ್ರಮಾಣ ಪತ್ರವನ್ನು ಲಗತ್ತಿಸಿಬೇಕು. ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಕ್ಷೇತ್ರಗಳಿಗೆ ಆಯಾ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಮತ ಪತ್ರದಲ್ಲಿ ಅಭ್ಯರ್ಥಿಯ ಹೆಸರು ಯಾವ ರೀತಿ ಇರಬೇಕೆಂಬುದರ ಕುರಿತು ಅಭ್ಯರ್ಥಿಯ ಹೆಸರು ಮತ್ತು ಮಾದರಿ ಸಹಿಯನ್ನು ನೀಡಬೇಕು. ಇದರ ಜೊತೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು.
ಚುನಾವಣೆಗೆ ಸ್ಪರ್ಧಿಸಬಯಸುವವರು ಸಲ್ಲಿಸುವ ಠೇವಣಿ ಮೊತ್ತದ ವಿವರ ಇಂತಿದೆ. ನಗರಸಭೆಗೆ ಸಾಮಾನ್ಯ ಅಭ್ಯರ್ಥಿಗೆ ರೂ. ೨೦೦೦, ಹಿಂದುಳಿದ ವರ್ಗ/ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ ರೂ. ೧೦೦೦ ಗಳಂತೆ ಠೇವಣಿ ನಿಗದಿಪಡಿಸಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಗಳ ಠೇವಣಿ ಮೊತ್ತ ಸಾಮಾನ್ಯ ಅಭ್ಯರ್ಥಿಗೆ ರೂ. ೧೦೦೦, ಹಿಂದುಳಿದ ವರ್ಗ/ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ ರೂ. ೫೦೦ ಗಳಂತೆ ಠೇವಣಿ ನಿಗದಿಪಡಿಸಲಾಗಿದೆ.
ಮಾನ್ಯತೆ ಪಡೆದ ಪಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿದ್ದಲ್ಲಿ ಬಿ-ಫಾರ್ಮ್( ನಮೂನೆ-ಬಿ) ಮತ್ತು ಮಾನ್ಯತೆ ಪಡೆಯದ ನೊಂದಾಯಿತ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿದ್ದಲ್ಲಿ ಡಿ-ಫಾರ್ಮ್ (ನಮೂನೆ-ಡಿ)ಯಲ್ಲಿ ಸಲ್ಲಿಸಬೇಕು. ಬಿ-ಫಾರ್ಮ್ ಮತ್ತು ಡಿ-ಫಾರ್ಮ್‌ಗಳನ್ನು ಕಡ್ಡಾಯವಾಗಿ ದಿನಾಂಕ:೨೩.೦೨.೨೦೧೩ರ ೩.೦೦ ಗಂಟೆ ಒಳಗಡೆ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸಬೇಕು.
ಚುನಾವಣೆಯಲ್ಲಿ ಸ್ಪರ್ದಿಸಲು ನಾಮಪತ್ರದಲ್ಲಿ ಸಹಿ ಮಾಡಬೇಕಾದ ಸೂಚಕರ ಸಂಖ್ಯೆಯನ್ನು ನಿಗದಿಪಡಿಸಲಾಗಿದ್ದು, ನಗರಸಭೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ ೦೧ ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-೦೫. ಪುರಸಭೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ ೦೧ ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-೦೪. ಪಟ್ಟಣ ಪಂಚಾಯತಿ ಚುನಾವಣೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ ೦೧ ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-೦೩ ಕಡ್ಡಾಯಗೊಳಿಸಲಾಗಿದೆ. ಸೂಚಕರು ಕಡ್ಡಾಯವಾಗಿ ಅದೇ ವಾರ್ಡಿನ ಮತದಾರನಾಗಿರಬೇಕು ಮತ್ತು ಅಭ್ಯರ್ಥಿಯು ನಗರ ವ್ಯಾಪ್ತಿಯ ಯಾವುದೇ ವಾರ್ಡಿನ ಮತದಾರನಾಗಿರಬೇಕು. ನಾಮ ಪತ್ರದಲ್ಲಿ ನಮೂದಿಸಿದ ಅಭ್ಯರ್ಥಿಯ ಮತ್ತು ಅವರ ಸೂಚಕರ ಹೆಸರುಗಳು ಮತ್ತು ಅವರುಗಳ ಕ್ರಮ ಸಂಖ್ಯೆಗಳು ಮುನ್ಸಿಪಾಲಿಟಿ ಮತದಾರರ ಪಟ್ಟಿಯಲ್ಲಿ ನಮೂದಿಸಿದಂತೆಯೇ ಇರಬೇಕು. ಒಬ್ಬ ಅಭ್ಯರ್ಥಿಯು ನಾಲ್ಕು ನಾಮ ಪತ್ರಗಳನ್ನು ಮಾತ್ರ ಸಲ್ಲಿಸತಕ್ಕದ್ದು. ಠೇವಣಿ ಮೊತ್ತವನ್ನು ಒಂದು ಸಲ ಮಾತ್ರ ತುಂಬಬೇಕು. ಚುನಾವಣಾ ಅಧಿಕಾರಿ ಕೊಠಡಿಗೆ ಅಭ್ಯರ್ಥಿ ಹಾಗೂ ಇತರೆ ೪ ಜನ ಸೇರಿದಂತೆ ಒಟ್ಟು ೫ ಜನ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ರಿಟರ್ನಿಂಗ್ ಅಧಿಕಾರಿಯ ಕಛೇರಿಯ ನೂರು ಮೀಟರ್ ಸುತ್ತಳತೆಯಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ೨ ವಾಹನಗಳಿಗೆ ಮಾತ್ರ ಅನುಮತಿ ಇರುತ್ತದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಸ್ಪರ್ಧಿಸಬಯಸುವವರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
0 comments:
Post a Comment