PLEASE LOGIN TO KANNADANET.COM FOR REGULAR NEWS-UPDATES



- ಸಂಸದ ಶಿವರಾಮಗೌಡ
ಕೊಪ್ಪಳ ಜ.   : ದೇಶದ ಉತ್ತಮ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಶಿಕ್ಷಣದ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅಗತ್ಯವಿದೆ.  ಉದ್ಯೋಗಕ್ಕಾಗಿ ಶಿಕ್ಷಣ ಎಂಬ ನೀತಿಯಲ್ಲಿ ಬದಲಾವಣೆ ತರಲು ಇದೀಗ ಕಾಲ ಪಕ್ವವಾಗಿದೆ ಎಂದು ಸಂಸದ ಶಿವರಾಮಗೌಡ ಅವರು ಅಭಿಪ್ರಾಯಪಟ್ಟರು.
  ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದಲ್ಲಿ ೧.೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಭವಿಷ್ಯದಲ್ಲಿ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಗೆ ಗುರುತಿಸುವಂತೆ ಮಾಡಲು, ನಮ್ಮ ದೇಶದ ಶಿಕ್ಷಣ ನೀತಿಯಲ್ಲಿ ಸಮಗ್ರ ಬದಲಾವಣೆ ತರುವ ಅಗತ್ಯವಿದೆ.  ಉದ್ಯೋಗಾಧಾರಿತ ಶಿಕ್ಷಣ ನೀತಿಯನ್ನು ಬದಲಾಯಿಸಿ, ಯುವ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಶಿಕ್ಷಣ, ಸ್ವಯಂ ಉದ್ಯೋಗ, ತಂತ್ರಜ್ಞಾನ ಆಧಾರಿತ ಉದ್ಯಮಗಳತ್ತ ಆಸಕ್ತರನ್ನಾಗಿಸಬೇಕಿದೆ.  ದೇಶದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಬಹಳಷ್ಟು ಕಡಿಮೆ ಇರುವ ಬಗ್ಗೆ ದೇಶದ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.  ಇನ್ನು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿದೆಯಾದರೂ, ಬಡತನದ ನೆಪವೊಡ್ಡಿ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ, ದುಡಿಮೆಗೆ ಹಚ್ಚುವವರು ಹೆಚ್ಚಾಗಿದ್ದಾರೆ.  ಇದೇ ಪರಿಸ್ಥಿತಿ ಮುಂದುವರೆದಲ್ಲಿ, ಉನ್ನತ ಶಿಕ್ಷಣ ದೇಶದಲ್ಲಿ ಕುಂಠಿತಗೊಳ್ಳಲಿದೆ.  ದೇಶದಲ್ಲಿ ಬಡವಂತರು, ಸಿರಿವಂತರು ಎನ್ನದೆ ಎಲ್ಲರ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸಿದೆ.  ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗಬೇಕಾದರೆ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಪ್ರಾರಂಭವಾಗಬೇಕು.  ಎಲ್ಲರ ಪ್ರಯತ್ನದ ಫಲವಾಗಿ ಕೊಪ್ಪಳಕ್ಕೆ ಇದೀಗ ಮೆಡಿಕಲ್ ಕಾಲೇಜು ಮಂಜೂರಾಗಿದೆ.  ಅದೇ ರೀತಿ ಗಂಗಾವತಿಯಲ್ಲಿ ಕೃಷಿ ಕಾಲೇಜು ಪ್ರಾರಂಭವಾಗಬೇಕೆನ್ನುವ ಬೇಡಿಕೆಗೆ ಸರ್ಕಾರ ಮನ್ನಣೆ ನೀಡುವ ಅಗತ್ಯವಿದೆ.  ಇರಕಲ್ಲಗಡ ಗ್ರಾಮದ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿದಲ್ಲಿ, ರಸ್ತೆ ಸುಧಾರಣೆ ಹಾಗೂ ಸೌಂದರೀಕರಣಕ್ಕೆ ಸಂಸದರ ಅನುದಾನ ಒದಗಿಸಲಾಗುವುದು ಎಂದು ಸಂಸದ ಶಿವರಾಮಗೌಡ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವ ಗುರುತರ ಹೊಣೆ ಜಿಲ್ಲೆಯ ಸಮಗ್ರ ವಿದ್ಯಾರ್ಥಿಗಳ ಮೇಲಿದೆ.  ಜಿಲ್ಲೆಯಲ್ಲಿ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದರೂ, ಅವರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ, ಹಿನ್ನಡೆ ಅನುಭವಿಸುವಂತಾಗಿದೆ.  ಉನ್ನತ ಶಿಕ್ಷಣದ ಸೌಲಭ್ಯ ಜಿಲ್ಲೆಯಲ್ಲಿ ಇಲ್ಲವೆಂಬ ಕೊರಗನ್ನು ಇದೀಗ ಸರ್ಕಾರ ನಿವಾರಿಸಿದ್ದು, ಗಂಗಾವತಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗಿದೆ.  ಕೃಷ್ಣ-ಬಿ ಸ್ಕೀಂ ಅಡಿ ಜಿಲ್ಲೆಗೆ ದೊರೆಯುವ ನೀರನ್ನು ಸದುಪಯೋಗಪಡಿಸಿಕೊಳ್ಳಲು, ಇಲ್ಲಿನ ರೈತರ ಜಮೀನಿಗೆ ನೀರಾವರಿ ಒದಗಿಸಬಹುದಾದ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ.  ಈಗಾಗಲೆ ಈ ಕುರಿತಂತೆ ಸ್ಥಳೀಯ ರೈತರೊಂದಿಗೆ ಸಮಾಲೊಚನೆ ನಡೆಸಲಾಗಿದೆ ಎಂದರು.
  ಕುದರಿಮೋತಿ ಮಠದ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಎಸ್. ಪಟ್ಟಣಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಶರಣಪ್ಪ ಪಟ್ಟಣಶೆಟ್ಟಿ, ಗಣ್ಯರಾದ ಸಂಗನಗೌಡ ಪಾಟೀಲ, ವೀರಬಸಪ್ಪ ಪಟ್ಟಣಶೆಟ್ಟಿ, ವೀರಬಸಪ್ಪ ಶೆಟ್ಟರ್, ಬಸವರಾಜ ಮೂಲಿಮನಿ, ರಾಮಚಂದ್ರ ದೇಸಾಯಿ, ಮಂಜುನಾಥ ಸಿದ್ದಾಪುರ, ಮನೋಹರ್, ಬಸವರಾಜ ಪಿನ್ನಿ, ಹನುಮೇಶ್ ಶೆಟ್ಟರ್, ಕಾಲೇಜು ಕಟ್ಟಡಕ್ಕೆ ಸ್ಥಳ ದಾನ ಮಾಡಿದ ಶ್ರೀನಾಥರೆಡ್ಡಿ, ಮಲ್ಲಪ್ಪ ಪಟ್ಟಣಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಿದ್ದರು, ಹೆಚ್.ಎಮ್. ಗುಡಿಹಿಂದಿನವರ್ ಸ್ವಾಗತಿಸಿದರು, ಶೃತಿ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು, ಕೆ.ಎಸ್. ಛತ್ರದ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top