ಬಳ್ಳಾರಿ ಸೆ. ೨೯: ಸಾಹಿತಿಗೆ ಸಾಮಾಜಿಕ ಜವಾಬ್ಬಾರಿ ಹೆಚ್ಚು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ ಡಾ.ರಂಗರಾಜ ವನದುರ್ಗ ಅವರು ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತಿ ಪ್ರಕಾಶನ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಉಪನ್ಯಾಸಕ ಡಾ.ಶ್ಯಾಮೂರ್ತಿ ಅವರು ರಚಿಸಿದ ನೆಲದ ನಾಲಿಗೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಕವಿ ಶಾಶ್ವತ ಶಾಸಕ, ರಾಜಕಾರಣಿಗಳು ಐದು ವರ್ಷ ಮಾತ್ರ ಶಾಸಕರಾಗಿರುತ್ತಾರೆ. ಅಧಿಕಾರದಲ್ಲಿರುತ್ತಾರೆ ಆದರೆ. ಸಾಹಿತಿ, ಕವಿಗೆ ಸಮಾಜದ ಬೇಕು ಬೇಡಗಳಿಗೆ ಸದಾ ಸ್ಪಂದಿಸುತ್ತಾ ಜನತೆಯೊಂದಿಗೆ ನಿರಂತರ ಒಡನಾಡಿಯಾಗಿರುತ್ತಾರೆ. ಸಾಹಿತ್ಯ ರಚನೆಯ ಮೂಲಕ ಸಂಬಂಧಿಸಿದವರ ಗಮನ ಸೆಳೆಯುತ್ತಾರೆ. ಈ ಹಿನ್ನಲೆಯಲ್ಲಿ ಸಾಹಿತಿಗೆ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಜಗತ್ತಿನಲ್ಲಿ ಅತ್ಯಂತ ಸ್ವಾತಂತ್ರ್ಯ ಇರುವ ವ್ಯಕ್ತಿಗಳೆಂದರೆ ಶಿಕ್ಷಕರು ಮತ್ತು ಕವಿಗಳು ಮಾತ್ರ ಎಂದು ಹೇಳಿದರು.
ಜೀವನದ ಉತ್ತಮ ಗೆಳೆಯರೆಂದರೆ ಪುಸ್ತಕಗಳು. ಜೀವನದಲ್ಲಿ ಗೆಳೆಯ, ಗೆಳತಿಯರು ಬಿಟ್ಟು ಹೋಗುತ್ತಾರೆ. ಆದರೆ ಸದಾ ನಮ್ಮ ಜೊತೆಗೆ ಇರುವ ಪುಸ್ತಕಗಳು ಸಾಂತ್ವನ, ಅರಿವು, ನೆಮ್ಮದಿ, ತಿಳುವಳಿಕೆ ನೀಡುತ್ತವೆ ಎಂದು ತಿಳಿಸಿದರು.
ಡಾ.ಶ್ಯಾಮೂರ್ತಿ ಅವರ ಮತ್ತೊಂದು ಕನ್ನಡ ಆತ್ಮಕಥನ ಸಾಹಿತ್ಯ ಕೃತಿಯನ್ನು ಕಾಲೇಜಿನ ಕನ್ನಡ ವಿಭಾಗದ ಮುಖಸ್ಥರಾದ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಅವರು ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ದೇವಮಾನವರೆಂದು ಎನಿಸಿಕೊಂಡವರೆಲ್ಲರೂ ಸಾಹಿತ್ಯ ಸ್ಪರ್ಶದಿಂದಲೇ ಪ್ರಸಿದ್ಧಿಯನ್ನು ಪಡೆದಂತಹವರು. ಸಾಹಿತ್ಯ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ ಎಂದು ಹೇಳೀದರಲ್ಲದೆ, ಕೃತಿಯಲ್ಲಿ ಸಾಮಾಜಿಕ ಅಸಮಾನತೆ, ಹೇಗೆ ಸೌಹಾರ್ದತೆ ಹೇಗೆ ವ್ಯಕ್ತವಾಗಿದೆ ಎಂಬುದನ್ನು ವಿವರಿಸಲಾಗಿದೆ. ಆತ್ಮಕಥನದಲ್ಲಿ ಒಳ್ಳೊಳ್ಳೆಯ ಅನುಭವಗಳಿವೆ. ಇದೊಂದು ಸಂಶೋಧನಾ ಕೃತಿಯಾಗಿ ನಾಡಿನ ಓದುಗರಿಗೆ ಅತ್ಯುತ್ತಮ ಮಾಹಿತಿಗಳನ್ನು ಒಳಗೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳಸುವುದರ ಜೊತೆಗೆ ಜಿಲ್ಲೆಯಿಂದ ಉತ್ತಮ ಲೇಖಕರು, ಕವಿಗಳು ಹೊರಹೊಮ್ಮಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಪ್ರೊ.ಆರ್.ಮನೋಹರನ್ ಅವರು ಮಾತನಾಡಿದರು.
ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ ಅವರು ಸ್ವಾಗತಿಸಿದರು. ಲೇಖಕ ಡಾ. ಶ್ಯಾಮೂರ್ತಿ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಕೆ.ಎನ್.ರಾಮಾಂಜನೇಯ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ.ಕೆ.ಬಸಪ್ಪ ವಂದಿಸಿದರು. ಕುಮಾರಿ ಪ್ರೇರಣಾ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ, ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್, ಉಪನ್ಯಾಸಕರಾದ ಡಾ. ವಿಶ್ವೇಶ್ವರಪ್ಪ, ಡಾ. ಪ್ರಭಯ್ಯ, ಡಾ. ವಿಜಯಕುಮಾರ್, ಡಾ. ಸಿ ಎಚ್ ಸೋಮನಾಥ್, ಅಣ್ಣಪ್ಪ ಸ್ವಾಮಿ, ಡಾ. ಕಲಾವತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
0 comments:
Post a Comment