PLEASE LOGIN TO KANNADANET.COM FOR REGULAR NEWS-UPDATES

 ಬಡಜನರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸುವ ಯೋಜನೆಯಾದ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಸೌಲಭ್ಯವನ್ನು ಪಡೆಯಲು ಬಡ ಕುಟುಂಬಗಳು ಮುಂದಾಗಬೇಕು.  ಈ ನಿಟ್ಟಿನಲ್ಲಿ ಯೋಜನೆಯ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಯೋಜನೆಯ ಹೊಣೆ ಹೊಂದಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಸಾರ್ವಜನಿಕರ ಕುಂದು ಕೊರತೆ, ದೂರುಗಳನ್ನು ನಿವಾರಿಸುವ ಜಿಲ್ಲಾ ಮಟ್ಟದ ಸಮಿತಿ ರಚಿಸುವ ಸಂಬಂಧ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಬಿಪಿಎಲ್ ಕುಟುಂಬಗಳು, ಅಸಂಘಟಿತ ವಲಯದ ಕಾರ್ಮಿಕರು, ಕಟ್ಟಡ ಕಾರ್ಮಿಕರು ಈಗಾಗಲೆ ನೊಂದಣಿ ಮಾಡಿಸಿಕೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಈಗಾಗಲೆ ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.  ಪ್ರತಿ ಬಿಪಿಎಲ್ ಕುಟುಂಬವು ವಾರ್ಷಿಕವಾಗಿ ೩೦೦೦೦ ರೂ. ವರೆಗಿನ ವೈದ್ಯಖಿಯ ಸೌಲಭ್ಯವನ್ನು ಉಚಿತವಾಗಿ ಪಡೆಯಲು ಈ ಯೋಜನೆಯಡಿ ಅವಕಾಶವಿದೆ.   ಪ್ರತಿ ಬಿಪಿಎಲ್ ಕುಟುಂಬದ ಇನ್ಸೂರೆನ್ಸ್‌ನ ಪ್ರೀಮಿಯಂ ಮೊತ್ತದ ಪೈಕಿ ಶೇ. ೭೫ ರಷ್ಟು ಕೇಂದ್ರ ಸರ್ಕಾರ ಹಾಗೂ ಉಳಿದ ಶೇ. ೨೫ ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ೪. ೨೫ ಕೋಟಿ ರೂ.ಗಳಷ್ಟು ಪ್ರೀಮಿಯಂ ಮೊತ್ತ ಪಾವತಿಯಾಗಿದೆ.  ಆದರೆ ಜಿಲ್ಲೆಯಲ್ಲಿ ಈವರೆಗೆ ಕೇವಲ ೧೭೨ ಫಲಾನುಭವಿಗಳು ಮಾತ್ರ ಯೋಜನೆಯ ಲಾಭ ಪಡೆದಿದ್ದು, ಕೇವಲ ೧೦ ಲಕ್ಷ ರೂ. ಮೊತ್ತದಷ್ಟು ಮಾತ್ರ ಇನ್ಸೂರೆನ್ಸ್ ಕಂಪನಿಯಿಂದ ಚಿಕಿತ್ಸೆ ಸೌಲಭ್ಯಕ್ಕಾಗಿ ಕ್ಲೇಮ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
     ಇನ್ನಾದರೂ ಯೋಜನೆಯ ಪ್ರಚಾರದ ಹೊಣೆಯನ್ನೂ ಪಡೆದಿರುವ  ಅನುಷ್ಠಾನಗೊಳಿಸುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯವರು, ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು, ಪ್ರತಿ ಗ್ರಾಮಗಳಿಗೂ ಯೋಜನೆಯ ವಿವರವುಳ್ಳ ಕರಪತ್ರಗಳನ್ನು ವಿತರಿಸಲು ಕ್ರಮ ವಹಿಸಬೇಕು, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಂದೆ ಫ್ಲೆಕ್ಸ್ ಫಲಕವನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು.  ಒಂದು ವಾರದ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಿಮಾ ಕಂಪನಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಅಲ್ಲದೆ ಈ ಕುರಿತು ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.
     ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ದಾಖಲಾಗುವ ಕುಂದುಕೊರತೆ ಹಾಗೂ ದೂರು ಅರ್ಜಿಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಯಿತು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಸಮಿತಿಯ ಇತರೆ ಸದಸ್ಯರುಗಳನ್ನಾಗಿ ನೇಮಿಸಲಾಯಿತು.
     ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ, ಯುನೈಟೆಡ್ ಇನ್ಸೂರೆನ್ಸ್ ಕಂಪನಿಯ ಡಿವಿಜನಲ್ ಮ್ಯಾನೇಜರ್ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top