PLEASE LOGIN TO KANNADANET.COM FOR REGULAR NEWS-UPDATES


ಸಚಿನ್ ತೆಂಡೂಲ್ಕರ್ ರ ವ್ಯಕ್ತಿ ವಿಶ್ಲೇಷಣೆ (ಎಲ್ಲ ಕ್ರಿಕೆಟ್ ನ ಅಂಕಿಅಂಶಗಳನ್ನು ಹೊರತು ಪಡಿಸಿ)
ವಿಶ್ವಕ್ಕೆ ಸಚಿನ್ ತೆಂಡೂಲ್ಕರ್ ಭಾರತೀಯ ಮಾತ್ರವಲ್ಲದೇ ಜಾಗತಿಕ ಕ್ರಿಕೆಟ್ ನ  ರಾಯಭಾರಿ. ಭಾರತೀಯರಿಗೆ ಮೊದಲು ‘ಸಚಿನ್    ತೆಂಡೂಲ್ಕರ್’ ನಂತರ ‘ಕ್ರಿಕೆಟ್’  ಎಂಬ ವಿಷಯಕ್ಕೆ ಆದ್ಯತೆ. ಹೊಗಳಿಕೆಗಳ ಒಳಾಂಶಗಳನ್ನು, ಟೀಕೆಗಳನ್ನು ಅರ್ಥೈಸಿಕೊಳ್ಳಲು ಇನ್ನೂ ಪ್ರಬುದ್ಧ ಮನೋಸ್ಥಿತಿ ಹೊಂದಿರದಿರುವಾಗಲೇ ಸಚಿನ್ ತನ್ನ ಕ್ರಿಕೆಟ್ ಕರಿಯರ್ ನ ಕಾಲು ಭಾಗವನ್ನು ಸವಿಸಿಯಾಗಿತ್ತು. ಬಹುಶಃ ಅದೂ ಅವರಿಗೆ ಒಳ್ಳೆಯದೇ ಆಯಿತೆನ್ನಬಹುದು. 
ಭಾರತೀಯರಲ್ಲಿ ಸಾಧನೆಯ ಮುನ್ನುಡಿ ಬರೆಯುತ್ತಿರುವಾಗಲೇ ವ್ಯಕ್ತಿ ಆರಾಧನೆ ಪ್ರಾರಂಭವಾಗಿಬಿಡುತ್ತದೆ. ಅತಿಯಾದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಅತೀಯಾದ ನಿರೀಕ್ಷೆಗಳು ಆಟಗಾರನಿಗೂ ಒತ್ತಡ ಉಂಟುಮಾಡಿ ಸಹಜ ಆಟಕ್ಕೆ ಅಡ್ಡಿಯಾಗುವಂತೆ ಮಾಡಿಬಿಡುತ್ತವೆ. ಸಹಜವಾಗಿ ಆ ನಿರೀಕ್ಷೆಗಳನ್ನು ಆ ವ್ಯಕ್ತಿ ತಲುಪದಿದ್ದಾಗ ಅವರ ಬಗ್ಗೆ ಬಹುಬೇಗ ಬೇಸರ ಉಂಟಾಗುತ್ತದೆ. ಇದು ಉಳಿದೆಲ್ಲರಿಗಿಂತ ಹೆಚ್ಚು ಸಲ ‘ಸಚಿನ್ ಮತ್ತು ಅಭಿಮಾನಿ ಬಳಗ’ ಕ್ಕೆ ಉಂಟಾಗಿದೆ. 
ಮಾಧ್ಯಮ ಕ್ಷೇತ್ರದಲ್ಲಿ  ‘ಕ್ರಿಕೆಟ್’ ಬಿಸಿಯಾದ ಬಹು ಬೇಡಿಕೆಯ ಸರಕು. ಮಾಧ್ಯಮಗಳ ಕಣ್ಣು ಉಳಿದೆಲ್ಲ ಆಟಗಳಿಗಿಂತ ಇದರ ಮೇಲೆ ಹೆಚ್ಚು. ಅಲ್ಪ ಸಾಧನೆಯನ್ನು ಅತೀ ರಂಜನೀಯವಾಗಿ ತೋರಿಸಿ ಅತೀ ನಿರೀಕ್ಷೆಗಳನ್ನು ಆ ಸಾಧಕನ ಮೇಲೆ ಇಟ್ಟುಕೊಳ್ಳುವಂತೆ ಮಾಡಿಬಿಡುತ್ತವೆ. ಸಾಧನೆಯ ಹಾದಿಯಲ್ಲಿ ಎಡವಿದಾಗ ತಮ್ಮವೇ ಆದ ೧೦೮ ಕಾರಣಗಳನ್ನು ಕೊಟ್ಟು ‘ಸಾಧಕನಿಂದಾದ ತಪ್ಪು’ ಎಂಬುವಂತೆ ಬಿಂಬಿಸಿ ನಂಬಿಸಿಬಿಡುತ್ತವೆ. ಎಣಿಕೆಗೆ ಸಿಗದಷ್ಟು ಬಾರಿ ಸಚಿನ್ ಗೆ ಇದರ ಅನುಭವವಾಗಿದೆ. ಈ ಎಲ್ಲ ವೈರುಧ್ಯಗಳನ್ನು ಮೆಟ್ಟಿ ನಿಂತು ಪರಿಪೂರ್ಣ ಆಟವನ್ನು ಅನುಭವಿಸುವುದು ಮನುಷ್ಯ ಮಾತ್ರನಿಗೆ ಅಸಾಧ್ಯ.  
ಜೊತೆ ಆಟಗಾರರೊಂದಿಗೆ ಎಳ್ಳಷ್ಟೂ ಭಿನ್ನಾಭಿಪ್ರಾಯ ಬರಲಿಲ್ಲ ಎಂದರೆ ಅತೀಶಯೋಕ್ತಿ ಎನಿಸುತ್ತದೆ. ಆದರೆ ಆ ಭಿನ್ನಾಭಿಪ್ರಾಯಗಳನ್ನು  ಅತೀಯಾಗಿ ತೋರಿಸಿಕೊಳ್ಳದೇ ತನ್ನ ‘ಆಟ’ವನ್ನಷ್ಟೇ ತೋರಿಸಿದ್ದು ಹಿರಿಮೆ. ಡ್ರೆಸ್ಸಿಂಗ್ ರೂಮ್ ನ್ನು ವರ್ಷಗಟ್ಟಲೇ ‘ಪಾಜಿ’ ಯೊಟ್ಟಿಗೆ ಹಂಚಿಕೊಂಡು ಹಿರಿಯ ಮತ್ತು ಈಗಿನ ಕಿರಿಯ ಆಟಗಾರರು ಅವರ ಬಗ್ಗೆ ಕೊಂಕನ್ನು ಮಾತಾಡಿದ ಸಣ್ಣ ಉದಾಹರಣೆಗಳೂ ಇಲ್ಲ. ಮಾಧ್ಯಮಗಳು ಇಂಥಹ ವಿಷಯಗಳನ್ನು ವಿಶೇಷ ಕಾಳಜಿಯೊಂದಿಗೆ  ಬೆನ್ನತ್ತಿದರೂ ಅವರಿಗೆ ಪ್ರತೀ ಬಾರಿ ನಿರಾಸೆ ಕಾದಿರುತ್ತಿತ್ತು. ಇದು ವ್ಯಕ್ತಿಯ ಸಮನ್ವಯ ಮನೋಸ್ಥಿತಿಯನ್ನು ತೋರಿಸುತ್ತದೆ. 
ಮಾಧ್ಯಮಗಳೊಟ್ಟಿಗೆ ಸಂವಾದಿಸುವಾಗ ಸ್ಥಿತಪ್ರಜ್ನೆಯನ್ನು ಕಾಪಾಡಿಕೊಂಡು ಚುಟುಕಾಗಿ ಉತ್ತರಿಸುವುದು ಸಚಿನ್ ರ ಜಾಣ್ಮೆಗೆ ಸಾಕ್ಷಿ. ಯಾರ ಬಗ್ಗೆಯೂ ಕಂಪ್ಲೆಂಟ್, ಅಸಮಾಧಾನ, ಕಿಂಚಿತ್ ಬೇಸರ ಕಾಣಿಸುತ್ತಿರಲಿಲ್ಲ. ತನ್ನ ಆಟದ ಬಗ್ಗೆ ತನ್ನದೇ ಆದ ವಿಶ್ಲೇಷಣೆ ಇರುತ್ತಿತ್ತೇ ಹೊರತು ಇನ್ನಿತರರ ಅನಿಸಿಕೆಗಳಿಗೆ ಮುಗುಳ್ನಗೆ ಯೊಂದೇ ಅವರ ಪ್ರತಿಕ್ರಿಯೆಯಾಗಿರುತ್ತಿತ್ತು. ಮಾಧ್ಯಮಗಳೊಟ್ಟಿಗೆ ವ್ಯವಹರಿಸಬೇಕಾದ್ದನ್ನು ಕೆಲವು ಸೆಲೆಬ್ರಿಟಿಗಳು ಸಚಿನ್ ರಿಂದ ಕಲಿಯಬೇಕಾದ್ದಿದೆ. 
ವೈಯಕ್ತಿಕವಾಗಿ ಸಚಿನ್ ಅಂತರ್ಮುಖಿ ವ್ಯಕ್ತಿತ್ವವುಳ್ಳವರು. ಖಾಸಗೀ ಬದುಕನ್ನು ತಮ್ಮದೇ ಆದ ರೀತಿಯಲ್ಲಿ ಬದುಕಲು ಇಷ್ಟ ಪಡುವ ವ್ಯಕ್ತಿ. ಸೆಲೆಬ್ರಿಟಿ ಎನಿಸಿದ ಮೇಲೆ ವೈಯಕ್ತಿಕ ಬದುಕು ಮತ್ತು ವೃತ್ತಿಯನ್ನು ಸರಿದೂಗಿಸಿಕೊಂಡು ವೈಯುಕ್ತಿಕ ಬದುಕನ್ನು ಸುಂದರವಾಗಿ ರೂಪಿಸಿಕೊಂಡಿರುವರಲ್ಲಿ ಸಚಿನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದಕ್ಕೆ ಪತ್ನಿ ಅಂಜಲಿಯ ಮಕ್ಕಳ ಕುಟುಂಬ ಪರಿವಾರದವರನ್ನೂ ಅಭಿನಂದಿಸಬೇಕಾಗುತ್ತದೆ.
ಸಾಮಾಜಿಕ ವ್ಯಕ್ತಿಯಾಗಿ ಸಚಿನ್ ಆ ಜವಾಬ್ದಾರಿಯಿಂದ ನುಣಿಚಿಕೊಂಡಿಲ್ಲ. ತನ್ನದೇ ಆದ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಿಗೆ ತನು ಮನ ಧನ ರೂಪಿ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ಇತ್ತೀಚಿಗೆ ಸರ್ಕಾರ ರಾಜ್ಯಸಭೆಗೆ ನಾಮಕರಣ ಮಾಡಿದಾಗಲೂ ವಿವೇಚನೆಯಿಂದ ಕಾಲಿರಿಸಿದ್ದಾರೆ. ಮತ್ತು ಅಲ್ಲಿಯೂ ತಮ್ಮ ಜವಾಬ್ದಾರಿಯನ್ನು ಅರಿತವರಾಗಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಬಹುದಾದ ಸೇವೆಯನ್ನು ಮಾಡುವ ಹೊಣೆ ಹೊತ್ತಿದ್ದಾರೆ ಮತ್ತು ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸರ್ವಶಕ್ತರಾಗಿದ್ದಾರೆ.

ಆಟಕ್ಕೂ ಮೊದಲಿನ ಅಭ್ಯಾಸದ ಬಗ್ಗೆ ಹೇಳದೇ ಇರಲು ಸಾಧ್ಯವಿಲ್ಲ. ತನ್ನ ಅರ್ಧ ಆಯುಷ್ಯವನ್ನೇ ಫಿಲ್ಡ್ ನಲ್ಲಿ ಕಳೆದರೂ ಪಂದ್ಯಕ್ಕೂ ಮುನ್ನ ಸಚಿನ್ ಅಭ್ಯಾಸವನ್ನು ಇತರಿರಿಗಿಂತ ತುಸು ಹೆಚ್ಚೇ ಮಾಡುತ್ತಿದ್ದರು. ಇದು ಆಟದ ಬಗ್ಗೆ ಇವರ ಬದ್ಧತೆಯನ್ನು ತೋರಿಸುತ್ತದೆ. 
ಪದೇ ಪದೇ ಮಾಧ್ಯಮಗಳು ಅಂಕಿಅಂಶಗಳ ಬಗ್ಗೆ ಕೇಳುತ್ತಿದ್ದಾಗ, ಸಹಜ ಆಟವನ್ನಷ್ಟೇ ತಾನು ಅನುಭವಿಸುತ್ತಿರುವುದಾಗಿ ಸಚಿನ್  ಹೇಳುತ್ತಿದ್ದರು. ಎಂದಿಗೂ ಅವರು ಅಂಕಿಅಂಶಗಳ ಬಗ್ಗೆ ವೈಯಕ್ತಿಕವಾಗಿ ಮಾತನಾಡಲಿಲ್ಲ. ಅಂಕಿಅಂಶಗಳು, ರೆಕಾರ್ಡ್ ಗಳು ಸಹಜ ಆಟ ಆಡುವಾಗ ಸಂಭವಿಸುವಂತವುಗಳು ಎಂದಷ್ಟೇ ಎನ್ನುತ್ತಿದ್ದರು. 
ಉಳಿದ ಕ್ಷೇತ್ರದಲ್ಲಿ ಸಾಧನೆ ಮೆರೆಯುತ್ತಿರುವ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಳ್ಳದೇ ವೈಯಕ್ತಿಕ ಬದುಕಿನ ಷೋಕಿಗೆ ಒಳಗಾಗಿ ತಮ್ಮದೇ ಖಾಸಗಿ ಜೀವನಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಖಾಸಗಿ ಜೀವನವನ್ನೂ ಸರಿಯಾಗಿ ನಿರ್ವಹಿಸದೇ ಅಲ್ಲೂ ರಗಳೆಗಳನ್ನು ಅನುಭವಿಸುತ್ತಾ ಸಮಾಜಕ್ಕೆ ಮುಜುಗರವನ್ನುಂಟುಮಾಡುತ್ತಿರುತ್ತಾರೆ. ಇಂಥವರಿಗೆಲ್ಲ ಸಚಿನ್ ತೆಂಡೂಲ್ಕರ್ ಮಾದರಿಯಾಗಬೇಕಿದೆ. 
ಕ್ರಿಕೆಟ್ ಇಂದು ಬಹು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದ್ದು ಈ ಬೆಳವಣಿಗೆಗೂ ಇಂಥ ಸಾಧಕರ ಕೊಡುಗೆ ಅಪಾರ. ಕ್ರಿಕೆಟ್ ನ್ನು ರಂಜನೀಯವಾಗಿ ಮಾಡಿ ಬಹು ದೊಡ್ಡ ಕ್ರಿಕೆಟ್ ಪ್ರೇಮಿ ರಾಷ್ಟ್ರವೆಂದು ಭಾರತ ಕರೆಯಲ್ಪಡುವುದರಲ್ಲಿ ಇವರ ಪಾತ್ರ ಅಪಾರ. ತಮ್ಮನ್ನು ತಾವು ಈ ಉದ್ಯಮದಲ್ಲಿ ಆಟಕ್ಕೇ ಮಾತ್ರ ತೊಡಗಿಸಿಕೊಂಡು ಇನ್ನಿತರ ಕ್ಷೇತ್ರದ ಉದ್ಯಮದಲ್ಲಿ ಸಚಿನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಕುಟುಂಬದ ಸಹಕಾರವಿದೆ. ಅಲ್ಲಿಯೂ ಶಿಸ್ತಿನ ವ್ಯವಹಾರವನ್ನು ನಡೆಸುತ್ತಿದ್ದಾರೆ. 
ಆಗಾಗ್ಗೆ ಸಚಿನ್ ತೆಂಡೂಲ್ಕರ್ ಬಗ್ಗೆ ‘ವೈಯುಕ್ತಿಕ ಹಿತಾಸಕ್ತಿ ಕಾಯುವವ’, ‘ರೆಕಾರ್ಡ್ ಗಾಗಿ ಆಡುವವ’, ಎಂಬ ಟೀಕೆಗಳ ಸುರಿಮಳೆಯೇ ಆಗುತ್ತಿತ್ತು. ಆದರೆ ಇವಕ್ಕೆ ಇವಕ್ಕೆ ಪ್ರತಿಕ್ರಿಯಿಸಿದ್ದು ಯಾವತ್ತೂ ಇಲ್ಲ. ಹೀಗೆ ಸಮಚಿತ್ತವನ್ನು ಮೆರೆದ ಮತ್ತೊಬ್ಬ ಆಟಗಾರನಿಲ್ಲ.
ಸಚಿನ್ ರಿಂದ ಕೇವಲ ಕ್ರಿಕೆಟ್ ಮಾತ್ರವಲ್ಲ,  ಅವರಿಂದ ನಾವು ಸಾಮಾನ್ಯರು, ಸೆಲೆಬ್ರಿಟಿಗಳು  ಕಲಿಯುವ ವಿಷಯಗಳು ಸಾಕಷ್ಟಿವೆ ಎನಿಸುವದಿಲ್ಲವೇ? ಸಚಿನ್ ತೆಂಡೂಲ್ಕರ್ ಕೇವಲ ತನ್ನ ಕ್ರಿಕೆಟ್ ಕೌಶಲ್ಯದಿಂದ ಇಷ್ಟೊಂದು ಜನರ ಆರಾಧ್ಯ ದೈವನಾದನೇ? ಈ ಮೇಲಿನ ಎಲ್ಲ ನಡವಳಿಕೆಗಳು ಅವರನ್ನು ಇನ್ನಷ್ಟು ಗೌರವದಿಂದ ಕಾಣುವಂತೆ ಮಾಡುತ್ತವೆ. 
ಆಫ್ ದಿ ಫಿಲ್ಡ್, ಆಫ್ ದಿ ರೆಕಾರ್ಡ್ ಕೂಡ ‘ತೆಂಡೂಲ್ಕರ್’ ಮತ್ತೆ  ಮತ್ತೇ ‘ಗ್ರೇಟ್’ ಎನಿಸಿಕೊಳ್ಳುತ್ತಾರೆ. 

ಡಾ. ಅಶೋಕ ಪಾಟೀಲ್ ಎಂ.ಡಿ
ಸಹ ಪ್ರಾಧ್ಯಾಪಕರು ,ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಗದಗ



Advertisement

0 comments:

Post a Comment

 
Top