PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜ.   ಜಿಲ್ಲೆಯಲ್ಲಿ ಜ. ೨೦ ರಿಂದ ೨೩ ರವರೆಗೆ ಮೊದಲನೆ ಹಂತ ಹಾಗೂ ಫೆ. ೨೪ ರಿಂದ ೨೬ ರವರೆಗೆ ಎರಡನೆ ಹಂತದದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲೆಯ ೨೦೪೬೬೬ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.  ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಶಿಕ್ಷಕರು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದ್ದಾರೆ.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 
  ಜಿಲ್ಲೆಯಲ್ಲಿ ಜ. ೨೦ ರಿಂದ ೨೩ ರವರೆಗೆ ಮೊದಲನೆ ಹಂತ ಹಾಗೂ ಫೆ. ೨೪ ರಿಂದ ೨೬ ರವರೆಗೆ ಎರಡನೆ ಹಂತದ ತಲಾ ೦೪ ದಿನಗಳ ಕಾಲ ೦೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯ ೨೦೪೬೬೬ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.  ಆ ಪೈಕಿ ೧೬೭೪೩೦ ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, ೩೭೨೩೬ ಮಕ್ಕಳು ನಗರ ಪ್ರದೇಶದವರಾಗಿದ್ದಾರೆ.  ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು ೨೭೫೯೬೩ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ಮೊದಲ ಹಂತದಲ್ಲಿ ಜ. ೨೦ ರಂದು ಹಾಗೂ ಎರಡನೆ ಹಂತದಲ್ಲಿ ಫೆ. ೨೪ ರಂದು ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು ೮೫೩ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಜ. ೨೧ ರಿಂದ ೨೩ ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು.  ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ವಿಶೇಷ ಬೂತ್‌ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು.  ಅಲ್ಲದೆ ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ, ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ಮಕ್ಕಳಿಗೂ ಸಹ ಪೋಲಿಯೋ ಲಸಿಕೆ ನೀಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜ. ೨೦  ಭಾನುವಾರ ಇದ್ದರೂ ಕೂಡ ಅಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಭಾನುವಾರದ ರಜೆಯನ್ನು ರದ್ದುಪಡಿಸಲಾಗಿದ್ದು, ಅಂದು ಎಂದಿನಂತೆ ಶಾಲೆಗಳು ಕಾರ್ಯನಿರ್ವಹಿಸಬೇಕು.  ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಿದ್ದು, ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.  ಪಾಲಕರು ೦೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು.  ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಇನ್ನರ್ ವ್ಹೀಲ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಕೆಲವೊಂದು ಲಸಿಕಾ ಕೇಂದ್ರಗಳು ಶಾಲೆಗಳಲ್ಲಿ ನಿಗದಿಪಡಿಸಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯಲ್ಲಿ ಲಸಿಕಾ ಕೇಂದ್ರಕ್ಕಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು, ಮಕ್ಕಳಿಂದ ಪ್ರಬಾತ ಫೇರಿ, ಜಾಥಾ ಏರ್ಪಡಿಸುವುದು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಹೆಚ್ಚಿನ ಪ್ರಚಾರ ಒದಗಿಸಬೇಕು.  ಜೆಸ್ಕಾಂ ನವರು ಪೋಲಿಯೋ ಲಸಿಕೆಯ ದಾಸ್ತಾನು ಮತ್ತು ವಿತರಣೆಗೆ ಅನುಕೂಲವಾಗುವಂತೆ ಜ. ೧೯ ರಿಂದ ೨೩ ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಕಳೆದ ವರ್ಷ ಜಿಲ್ಲೆಯಲ್ಲಿ ಏರ್ಪಡಿಸಲಾದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಶ್ರಮಿಸಿದ ಫಲವಾಗಿ ಕಳೆದ ವರ್ಷ ಜಿಲ್ಲೆಯಲ್ಲಿ ಯಾವುದೇ ಪೋಲಿಯೋ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.  
   ಬಳ್ಳಾರಿ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ೨೦೧೨ ರಲ್ಲಿ ಜಗತ್ತಿನ ೦೪ ರಾಷ್ಟ್ರಗಳಲ್ಲಿ  ಪೋಲಿಯೋ ಪ್ರಕರಣಗಳು ವರದಿಯಾಗಿವೆ.  ಭಾರತದಲ್ಲಿ ೨೦೧೧ ರಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಸಮಾಧಾನಕರ ಸಂಗತಿಯೆಂದರೆ ೨೦೧೨ ರಲ್ಲಿ ದೇಶದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.  ಆದಾಗ್ಯೂ ದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಪಾಕಿಸ್ತಾನ, ನೈಜೀರಿಯಾ ಆಫ್‌ಘಾನಿಸ್ತಾನ ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿವೆ.  ಈ ದೇಶಗಳು ನೆರೆಯ ರಾಷ್ಟ್ರಗಳಾಗಿರುವುದರಿಂದ, ಈ ರಾಷ್ಟ್ರಗಳಿಂದ ಭಾರತಕ್ಕೆ ಹರಿದುಬರುವ ನದಿಗಳ ಮೂಲಕ ವೈರಸ್‌ಗಳು ನಮ್ಮ ದೇಶಕ್ಕೂ ಹರಡುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ.  ಭಾರತದಲ್ಲಿ  ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಹೈರಿಸ್ಕ್ ವಲಯವೆಂದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.  ಒಟ್ಟಾರೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸಲು ಎಲ್ಲರ ಸಹಕಾರ ಅತಿ ಮುಖ್ಯ ಎಂದರು.  ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ: ರಮೇಶ್ ಮೂಲಿಮನಿ ಅವರು ಪೋಲಿಯೋ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.  
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಹೆಚ್. ಮಾದರ್ ಸೇರಿದಂತೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು,  ರೋಟರಿ, ಇನ್ನರ್ ವ್ಹೀಲ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. 

Advertisement

0 comments:

Post a Comment

 
Top