PLEASE LOGIN TO KANNADANET.COM FOR REGULAR NEWS-UPDATES


6 ಜಿಲ್ಲೆಗೆ ವಿಶೇಷ ಸ್ಥಾನ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ಕೇಂದ್ರದ ಅಸ್ತು

ಬೆಂಗಳೂರು,ಆ.:ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ 371ನೆ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಯುಪಿಎ ಸರಕಾರ ಸಮ್ಮತಿ ಸೂಚಿಸಿದೆ.

ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಭಾರೀ ಉಡುಗೊರೆ ನೀಡಲು ಯುಪಿಎ ಸರಕಾರ ಮುಂದಾಗಿದೆ.ಈ ಮೂಲಕ ಇಲ್ಲಿನ ಆರು ಜಿಲ್ಲೆಗಳನ್ನೊಳಗೊಂಡ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬಹುಕಾಲದ ಕನಸು ನನಸಾಗುವ ನಿರೀಕ್ಷೆಯಿದೆ.ಮುಂಬರುವ ಸಂಸತ್ ಅಧಿವೇಶನದಲ್ಲಿ ಸಂವಿಧಾನದ 371ನೆ ವಿಧಿಗೆ ತಿದ್ದುಪಡಿ ತರುವ ಕುರಿತಂತೆ ಮಸೂದೆ ಮಂಡಿಸಲು ಸರಕಾರ ನಿರ್ಧರಿಸಿದೆ.

ಈ ಕುರಿತಂತೆ ಇಂದು ದಿಲ್ಲಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಕುರಿತ ಕೇಂದ್ರ ಸಂಪುಟ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಬಹು ದಿನಗಳ ಕನಸನ್ನು ನನಸು ಮಾಡಲು ಮುಂದಾಗಿರುವ ಕೇಂದ್ರದ ಯುಪಿಎ ಸರಕಾರದ ಈ ನಿರ್ಧಾರದಿಂದ ಈ ಭಾಗದ ಬೀದರ್,ಗುಲ್ಬರ್ಗ,ರಾಯಚೂರು,ಕೊಪ್ಪಳ,ಯಾದಗಿರಿ ಮತ್ತು ಬಳ್ಳಾರಿಯಂತಹ ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.

ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಭಾಗಕ್ಕೆ ಕೇಂದ್ರದ ಈ ಕ್ರಮ ವರದಾನವಾಗಿ ಪರಿಣಮಿಸಿದ್ದು,ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಇದು ಸಹಕಾರಿಯಾಗಲಿದೆ.ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ,ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಡೆಸಿದ ಪ್ರಯತ್ನದ ಫಲವಾಗಿ ಹೈದರಾಬಾದ್ ಕರ್ನಾಟಕಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.

ವಿಶೇಷವಾಗಿ ಖರ್ಗೆ ಕೈಗೊಂಡ ಪ್ರಯತ್ನ ಫಲವಾಗಿ ಈ ಭಾಗಕ್ಕೆ ಹೊಸ ಬೆಳಕು ಮೂಡುತ್ತಿದೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಡಾ:ಮನಮೋಹನ್ ಸಿಂಗ್‌ರ ಮನವೊಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಈ ಬೆಳವಣಿಗೆಯನ್ನು ಪ್ರದೇಶ ಕಾಂಗ್ರೆಸ್ ಪಕ್ಷ ಮುಕ್ತ ಕಂಠದಿಂದ ಸ್ವಾಗತಿಸಿದ್ದು, ಇದೊಂದು ಆಶಾದಾಯಕ ಬೆಳವಣಿಗೆ ಎಂದು ಬಣ್ಣಿಸಿದೆ.ಕೆಪಿಸಿಸಿ ಅಧ್ಯಕ್ಷ ಡಾ:ಜಿ. ಪರಮೇಶ್ವರ್ ಈ ಕುರಿತು ಪ್ರತಿಕ್ರಯಿಸಿ,ಕೇಂದ್ರದ ಈ ಕ್ರಮದಿಂದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.ರಾಜ್ಯ ಸರಕಾರ ಕೂಡ ಕೇಂದ್ರದ ಈ ನಿರ್ಧಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದ್ದಾರೆ.

6 ಜಿಲ್ಲೆಗೆ ವಿಶೇಷ ಸ್ಥಾನ

ನವದೆಹಲಿ:ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ತಂದು ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿ ಶುಕ್ರವಾರ ಒಪ್ಪಿಗೆ ನೀಡಿತು.ಇದರೊಂದಿಗೆ ಈ ಭಾಗದ ಆರು ಜಿಲ್ಲೆಗಳ ಜನರ ಎರಡು ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ.

ಬೀದರ್,ಗುಲ್ಬರ್ಗ,ಯಾದಗಿರಿ,ರಾಯಚೂರು,ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಜನರಿಗೆ ತಿದ್ದುಪಡಿ ಮಸೂದೆ ಪ್ರಸ್ತಾವವು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪ್ರತ್ಯೇಕ ಮೀಸಲಾತಿ ಸೌಲಭ್ಯ ಒದಗಿಸಲಿದೆ. 

ಮಸೂದೆ ಜಾರಿಗೆ ಬಂದ ಬಳಿಕ ರಾಜ್ಯ ಸರ್ಕಾರ ಈ ಸಂಬಂಧ ಪ್ರತ್ಯೇಕ ನಿಯಮಾವಳಿ ರೂಪಿಸಬೇಕಾದ ಅಗತ್ಯವಿದೆ.ಅಲ್ಲದೆ,ಮಸೂದೆ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಅವಕಾಶ ಕಲ್ಪಿಸಲಿದೆ.

ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ 371ನೇ ಕಲಮಿಗೆ ತರಲು ಹೊರಟಿರುವ ತಿದ್ದುಪಡಿ ಮಸೂದೆ ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರದ ತೆಲಂಗಾಣಕ್ಕಿಂತ ಉತ್ತಮವಾದ ಅಂಶಗಳನ್ನು ಒಳಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ರಾಜಕೀಯ ವ್ಯವಹಾರ ಸಮಿತಿ ಒಪ್ಪಿಗೆ ಪಡೆದಿರುವ ಸಂವಿಧಾನ ತಿದ್ದುಪಡಿ ಪ್ರಸ್ತಾವ ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆಗಾಗಿ ಹೋಗಲಿದೆ. ಅನಂತರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. 

ಹೋರಾಟಕ್ಕೆ ಸಿಕ್ಕ ಗೆಲುವು
ಇದು ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಸಿಕ್ಕ ಗೆಲುವು. ಹಲವು ವರ್ಷಗಳಿಂದಲೂ ಅನೇಕ ಸಂಘಟನೆಗಳು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿ, 371ನೇ ಕಲಂ ತಿದ್ದುಪಡಿಗೆ ಮುಂದಾಗಿರುವುದು ಜನರಲ್ಲಿ ಹರ್ಷ ಮೂಡಿಸಿದೆ. ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಈ ಭಾಗದ ಜನತೆಗೆ ವಿಶೇಷ ಮೀಸಲಾತಿ ಸಿಗಲಿದೆ`
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ 
ಕೇಂದ್ರದ ಕ್ರಮ ಸ್ವಾಗತಾರ್ಹ
ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಎಲ್ಲ ರಾಜಕೀಯ ಪಕ್ಷಗಳೂ ಸ್ವಾಗತಿಸಬೇಕು. ಆ ಪ್ರದೇಶ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಹೆಚ್ಚು ಶ್ರಮ ವಹಿಸಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅದನ್ನು ಮಾನ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡ ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು`.
- ಡಾ.ಜಿ.ಪರಮೇಶ್ವರ, 
ಕೆಪಿಸಿಸಿ ಅಧ್ಯಕ್ಷ
ಇದು ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಉಭಯ ಸದನಗಳ 2/3ರಷ್ಟು ಬಹುಮತದ ಅಗತ್ಯವಿದೆ.ಆದರೆ, ಹೈದರಾಬಾದ್-ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಎರಡು ದಶಕಗಳಿಂದ ಪಕ್ಷಾತೀತವಾಗಿ ಹೋರಾಟ ನಡೆದಿದ್ದು ಎಲ್ಲ ರಾಜಕೀಯ ಪಕ್ಷಗಳು ಚಳವಳಿಗೆ ಬೆಂಬಲ ವ್ಯಕ್ತಪಡಿಸಿವೆ. 

ಅನೇಕ ಸಲ ಸರ್ವಪಕ್ಷಗಳ ನಿಯೋಗ ದೆಹಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಸೂದೆ ಯಾವುದೇ ವಿರೋಧವೂ ಇಲ್ಲದೆ ಸರ್ವಾನುಮತದಿಂದ ಅಂಗೀಕಾರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಅತಿ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವಾಲಯ ರಾಜಕೀಯ ವ್ಯವಹಾರಗಳ ಸಮಿತಿ ಮುಂದೆ ಮಂಡಿಸಿತು.ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕರ್ನಾಟಕ ಹಲವು ವರ್ಷಗಳಿಂದ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.ಹಿಂದಿನ ಎನ್‌ಡಿಎ ಸರ್ಕಾರ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ತಳ್ಳಿಹಾಕಿತ್ತು.

ಹೈದರಾಬಾದ್ ಕರ್ನಾಟಕ ವಿಮೋಚನೆ

* ಡಿ. ಉಮಾಪತಿ, ಹೊಸದಿಲ್ಲಿ

ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ಹೈದರಾಬಾದ್ ಕರ್ನಾಟಕ ಸೀಮೆಯ ಆರು ಜಿಲ್ಲೆಗಳ ಜನರ ಬಹುದಶಕಗಳ ಕನಸನ್ನು ಈಡೇರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾದೇಶಿಕ ಮೀಸಲು ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಸಂವಿಧಾನದ 371ನೆಯ ಕಲಮಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಶುಕ್ರವಾರ ರಾತ್ರಿ ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಅಸ್ತು ಎಂದಿರುವ ನಿರ್ದಿಷ್ಟ ಪ್ರಸ್ತಾವದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.ಆದರೆ ಆರಂಭದಲ್ಲಿ ಅಭಿವೃದ್ಧಿಗೆ ಮಾತ್ರವೇ ಒತ್ತು ನೀಡುವ ಮಹಾರಾಷ್ಟ್ರದ ವಿದರ್ಭ ಮಾದರಿಯ ಸ್ಥಾನಮಾನವನ್ನು ಹೈದರಾಬಾದ್ ಕರ್ನಾಟಕಕ್ಕೂ ವಿಸ್ತರಿಸಲು ಸಿದ್ಧವೆಂದು ಹೇಳುತ್ತಿದ್ದ ಕೇಂದ್ರ ಸರಕಾರ ಇದೀಗ ಉದ್ಯೋಗ ಮತ್ತು ಶಿಕ್ಷಣದಲ್ಲೂ ವಿಶೇಷ ಸ್ಥಾನಮಾನ ನೀಡುವ ಮನಸ್ಸು ಮಾಡಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ರಾಜ್ಯದ ಅತಿ ಹಿಂದುಳಿದ ಪ್ರದೇಶಗಳೆಂದು ಗುರುತಿಸಲಾದ ಗುಲ್ಬರ್ಗ, ಯಾದಗೀರ್,ಬೀದರ್,ರಾಯಚೂರು,ಕೊಪ್ಪಳ ಹಾಗೂ ಬಳ್ಳಾರಿಯ ಜನರಿಗೆ ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಮತ್ತು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕಲ್ಪಿಸುವುದಲ್ಲದೆ ಈ ಪ್ರದೇಶಗಳ ಮೂಲಸೌಲಭ್ಯಗಳ ಅಭಿವದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣದ ಹಂಚಿಕೆಯ ವ್ಯವಸ್ಥೆ ಮಾಡಲಾಗುವುದು.

ಸಂವಿಧಾನ ತಿದ್ದುಪಡಿಯ ಅಂಶ ಅಡಕವಾಗಿರುವ ಕಾರಣ ಈ ಪ್ರಸ್ತಾವವನ್ನು ಕೇಂದ್ರದ ಸಚಿವ ಸಂಪುಟ ಸಭೆಯ ಮುಂದೆಯೂ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು.ಮಸೂದೆ ತಯಾರಿಸಿ ಸಂಸತ್ತಿನ ಮುಂದೆ ಮಂಡಿಸುವುದು ಆನಂತರದ ಹೆಜ್ಜೆ.ಸಂವಿಧಾನ ತಿದ್ದುಪಡಿಯ ಅಗತ್ಯವಿರುವ ಕಾರಣ ಮೂರನೆಯ ಎರಡರಷ್ಟು ಬಹುಮತದಿಂದ ಈ ಮಸೂದೆ ಅಂಗೀಕಾರವಾಗಬೇಕಿದೆ.ಸಂಸತ್ತಿನ ಒಪ್ಪಿಗೆಯ ನಂತರ ರಾಷ್ಟ್ರಪತಿಯವರ ಅಂಕಿತ ಪಡೆದು ಅಂತಿಮ ಅಧಿಸೂಚನೆ ಹೊರಬೀಳಬೇಕಿದೆ.

ಬಿಜೆಪಿಯಾಗಲೀ,ಎಡಪಕ್ಷಗಳಾಗಲೀ ಈ ಮಸೂದೆಯನ್ನು ವಿರೋಧಿಸುವ ಪರಿಸ್ಥಿತಿಯಲ್ಲಿ ಇಲ್ಲದಿರುವ ಕಾರಣ ಅಂಗೀಕಾರ ಆಗಿಯೇ ತೀರುತ್ತದೆ ಎಂಬ ವಿಶ್ವಾಸವನ್ನು ಉನ್ನತ ಸರಕಾರಿ ಮೂಲಗಳು ವ್ಯಕ್ತಪಡಿಸಿವೆ.

ವಿದರ್ಭ ಮತ್ತು ತೆಲಂಗಾಣ ಮಾದರಿಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡ ಸುಧಾರಿತ ಮಾದರಿಯನ್ನು ಹೈದರಾಬಾದ್ ಕರ್ನಾಟಕಕ್ಕೆ ನೀಡುವ ಪ್ರಯತ್ನದಲ್ಲಿ ಕೇಂದ್ರ ಸರಕಾ ತೊಡಗಿದೆ ಎಂದು ಅಂದಿನ ಗೃಹಸಚಿವ ಪಿ.ಚಿದಂಬರಂ ಅವರು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತತ್ವದ ನಿಯೋಗಕ್ಕೆ ವರ್ಷದ ಹಿಂದೆ ಭರವಸೆ ನೀಡಿದ್ದರು.

ಬಹುದಶಕಗಳ ಈ ಬೇಡಿಕೆಯನ್ನು ಈಡೇರಿಸಿಕೊಡುವಂತೆ ನಡೆದಿದ್ದ ಹೋರಾಟ ಸೋತು ಸುಣ್ಣವಾಗುವ ಹಂತ ತಲುಪಿದ್ದಾಗ ಹೈದರಾಬಾದ್ ಕರ್ನಾಟಕಪ್ರದೇಶದ ಕೇಂದ್ರ ಸಚಿವರು ಈ ಆಶಯಕ್ಕೆ ಮತ್ತೆ ಜೀವ ತುಂಬುವ ಕಳೆದ ಕೆಲ ವರ್ಷಗಳಿಂದ ಪ್ರಯತ್ನ ನಡೆಸಿದ್ದರು.ಕೇಂದ್ರದ ಕರ್ನಾಟಕ ಮೂಲದ ಮಂತ್ರಿಗಳಾದ ಎಸ್.ಎಂ.ಕೃಷ್ಣ,ವೀರಪ್ಪ ಮೊಯ್ಲಿ ಹಾಗೂ ಕೆ.ಎಚ್.ಮುನಿಯಪ್ಪ,ಹಾಗೂ ಹೈದರಾಬಾದ್ ಕರ್ನಾಟಕದವರೇ ಆದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಎನ್.ಧರಮ್‌ಸಿಂಗ್ ಅವರೂ ಕಲೆತು ಸಾಮೂಹಿಕ ಒತ್ತಡ ಹೇರುವ ಕೆಲಸ ಇತ್ತೀಚೆಗೆ ನಡೆದಿತ್ತು.

ವಿಶೇಷ ಸ್ಥಾನಮಾನ ನೀಡಿಕೆ ಕುರಿತು ಸಂವಿಧಾನದ 371ನೆಯ ಕಲಮಿಗೆ ತಿದ್ದುಪಡಿ ತರುವ ಸಚಿವ ಸಂಪುಟ ಟಿಪ್ಪಣಿ ಈಗಾಗಲೆ ಸಂಪುಟ ಸಚಿವರೆಲ್ಲರಿಗೆ ಕಳಿಸಲಾಗಿದೆ.ಮಲ್ಲಿಕಾರ್ಜುನ ಖರ್ಗೆ,ಎಸ್.ಎಂ.ಕೃಷ್ಣ ಹಾಗೂ ತಾವೂ ಸೇರಿದಂತೆ ರಾಜ್ಯದ ಮೂವರೂ ಸಂಪುಟ ದಜೆ9ಯ ಸಚಿವರು ಈ ಟಿಪ್ಪಣಿಗೆ ತಮ್ಮ ಒಪ್ಪಿಗೆಯನ್ನು ಕಳಿಸಿರುವುದಾಗಿಯೂ ಸಚಿವ ಮೊಯ್ಲಿ ಕಳೆದ ಮೇ ತಿಂಗಳಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಗೃಹಸಚಿವರು ರಾಜ್ಯದ ನಾವು ಮೂವರೂ ಸಂಪುಟ ದರ್ಜೆಯ ಸಚಿವರೊಂದಿಗೆ ಈ ಪ್ರಸ್ತಾವ ಕುರಿತು ಸಮಾಲೋಚಿಸಿದ್ದಾರೆ. ನಾವು ಮೂವರೂ ಪ್ರಸ್ತಾವದ ಕರಡು ಸೂತ್ರದ ಸ್ವರೂಪ ಕುರಿತು ಸಲಹೆ ನೀಡಿದ್ದೆವು.ನಮ್ಮ ಸಲಹೆಯ ಪ್ರಕಾರ ರೂಪಿಸಿರುವ ಕರಡು ಸೂತ್ರಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವೆ.ಮುಂದುವರೆದ ಹಂತದಲ್ಲಿರುವ ಈ ತಿದ್ದುಪಡಿ ಪ್ರಸ್ತಾವ ಸದ್ಯದಲ್ಲೇ ಸಚಿವ ಸಂಪುಟ ಸಭೆಯ ಒಪ್ಪಿಗೆಗಾಗಿ ಮಂಡಿಸುವ ಸಾಧ್ಯತೆ ಇದೆ ಎಂದು ಮೊಯ್ಲಿ ವಿವರಿಸಿದ್ದರು.

ಈ ಪ್ರಸ್ತಾವವನ್ನು ಶೀಘ್ರದಲ್ಲೇ ಪರಿಗಣಿಸಲಾಗುವುದು ಎಂದು ಅಂದಿನ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ್ದರು.

ಈಡೇರಿದ ಬೇಡಿಕೆಗಳು
* ಡಾ.ನಂಜುಡಪ್ಪ ಸಮಿತಿ ವರದಿಯನ್ನು ಹಂತ-ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ.
* ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿದೆ.
* ಸಾರಿಗೆ ವ್ಯವಸ್ಥೆ ಸುಧಾರಣೆಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ರಚಿಸಲಾಗಿದೆ.
* ಸಿಇಟಿ ಸೆಲ್‌ನ್ನು ಗುಲ್ಬರ್ಗದಲ್ಲಿ ಆರಂಭಿಸಲಾಗಿದೆ.ಆದರೆ ಇಲ್ಲಿ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಆಗುವ ಲಾಭ
* ಸರಕಾರದ ಎಲ್ಲಾ ಹುದ್ದೆಗಳಿಗೆ ಗುಲ್ಬರ್ಗ ವಿಭಾಗ ಮತ್ತು ಈ ವಿಭಾಗದಡಿ ಬರುವ ಎಲ್ಲಾ ಜಿಲ್ಲೆಗಳಿಗೆ ವಿಶೇಷ ಮೀಸಲು ಸೌಲಭ್ಯ ಸಿಗುತ್ತದೆ.
* ವಿಧಾನಸೌಧದಲ್ಲಿಯೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗಲೂ ಈ ಭಾಗದ ಜಿಲ್ಲೆಗಳಿಗೆ ವಿಶೇಷ ಮೀಸಲು ಲಭ್ಯವಾಗುತ್ತದೆ.
* ಹೈ-ಕ ವಿಭಾಗದ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅದೇ ಜಿಲ್ಲೆಯವರು ಭರ್ತಿಯಾಗಲು ಅವಕಾಶ ಇರುತ್ತದೆ.
* ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಹಂತದ ಶಿಕ್ಷಣಕ್ಕೆ ಈ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲು ನಿರ್ಧಾರವಾಗುತ್ತದೆ.

ಬೇಡಿಕೆಗಳೇನು?
* ವೃತ್ತಿಪರ ಸೇರಿದಂತೆ ಎಲ್ಲಾ ಶಿಕ್ಷಣದಲ್ಲಿ ಮೀಸಲು ಅಗತ್ಯ.
* ಹೈ-ಕರ್ನಾಟಕದ ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಮೀಸಲು.
* ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಂಡಳಿಗಳನ್ನು ವಿಭಾಗ ಮಟ್ಟದಲ್ಲಿ ರಚಿಸಬೇಕು, ವಿಭಾಗ ಮಟ್ಟದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಕೂಡಲು ಅವಕಾಶ ಕಲ್ಪಿಸಬೇಕು.
* ಪ್ರತ್ಯೇಕ ಸಿಇಟಿ ಸೆಲ್ ಆಗಬೇಕು. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಬೇಕು. ನಂಜುಡಪ್ಪ ವರದಿ ಅನುಷ್ಠಾನಗೊಳ್ಳಲಿ.
* ಸಮರ್ಪಕ ಸಾರಿಗೆ ಮತ್ತು ರಸ್ತೆ ವ್ಯವಸ್ಥೆ ಆಗಬೇಕು.

ಸ್ವಾಗತಾರ್ಹ ಕ್ರಮ
ಅತ್ಯಂತ ಹಿಂದುಳಿದ ಈ ಭಾಗದ ಜಿಲ್ಲೆಗಳ ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಅಭಿವೃದ್ಧಿಗೆ ಇದರಿಂದ ಅನುಕೂಲವಾಗಲಿದೆ.ಕೇಂದ್ರದ ಈ ಕ್ರಮವನ್ನು ಎಲ್ಲ ಪಕ್ಷಗಳೂ ಸ್ವಾಗತಿಸಬೇಕು.ಈ ಪ್ರದೇಶದ ಸಮಸ್ಯೆಗಳ ಬಗ್ಗೆ ಕೇಂದ್ರದ ನಾಯಕರಿಗೆ ರಾಜ್ಯದ ನಾಯಕರು ಮಾಡಿಕೊಟ್ಟ ಮನವರಿಕೆಯ ಫಲಶ್ರುತಿ ಇದು.ರಾಜ್ಯ ಸರಕಾರವೂ ಇದಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು.
- ಡಾ.ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ಬದುಕು ಹಸನಾಗಲಿದೆ
ಹೈದರಾಬಾದ್ ಕರ್ನಾಕಟದ ಲಕ್ಷಾಂತರ ಜನರ ಬದುಕು ಹಸನು ಮಾಡುವ ಐತಿಹಾಸಿಕ ನಿರ್ಧಾರ ಇದಾಗಿದೆ.ವಿಶೇಷ ಸ್ಥಾನ,ಮಾನ ಸಿಗುವುದರಿಂದ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ.ಈ ಸಂಬಂಧ ಹೋರಾಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಎಸ್.ಎಂ. ಕೃಷ್ಣ, ವಿದೇಶ ಸಚಿವ

ಭರವಸೆ ಈಡೇರಿಕೆ
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ತಿದ್ದುಪಡಿಗೆ ಅನುಮತಿ ನೀಡುವ ಮೂಲಕ ಕೇಂದ್ರದ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರದ ವೇಳೆ ರಾಜ್ಯದ ಜನರಿಗೆ ನೀಡಿದ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.
ಧರಂ ಸಿಂಗ್, ಕಾಂಗ್ರೆಸ್ ಸಂಸದ 
ಕೃಪೆ: ಗಲ್ಪಕನ್ನಡಿಗ

Advertisement

1 comments:

 
Top