PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಇತ್ತೀಚೆಗೆ ದೇಶದೆಲ್ಲೆಡೆ ನಡೆಯುತ್ತಿರುವ ಅತ್ಯಾಚಾರ ವಿರೋಧಿ ಹೋರಾಟಕ್ಕೆ ಎಲ್ಲರೂ ಬೆಂಬಲಿಸೋಣ. ಏನು ತಪ್ಪು ಮಾಡಿದರೂ ನಡೆಯುತ್ತೆ, ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವಂತಹ ವಾತಾವರಣದಿಂದಾಗಿ ಅಪರಾಧಿಗಳು ಯಾವುದೇ ಅಂಜಿಕೆ ಇಲ್ಲದೇ ಕೊಲೆ,ಅತ್ಯಾಚಾರಗಳಲ್ಲಿ ತೊಡಗಿದ್ದಾರೆ. ಇದನ್ನು ತಡೆಗಟ್ಟಲು ಕಾನೂನು ಇನ್ನಷ್ಟು ಉಗ್ರವಾಗಬೇಕಿದೆ. ಅದರೊಂದಿಗೆ ನಮ್ಮ ಪುರುಷಪ್ರದಾನ ಸಮಾಜದ ಮನಸ್ಥಿತಿಯೂ ಬದಲಾಗಬೇಕಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡುತ್ತಾ ಸದಾಕಾಲವೂ ತುಳಿಯುತ್ತಲೇ ಬಂದಿದೆ. ನಮ್ಮ ಜಿಲ್ಲೆಯಲ್ಲಿಯೇ ಹಲವಾರು ಪ್ರಕರಣಗಳೂ ನಡೆದರೂ ಹೇಗಾದರೂ ಮಾಡಿ ಅವನ್ನು ಮುಚ್ಚಿ ಹಾಕಲಾಗುತ್ತಿದೆ. ಇಂತಹ ಘಟನೆಗಳ ವಿರುದ್ಧ ಹೋರಾಟ ಮಾಡಬೇಕು,ಸ್ತ್ರೀಯರಿಗೆ ರಕ್ಷಣೆ ನೀಡುವ ಕೆಲಸವಾಗಬೇಕು ಎಂದು ಹಿರಿಯ ಸಾಹಿತಿ,ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ನಗರದ ನೌಕರರ ಭವನದ ಮೇಲ್ಭಾಗದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೩೬ನೇ ಕವಿಸಮಯದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿರುವ ದೆಹಲಿ ಅತ್ಯಾಚಾರ ಪ್ರಕರಣದ ಬಗ್ಗೆ ನಡೆದ ಚರ್ಚೆಯಲ್ಲಿ ಅಮಾಯಕ ಹೆಣ್ಣೊಬ್ಬಳ ಸಾವು ಇಂತಹದ್ದೊಂದು ಹೋರಾಟಕ್ಕೆ ನಾಂದಿಯಾಗಿದೆ.ಇದುವರೆಗೆ ಅದುಮಿಟ್ಟ ಆಕ್ರೋಶ ಹೋರಹೊಮ್ಮಿದೆ. ಈ ಹೋರಾಟ ಎಲ್ಲೆಡೆ ನಿರಂತರವಾಗಿ ನಡೆದು ಹೆಣ್ಣಿನ ಮೇಲಿನ ಶೋಷಣೆ,ಅತ್ಯಾಚಾರ ನಿಲ್ಲುವಂತಾಗಬೇಕೆಂದು ಕವಿಸಮೂಹ ಅಭಿಪ್ರಾಯಪಟ್ಟಿತು.ಮೃತಳ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಇದಕ್ಕೂ ಮೊದಲು ನಡೆದ ಕಾರ್‍ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿರುವ ಕವಿ ಆರೀಫ್ ರಾಜಾ ಹಾಗೂ ಹೆಚ್.ಎಸ್.ಶಿವಪ್ರಕಾಶರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.ನಂತರ ನಡೆದ ಕವಿಗೋಷ್ಠಿಯಲ್ಲಿ ಎನ್ ಜಡೆಯಪ್ಪ-ವಿಪರ್‍ಯಾಸ,ಪುಷ್ಪಲತಾ ಏಳುಬಾವಿ- ಕಲ್ಪವೃಕ್ಷ ಇದ್ದಿದ್ದರೆ, ಶಾಂತಾದೇವಿ ಹಿರೇಮಠ- ಪ್ರಳಯಕಾಲ, ಶರಣಪ್ಪ ದಾನಕೈ-  ಸುಮ್ಮನೆ, ಉಮೇಶ ಪೂಜಾರ- ನಾಯಕ,ಕಾಯಕ ಚುಟುಕು,  ಈರಪ್ಪ ಪೂಜಾರ- ಹುಟ್ಟುತಲಿ, ಅನಸೂಯಾ ಜಾಗೀರದಾರ- ಹೋರಾಟ, ಸಿರಾಜ್ ಬಿಸರಳ್ಳಿ- ಡುಂಡಿರಾಜ್ ರ ಚುಟುಕುಗಳ ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ,ಶಿವಪ್ರಸಾದ ಹಾದಿಮನಿ ಸೇರಿದಂತೆ ಇತರರು ಉಪಸ್ತಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು ಅನಸೂಯಾ ಜಾಗೀರದಾರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top