ಸಿನಿಮಾ ಅಯ್ಯೋ "ಪಾಪ". ಡಬ್ಬಾದಿಂದ ಎದ್ದು ಬಂದಿದ್ದೇ "ಪುಣ್ಯ"
೨೦೦೮ ರಲ್ಲಿ ತಯಾರಾದ "೧೮ ನೇ ಕ್ರಾಸ್" ಕನ್ನಡ ಸಿನಿಮಾ, ಪ್ರೇಕ್ಷಕರ ಎದುರು ಬರಲು ನಾಲ್ಕು ವರ್ಷ ತಗೋಬೇಕಾಯ್ತು. ಅದಕ್ಕೆ ಹಲವು ಕಾರಣಗಳಿರಬಹುದು. ೨೦೦೪ ರಲ್ಲಿ ನಡೆದ ನೈಜ ಘಟನೆಯಾಧಾರಿತ ಕಥೆ ಎಂಬ ಹಣೆಪಟ್ಟಿಯೊಂದಿಗೆ ಆ.೩ ಕ್ಕೆ ತೆರೆಕಂಡಿದೆ. ಟೈಟಲ್ ಕೇಳಿದಾಕ್ಷಣ ಖಂಡಿತ ಮಾಸ್ ಫೀಲ್ ಇದೆ. ಆದರೆ ಸಿನಿಮಾದಲ್ಲಿ ಮಾಸ್‌ಗಿಂತ ಲವ್‌ಗೆ ಹೆಚ್ಚು ಅದ್ಯತೆ ನೀಡಿದ್ದು, ಅಲ್ಲಲ್ಲಿ, ಲಾಂಗು, ಮಚ್ಚುಗಳು ಬಳಕೆಯಾಗಿವೆ. ಕೊನೆಯ ಆರ್ಧ ಗಂಟೆ ಹೆಣಗಳ ರಾಶಿ ನೋಡುವ ದೌರ್ಭಾಗ್ಯವನ್ನೂ ನಿರ್ದೇಶಕ ಶಂಕರ ಕಲ್ಪಿಸಿದ್ದಾರೆ. ಆ ರಾಶಿಯಲ್ಲಿ ನಾಯಕನ ಹೆಣವೂ ಒಂದು. ನಾಯಕನ ಅಗಮನದ ನಿರೀಕ್ಷೆಯಲ್ಲಿ ನಾಯಕಿ ಬಸ್ ಸ್ಟ್ಯಾಂಡ್‌ನಲ್ಲಿ ವರ್ಷಗಳನ್ನೇ ಕಳೆದಳು ಎಂಬಲ್ಲಿಗೆ ಚಿತ್ರ ಸಮಾಪ್ತಿ.
ಅದು ಬೆಂಗಳೂರಿನ ಏರಿಯವೊಂದರ ೧೮ ನೇ ಕ್ರಾಸ್. ಅನಾಥ ನಾಯಕನಿಗೆ ಅಲ್ಲಿನ ವೆಲ್ಡಿಂಗ್ ಶಾಪ್‌ನ ಒಬ್ಬ ಸ್ನೇಹಿತ ಆತನಿಗೆ ಊಟ, ಬಟ್ಟೆ ಜೊತೆಗೆ ಕೆಲಸ ಕೊಡುತ್ತಾನೆ. ನಾಯಕಿಯ ಮನೆಯೂ ಅದೇ ಏರಿಯದಲ್ಲಿ. ೧೮ ತುಂಬಿರದ ಆಕೆ ನೋಡಲು, ಮಾತನಾಡಲು ಚಿನಕುರಳಿಯಾದರೂ ತುಂಬಾ ಮುಗ್ಧಳು. ಅರಂಭದ ಹಾಡಿನ ಕೊನೆಗೆ ಆಕಸ್ಮಿಕವಾಗಿ ಜೀವನ್(ದೀಪಕ್) ಮತ್ತು ಪುಣ್ಯ (ರಾಧಿಕಾ ಪಂಡಿತ್) ಢಿಕ್ಕಿ ಹೊಡೆಯುತ್ತಾರೆ. ಅಲ್ಲಿಂದ ಶುರುವಾಗುವ ಅವರ ಲವ್ ಸ್ಟೋರಿ ಮಧ್ಯಂತರವರೆಗೆ ನಡೆಯುತ್ತದೆ.
ವಿರಾಮದ ವೇಳೆ ವೆಲ್ಡಿಂಗ್ ಶಾಪ್‌ನಲ್ಲಿ ಜೀವನ್ ಕಣ್ಣೆದುರೇ ಕೊಲೆ ನಡೆಯುತ್ತದೆ. ತಕ್ಷಣ ಪೊಲೀಸರು ಬಂದು ತಪಾಸಣೆ ಮಾಡುವಾಗ ನಾನು ಕೊಲೆ ಮಾಡಿದವರನ್ನು ನೋಡಿದೆ. ಕೋರ್ಟ್‌ಗೆ ಬಂದು ಸಾಕ್ಷಿ ಹೇಳ್ತಿನಿ ಆಂದಾಗ ಠಾಣೆಗೆ ಕರೆದೊಯ್ಯುವ ಇನ್ಸ್‌ಪೆಕ್ಟರ್ ಆತನನ್ನೇ ಆರೋಪಿಯನ್ನಾಗಿ ಮಾಡಿ ಜೈಲಿಗೆ ದಬ್ಬುತ್ತಾನೆ. ಇಲ್ಲಿಂದ ನಾಯಕ ರೌಡಿಸಂಗೆ ಎಂಟ್ರಿ. ಕೊನೆಗೆ ಪ್ರತಿ ಕ್ಷಣವೂ ಭಯದ ನೆರಳಿನಲ್ಲಿ ಬದುಕುವುದಕ್ಕಿಂತ ದೂರ ಹೋಗಿ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಿ ಹೊಸಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರೂ ಪೋಲೀಸರ ಹಾಗೂ ರೌಡಿ ಗ್ಯಾಂಗ್‌ಗಳ ನೆರಳು ಜೀವನ್‌ನನ್ನು ಬಿಡುವುದಿಲ್ಲ. ಬದುಕಿಗೆ ಅಡ್ಡವಾದವರನ್ನು ಅಡ್ಡಡ್ಡ ಸೀಳಿ ಮುಂಬೈಗೆ ಹೋಗಬೇಕೆನ್ನುವಷ್ಟರಲ್ಲಿ ಪೋಲೀಸರ ಗುಂಡು ಎದೆಹೊಕ್ಕು ಖಲಾಸ್.
ಪ್ರೇಮಿಯನ್ನೇ ನಂಬಿ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮನನ್ನು ಬಿಟ್ಟು ಓಡಿ ಬರುವ ನಾಯಕಿ, ನಾಯಕ ಹೆಣವಾಗಿರುವುದು ಗೊತ್ತಿಲ್ಲ. ಇಂದಿಗೂ ಆಕೆ ಹುಚ್ಚಿಯಂತೆ ನಾಯಕನ ನಿರೀಕ್ಷೆಯಲ್ಲಿದ್ದಾಳೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ. ಕೊನೆಗೆ ೧೮ ನೇ ಕ್ರಾಸ್ ಎನ್ನುವುದು ಕೇವಲ ಒಂದು ರಸ್ತೆಯ ಹೆಸರು ಮಾತ್ರವಲ್ಲ. ೧೮ ನೇ ವಯಸ್ಸನ್ನು ಕ್ರಾಸ್ ಮಾಡುವವರ ಒಂದು ಧಾವಂತ. ಈ ೧೮ರ ಹರೆಯದಲ್ಲಿ ಎಲ್ಲರೂ ಎಚ್ಚರದಿಂದ ಇರಬೇಕು ಎಂಬ ಸಂದೇಶವನ್ನೂ ಕೊನೆಗೆ ಹೇಳಲಾಗಿದೆ.
ಕತೆಯ ಎಳೆ ಚೆನ್ನಾಗಿದೆ. ಅದರೆ ಆದನ್ನು ನಿರೂಪಿಸುವಲ್ಲಿ ಎಡವಿ ಮುಗ್ಗರಿಸಿದಂತಿದೆ ಚಿತ್ರ ಕತೆ. ಎಲ್ಲೂ ಕುತೂಹಲ ಮೂಡಿಸುವುದಿಲ್ಲ. ಈ ಕಡೆ ಲವ್ ಕೂಡಾ ಮನಮುಟ್ಟುವುದಿಲ್ಲ. ಅ ಕಡೆ ಮಾಸ್‌ಪ್ರಿಯರು ಕೂಡ ಮೆಚ್ಚುವಂತಿಲ್ಲ. ಏನೋ ಹೇಳುವ ಉದ್ದೇಶದಿಂದ ಆರಂಭವಾದ ಸಿನಿಮಾ ಮತ್ತೇನನ್ನೋ ಹೇಳಿ ಮುಗಿಸಿದಂತಿದೆ. ಇಡೀ ಚಿತ್ರದಲ್ಲಿ ಹೊಗಳುವಂಥದ್ದು ಏನಾದರೂ ಇದ್ದರೆ ಆದು ಅರ್ಜುನ್ ಅವರ ಸಂಗೀತ ಮಾತ್ರ. ಸುರಿಯೋ ಸುರಿಯೋ ಮಳೆಯೇ, ತಿರುಗಿ ತಿರುಗಿ ಹಾಗೂ ನಾ ಯಾರು, ನಂಗ್ಯಾರು ಹಾಡು ನೆನಪಲ್ಲಿ ಉಳಿಯುವಂತೆ ಸಂಗೀತ ನೀಡಿದ್ದಾರೆ ಅರ್ಜುನ್.
ಈಗಿನ ಸ್ಟಾರ್‌ನಟಿ ರಾಧಿಕಾ ಪಂಡಿತ್ ಅಭಿನಯದ ಮೊದಲ ಕನ್ನಡ ಚಿತ್ರ ೧೮ ನೇ ಕ್ರಾಸ್. ಮೊದಲ ಚಿತ್ರದಲ್ಲೇ ಮನಸೆಳೆಯುವ ಅಭಿನಯ ರಾಧಿಕಾಳದ್ದು. ನಟನೆಯ ವಿಷಯದಲ್ಲಿ ರಾಧಿಕಾಳ ಎದುರು ನಾಯಕ ದೀಪಕ್ ಕೊಂಚ ಮಂದವೇ. ವಿನಯಪ್ರಸಾದ್, ರಾಮಕೃಷ್ಣ, ಬುಲೆಟ್‌ಪ್ರಕಾಶ್, ಕರಿಸುಬ್ಬು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಡಿನ ಚಿತ್ರಿಕರಣ ಜೋಗಿಯ ಫೀಲ್ ನೀಡುತ್ತೆ. ಪಿ.ಎಲ್.ರವಿ ಛಾಯಾಗ್ರಹಣ ಓಕೆ.
ಸಿನಿಮಾ ನೋಡಿ ಹೊರಬಂದವರೆಲ್ಲ ಅಯ್ಯೋ ಪಾಪ ಎಂದದ್ದು ಕಿವಿಗೆ ಬಿತ್ತು. ಆದೂ ಕ್ಲೈಮ್ಯಾಕ್ಸನಲ್ಲಿ ನಾಯಕಿ ಪುಣ್ಯಳ ಸ್ಥಿತಿ ನೋಡಿ ಆಂದದ್ದೋ ಆಥವಾ ೧೮ ನೇ ಕ್ರಾಸ್ ಸಿನಿಮಾ ಕೊನೆಗೂ ಡಬ್ಬಾದಿಂದ ಹೊರಬಂದಿರುವಕ್ಕೆ ಅಂದದ್ದೋ ಎಂಬುದನ್ನು ಪ್ರೇಕ್ಷಕರೇ ಹೇಳಬೇಕು.
-ಚಿತ್ರಪ್ರಿಯ ಸಂಭ್ರಮ್.
0 comments:
Post a Comment