PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ,ಆ.೨೫: ಪ್ರತಿಯೊಬ್ಬ ಮನುಷ್ಯ ಸರಿಸಮಾನವಾಗಿದ್ದು, ಆ ಸೃಷ್ಠಿಕರ್ತನ ಆರಾಧನೆ ಮಾತ್ರ ಮಾಡಬೇಕು, ಆತನ ದೃಷ್ಠಿಯಲ್ಲಿ ಎಲ್ಲರು ಸರಿ ಸಮಾನರು. ಎಲ್ಲರು ಒಂದೇ ತಾಯಿಯ ಮಕ್ಕಳು ಸೃಷ್ಠಿಕರ್ತನ ಆರಾಧನೆ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಇದೇ ಇಸ್ಲಾಂ ಧರ್ಮದ ಸಾರಾಂಶವಾಗಿದ್ದು, ಈ ಧರ್ಮದಲ್ಲಿ ಸಮಾನತೆಗೆ ಹೆಚ್ಚು ಮಹತ್ವ ನೀಡಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಭಿಪ್ರಾಯ ಪಟ್ಟರು.
ನಗರದ ಮುಸ್ಲಿಂ ಶಾದಿಮಹಲ್ ಆವರಣದಲ್ಲಿ ಶನಿವಾರದಂದು ಸಂಜೆ ಹಳೇ ಈದ್ಗಾ (ಸುನ್ನಿ) ಆಡಳಿತ ಮಂಡಳಿ ಏರ್ಪಡಿಸಿದ ಈದ್ ಸೌಹಾರ್ದ ಕೂಟ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಾನವ ಸಮಾಜ ಶ್ರೇಷ್ಠವಾಗಿದೆ. ಎಲ್ಲರು ಭಾವೈಕ್ಯತೆಯಾಗಿ ಜೀವನ ಸಾಗಿಸಬೇಕೆಂದರು. 
ಮುಂದುವರೆದು ಮಾತನಾಡಿದ ಅವರು, ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಮಾಸಾಚರಣೆ ನಂತರದ ಈದ್ ಹಬ್ಬದ ಪೂರ್ವದಲ್ಲಿ ನೀಡುವ ಜಕಾತ್ ಹಣ ಇತ್ಯಾದಿ ಅಗತ್ಯ ವಸ್ತುಗಳು ಬಡವರಿಗೆ ದಾನವಾಗಿ ನೀಡುತ್ತಾರೆ. ಇದು ಬಡವರ ಪಾಲು, ದುಡಿದ ಹಣ ಮಾಡಿದ ಆಸ್ತಿಗಳಲ್ಲಿ ನೂರಕ್ಕೆ ಶೇ. ಎರಡುವರೆಯಂತೆ ದಾನವಾಗಿ ಬಡವರಿಗೆ ಕೊಡಲೇಬೇಕು. ಅದು ಖಡ್ಡಾಯ. ಆ ಪಾಲು ಬಡವರಿಗೆ ಸೇರಿದ್ದು, ಇದು ಕೂಡ ಇಸ್ಲಾಂ ಧರ್ಮ ಕಲಿಸುತ್ತದೆ. ಹೀಗಾಗಿ ಇಸ್ಲಾಂ ಧರ್ಮದಲ್ಲಿ ಜಕಾತ್ ಮತ್ತು ಸಮಾನತೆಗೆ ಹೆಚ್ಚು ಮಹತ್ವ ಇದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
ವಿಶೇಷ ಉಪನ್ಯಾಸವನ್ನು ಮಂಗಳೂರಿನ ಜಮಾಅತೆ ಇಸ್ಲಾಂ ಹಿಂದ್ ಮಖ್ಯಸ್ಥ ಮಹ್ಮದ್ ಇಸ್ಹಾಕ್ ಪುತ್ತೂರು ಅವರು ಮಾತನಾಡುತ್ತ, ಧರ್ಮದ ಮೌಲ್ಯ ಏನು ಎಂಬುವುದು ಅರ್ಥೈಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯದನ್ನು ಪಾಲಿಸುವುದು ಮುಖ್ಯ. ನಿಗೂಢತೆ ಮತ್ತು ತಪ್ಪು ತಿಳುವಳಿಕೆ ದೂರವಾಗಬೇಕು. ಮನುಷ್ಯನು ಆಸೃಷ್ಠಿಕರ್ತನಿಗೆ ಕೃತಜ್ಞತೆ ಸಲ್ಲಿಸುವ ವಿಧಾನ ರಂಜಾನ್ ಮಸಾಚರಣೆ. ಸೃಷ್ಠಿಕರ್ತನ ಆರಾಧನೆ ಮಾಡುವುದರ ಜೊತೆಗೆ ಪ್ರವಾದಿಗಳು ತೋರಿಸುವ ಮಾರ್ಗದಲ್ಲಿ ಜೀವನ ಸಾಗಿಸಬೇಕು. ಸೃಷ್ಠಿಕರ್ತನ ಆದೇಶ ಪಾಲನೆಗಾಗಿ ರಂಜಾನ್ ಆಚರಣೆ ಕೆಡಕುಗಳನ್ನು ತೊಡೆದು ಹಾಕಿ ಸಹನೆ, ಕರುಣೆ, ಅನುಕಂಪಗಳಿಸುವ ಮತ್ತು ಕಲಿಯುವ ಉದ್ದೇಶ ರಂಜಾನ್ ತಿಂಗಳ, ಪುಣ್ಯ ಕರ್ಮಗಳ ವಸಂತ ಕಾಲ, ಪ್ರಭುವಿನ ಆರಾಧನೆ ಮಾಡಿ ಎಲ್ಲ ಮನುಷ್ಯರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದೇವೆ. ಮನುಷ್ಯನಿಗೆ ಇದು ನನ್ನದು ಎಂದು ಹೇಳುವಂತಹದ್ದು ಯಾವುದೇ ಇಲ್ಲ. ಎಲ್ಲ ಆ ಸೃಷ್ಠಿಕರ್ತನಿಗೆ ಸೇರಿದವರಾಗಿದೆ.  ಸಂಕಷ್ಟಗಳ ನಿವಾರಣೆಗಾಗಿ ಪ್ರಾರ್ಥನೆ ಯಾವ ಮನುಷ್ಯನಲ್ಲಿ ದೇವ ಭಕ್ತಿ ಇದೆಯೋ ಅವನೇ ಶ್ರೇಷ್ಠನಾಗುತ್ತಾನೆ. ಇದೇ ಪವಿತ್ರ ಕುರಾನ್‌ನಲ್ಲಿ ಬರುತ್ತದೆ. ಅನಾಥರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಮಾನವೀಯ ಮೌಲ್ಯ ಬೆಳೆಯಬೇಕು, ಮನುಷ್ಯನ ಮನಸ್ಸು ಶುದ್ಧೀಕರಿಸಬೇಕು ಅಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಮಾಅತೆ ಇಸ್ಲಾಂ ಹಿಂದ್ ಮಖ್ಯಸ್ಥ ಮಹ್ಮದ್ ಇಸ್ಹಾಕ್ ಪುತ್ತೂರು ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಸಂಗಣ್ಣ ಕರಡಿ ಮಾತನಾಡಿ, ಮುಸ್ಲಿಂ ಸಮಾಜದ ಋಣ ನನ್ನಮೇಲಿದೆ. ನನ್ನ ರಾಜಕೀಯ ಗುರುಗಳಾಗಿದ್ದ ದಿ|| ಎಸ್.ಎಂ.ಖಾದ್ರಿಯವರನ್ನು ಸ್ಮರಿಸುತ್ತಾ ಅವರ ಆಶೀರ್ವಾದದಿಂದಲೇ ಇಂದು ನಾನು ಈ ಸ್ಥಾನಕ್ಕೆ ತಲುಪಿದ್ದೇನೆ ಎಂದು ಸ್ಮರಿಸಿಕೊಂಡ ಅವರು, ಶಾದಿಮಹಲ್ ಅಭಿವೃದ್ದಿ, ಈದ್ಗಾ ಅಭಿವೃದ್ದಿ ಮತ್ತು ನೂತನ ಈದ್ಗಾಕ್ಕೆ ಭೂಮಿ ಖರೀದಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂಸುಫೀಯಾ ಮಸೀದಿಯ ಪೇಶ ಇಮಾಮ್ ಮುಫ್ತಿ ಮಹ್ದಮ್ ನಜೀರ್ ಅಹ್ಮದ್ ತಸ್ಕೀನಿ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್ ಮಾತನಾಡಿ, ಈದ್ಗಾ ಅಭಿವೃದ್ದಿ ಮತ್ತು ಸಮಾಜದ ಅಭಿವೃದ್ದಿ ಕಾರ್ಯಗಳಿಗಾಗಿ ತಮ್ಮ ಫೌಂಡೇಶನ್ ವತಿಯಿಂದ ೫.೦೦ ಲಕ್ಷ ರೂ.ದೇಣಿಗೆ ನೀಡುವುದಾಗಿ ಹೇಳಿದರು. 

ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿ ಪಾಟೀಲ್, ಗುತ್ತಿಗೆದಾರ ಸುರೇಶ ಭೂಮರೆಡ್ಡಿ, ಜಿ.ಪಂ.ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ, ವಕ್ಫ ಸಮಿತಿ ಅಧ್ಯಕ್ಷ ನೂರ ಅಹ್ದಮ್ ಹಣಜಗೇರಿ, ನಗರಸಭೆ ಸದಸ್ಯರಾದ ಇಂದಿರಾ ಭಾವಿಕಟ್ಟಿ, ಎಂ.ಪಾಷಾ ಕಾಟನ್ ಅಲ್ಲದೇ ಸಲೀಂ ಸಾಬ, ಮಹ್ಮದ್ ಹುಸೇನ್ ಮಂಡಲಗೇರಿ, ಶರಣಪ್ಪ ಸಜ್ಜನ್, ಗವಿಸಿದ್ದಪ್ಪ ಕಂದಾರಿ, ನಜೀರ್ ಆದೋನಿ ಮತ್ತು ಈದ್ಗಾ ಕಮೀಟಿ ಅಧ್ಯಕ್ಷ ಸೈಯ್ಯದ್ ಮಹ್ಮದ್ ಹುಸೇನಿ ಛೋಟು, ಕಾರ್ಯದರ್ಶಿ ಅಬ್ದುಲ್ ಅಜೀಜ್, ರಾಜಾಬಾಗ್ ಸವಾರ ದರ್ಗಾ ಕಮೀಟಿ ಕಾರ್ಯದರ್ಶಿ ಸೈಯ್ಯದ್ ಯೂಸುಫ್ ಅಲಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದು, ಅಪಾರ ಸಂಖ್ಯೆಯಲ್ಲಿ ಹಿಂದು-ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದ ಈ ಸಮಾರಂಭದ ನಿರೂಪಣೆಯನ್ನು ಸೈಯ್ಯದ್ ನಾಸೀರುದ್ದೀನ್ ಹುಸೇನಿ ನೆರವೇರಿಸಿ ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top