PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಅ. ೦೨  ಮಹಾತ್ಮಾ ಗಾಂಧೀಜಿಯವರು ಅಂದಿನ ದಿನಮಾನಗಳಲ್ಲಿ ನೀಡಿದ ಗ್ರಾಮ ಸ್ವರಾಜ್ಯದ ಕರೆ, ಇಂದಿಗೂ ಪ್ರಸ್ತುತವಾಗಿದ್ದು, ಭಾರತದಂತಹ ಅಭಿವೃದ್ಧಿ ಶೀಲ ದೇಶಗಳು ಸ್ವಾವಲಂಬನೆಯಾಗಲು ಪ್ರೇರಕವಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ ಬಿಸರಳ್ಳಿ ಅವರು ಹೇಳಿದರು.
  ವಾರ್ತಾ ಇಲಾಖೆಯು ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದೊಂದಿಗೆ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳ ಕುರಿತ ವಿಚಾರಸಂಕಿರಣದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
  ಪ್ರತಿಯೊಂದಕ್ಕೂ ವಿದೇಶವನ್ನೇ ಅವಲಂಬಿಸುವ ಕೆಟ್ಟ ಸಂಸ್ಕೃತಿಗೆ ಮಹಾತ್ಮಾ ಗಾಂಧೀಜಿಯವರು ಅಂದಿನ ದಿನಗಳಲ್ಲೇ ವಿರೋಧ ವ್ಯಕ್ತಪಡಿಸಿ, ದೇಶೀಯ ಉತ್ಪನ್ನಗಳನ್ನೇ ಬಳಸಿ, ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ಎಂದು ಕರೆ ನೀಡಿದ್ದರು.  ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ, ಗ್ರಾಮೀಣ ಜನರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮಹಾತ್ಮಾ ಗಾಂಧೀಜಿಯವರು ನಾಂದಿ ಹಾಡಿದ್ದರು.  ಗ್ರಾಮೀಣ ಗುಡಿ ಕೈಗಾರಿಕೆ, ಕರಕುಶಲ ಕಲೆಗಳಿಗೆ ಪ್ರೋತ್ಸಾಹಿಸುವುದರಿಂದ ಮಾತ್ರ ಸ್ವಾವಲಂಬನೆ ಸಾಧ್ಯ ಎಂಬುದು ಗಾಂಧೀಜಿಯವರ ವಾದವಾಗಿತ್ತು.  ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯ ಕನಸು, ಇಂದಿಗೂ ಕನಸಾಗಿಯೇ ಉಳಿದಿದೆ.  ಮಹಾತ್ಮಾ ಗಾಂಧೀಜಿಯವರು ಆಧುನಿಕ ಭಾರತ ಕಂಡ ಅತಿ ಯಶಸ್ವಿ ಹಾಗೂ ಮಹತ್ವಪೂರ್ಣ ಮುಂದಾಳು ಆಗಿದ್ದರು.  ಅವರ ಒಂದು ಕರೆಗೆ ಇಡೀ ದೇಶವೇ ಓಗೊಟ್ಟು, ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿತ್ತು.  ಅವರ ಒಂದು ಕರೆಗೆ ಎಷ್ಟೋ ಜನ ತಮ್ಮ ವಿಲಾಸಿ ಜೀವನವನ್ನು ತ್ಯಜಿಸಿ, ದೇಶದ ಹಿತಕ್ಕಾಗಿ ಚಳುವಳಿಗೆ ಧುಮುಕಿದರು.  ಸತ್ಯಕ್ಕಾಗಿ ಆಗ್ರಹಿಸುತ್ತಿದ್ದ ಅವರು ಅಹಿಂಸಾ ಮಾರ್ಗದಲ್ಲಿಯೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.  ಸತ್ಯ ಮತ್ತು ಅಹಿಂಸೆಯಿಂದ ಪರಮಾತ್ಮನನ್ನು ಕಾಣಲು ಸಾಧ್ಯ ಎಂಬ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅವರು, ತ್ಯಾಗ ಮನೋಭಾವ ಇಲ್ಲದಿದ್ದರೆ ಪ್ರಾಣಿಗಳಿಗೂ ಮನುಷ್ಯನಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.  ಪರರ ಉಪಕಾರಕ್ಕಾಗಿಯೇ ಈ ದೇಹ ಇರುವುದು, ಎಂಬುದು ಗಾಂಧೀಜಿಯವರ ನಂಬಿಕೆಯಾಗಿತ್ತು.  ದೌರ್ಬಲ್ಯ ಹಾಗೂ ದುಶ್ಚಟಗಳಿಗೆ ಯುವ ಪೀಳಿಗೆ ಒಳಗಾಗಬಾರದು ಎಂದು ಮಹಾತ್ಮಾ ಗಾಂಧೀಜಿಯವರು ಕರೆ ಕೊಟ್ಟಿದ್ದರು.  ಅಹಿಂಸಾ ಚಳುವಳಿಯ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧೀಜಿಯವರು,  ಅವರು ಬಾಲ್ಯದಿಂದಲೂ ಸತ್ಯಾರಾಧಕರಾಗಿದ್ದಂತಹವರು, ಛಲ ಹಾಗೂ ಸಂಕಲ್ಪ ಸಿದ್ದಿಗಾಗಿ ಯಾವುದೇ ಬೆದರಿಕೆ, ಅಡ್ಡಿ- ಆತಂಕಗಳಿಗೆ ಎದೆಗುಂದುತ್ತಿರಲಿಲ್ಲ.  ದೇಶಕ್ಕಾಗಿ ಏನಾದರೂ ಮಾಡಬೇಕು ಎಂದರೆ ರಾಜಕೀಯವನ್ನೇ ಮಾಡಬೇಕೆಂದೇನಿಲ್ಲ, ನಿನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು, ಸಮಾಜದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿ, ಸೇವಾ ಮನೋಭಾವ ರೂಢಿಸಿಕೊಳ್ಳಬೇಕೆನ್ನುವುದು ಗಾಂಧೀಜಿಯವರ ಸಿದ್ಧಾಂತವಾಗಿತ್ತು. ಜಾತಿ, ಮತಗಳ ಭೇದಭಾವ, ಅಸ್ಪೃಶ್ಯತೆ ಪದ್ಧತಿಯನ್ನು ಬಲವಾಗಿ ವಿರೋಧಿಸುತ್ತಿದ್ದ ಗಾಂಧೀಜಿಯವರು, ಆ ಕಾರಣದಿಂದಾಗಿಯೇ ಇಡೀ ಜಗತ್ತಿನಲ್ಲಿ ಪೂಜಾರ್ಹ ವ್ಯಕ್ತಿಯಾಗಿ ಇಂದಿಗೂ ಜನಮಾನಸಲ್ಲಿ ಉಳಿದಿದ್ದಾರೆ.  ಮಹಾತ್ಮಾ ಗಾಂಧೀಜಿಯವರು ದೊರಕಿಸಿಕೊಟ್ಟ ಸ್ವಾತಂತ್ರ್ಯ ಭಾರತದಲ್ಲಿ ಇಂದಿನ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಧಕ್ಕೆ ತರುವಂತಿದೆ ಎಂದು ಕಳವಳ ವ್ಯಕ್ತಪಡಿಸಿದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ ಬಿಸರಳ್ಳಿ ಅವರು ಸ್ವಾತಂತ್ರ್ಯ ಹೋರಾಟ ಸಂದರ್ಭದ ತಮ್ಮ ಅನುಭವಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.
  ಮಹಾತ್ಮಾ ಗಾಂಧೀಜಿಯವರ ಜಯಂತಿ ಅಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಭಕ್ತಿ ಪೂರ್ವ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು, ಇಡೀ ಜಗತ್ತಿನಲ್ಲಿ ಅಹಿಂಸಾ ತತ್ವಕ್ಕೆ, ಸತ್ಯಾಗ್ರಹ ಚಳುವಳಿಗೆ ಎಷ್ಟು ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟವರು, ಮಹಾತ್ಮಾ ಗಾಂಧೀಜಿಯವರು,  ರಾಮಾಯಣ, ಮಹಾಭಾರತಗಳಲ್ಲಿ ಕೇಳಿ ಬರುವ ಶ್ರೀರಾಮ, ಶ್ರೀಕೃಷ್ಣ ಮುಂತಾದವರನ್ನು ಯಾರೂ ನೋಡದೇ ಇದ್ದರೂ, ಅವರನ್ನು ಪೂಜೆ ಮಾಡುವಂತಹ ನಮ್ಮ ದೇಶದಲ್ಲಿ, ಅಹಿಂಸಾ ತತ್ವಗಳಿಂದ ಇಡೀ ಜಗತ್ತಿನ ಗಮನ ಸೆಳೆದ ಮಹತ್ಮಾ ಗಾಂಧೀಜಿಯವರನ್ನು ಕಂಡಂತಹ ಜನತೆ, ಅವರಲ್ಲಿನ ಗುಣಗಳಿಗೆ, ಅವರಲ್ಲಿನ ಆದರ್ಶಕ್ಕಾಗಿಯೇ ಇಂದಿಗೂ ಇಡೀ ಜಗತ್ತಿನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.  ಅಂತಹ ಮಹಾನ್ ವ್ಯಕ್ತಿ ಹುಟ್ಟಿದ ದೇಶದಲ್ಲಿ, ನಾವು ಜನಿಸಿ, ಪ್ರಜೆಗಳಾಗಿರುವುದು ನಮ್ಮೆಲ್ಲರ ಪುಣ್ಯವಾಗಿದೆ.  ಅವರ ತತ್ವ, ಸಿದ್ಧಾಂತಗಳ ಪೈಕಿ ಕೆಲವೇ ಸಿದ್ಧಾಂತಗಳನ್ನು ನಮ್ಮ ಜೀವನ ಪದ್ಧತಿಯಲ್ಲಿ ಅಳವಡಿಸಿಕೊಂಡರೆ, ಆದರ್ಶ ವ್ಯಕ್ತಿವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಇದೇ ಸಂದರ್ಭದಲ್ಲಿ ಅಮರವಾಗಲಿ ಭಾರತ ದೇಶ- ಬೆಳೆಯಲಿ ನಮ್ಮಲಿ ಸೋದರ ಭಾವ ಎಂಬ ದೇಶಭಕ್ತಿ ಗೀತೆ ಹಾಡಿದರು.  ಭಾಗ್ಯನಗರದ ಕು. ಅಂಬಿಕಾ ಮತ್ತು ಸಂಗಡಿಗರು ರಘುಪತಿ ರಾಘವ ರಾಜಾರಾಂ ಗೀತ ಗಾಯನ ನಡೆಸಿಕೊಟ್ಟರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ, ಜಿ.ಪಂ. ಉಪಕಾರ್ಯದರ್ಶಿ ಮುಕ್ಕಣ್ಣ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ತರಬೇತಿಗಾಗಿ ದೇಶದ ವಿವಿಧೆಡೆಗಳಿಂದ ಜಿಲ್ಲೆಗೆ ಆಗಮಿಸಿದ್ದ ಪ್ರೊಬೆಷನರಿ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

0 comments:

Post a Comment

 
Top