PLEASE LOGIN TO KANNADANET.COM FOR REGULAR NEWS-UPDATES


 ಬೆಂಗಳೂರು, ಜು.4: ತನ್ನ ತಲೆದಂಡಕ್ಕೆ ಪಕ್ಷದ ಹೈಕಮಾಂಡ್ ವೇದಿಕೆ ಸಿದ್ಧಪಡಿಸುತ್ತಿರುವುದನ್ನು ಅರಿತಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸುದ್ದಿಗಾರರಿಗೆ ನಿರ್ಗಮನದ ಮುನ್ಸೂಚನೆಯನ್ನು ನೀಡಿದ್ದಾರೆ.ತನ್ನ ಗೃಹ ಕಚೇರಿ ‘ಕೃಷ್ಣಾ’ದಲ್ಲಿಂದು ನಡೆದ ಜನತಾದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಯಾವುದೇ ರೀತಿಯ ನಿರ್ಧಾರ ಕೈಗೊಂಡರೂ ಅದಕ್ಕೆ ತಾನು ಬದ್ಧನಾಗಿರುತ್ತೇನೆ ಎಂದರು.ನಾಯಕತ್ವಕ್ಕೆ ಸಂಬಂಧಿಸಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನ ಕೆಲವರಿಗೆ ಸಿಹಿ ಯಾಗಿರಬಹುದು. ಅದು ತನ್ನ ಪಾಲಿಕೆ ಸಿಹಿ ಯಾಗಿರಲಿ, ಕಹಿಯಾಗಿರಲಿ, ಅದನ್ನು ನಾನು ದಿನನಿತ್ಯದ ಒಂದು ಭಾಗವೆಂದು ಸಕಾರಾತ್ಮಕವಾಗಿ ಪರಿಗಣಿಸುತ್ತೇನೆ ಎಂದು ಹೇಳುವ ಮೂಲಕ ಅವರು ಮಾನಸಿಕವಾಗಿ ಮುಖ್ಯಮಂತ್ರಿ ಕುರ್ಚಿ ಬಿಡಲು ಸಿದ್ಧತೆ ಕೈಗೊಂಡಿರುವುದನ್ನು ಸ್ಪಷ್ಟಪಡಿಸಿದರು.ಪಕ್ಷದ ವರಿಷ್ಠರು ನಿನ್ನೆ ತನ್ನೊಂದಿಗೆ, ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪನವರೊಂದಿಗೆ ರಾಜ್ಯದ ಎಲ್ಲ ವಿಚಾರಗಳ ಕುರಿತು ಮಾಹಿತಿ ಕೇಳಿದ್ದಾರೆ. ಅದನ್ನು ತಾವು ವಿವರಿಸಿದ್ದೇವೆ. ಮುಂದಿನ ತೀರ್ಮಾನವನ್ನು ಮೂರ್ನಾಲ್ಕು ದಿನ ಗಳೊಳಗೆ ವರಿಷ್ಠರು ಪ್ರಕಟಿಸಲಿದ್ದಾರೆ. ಅವರು ಯಾವುದೇ ರೀತಿಯ ನಿರ್ಧಾರ ಪ್ರಕಟಿಸಿದರೂ ಅದಕ್ಕೆ ತಾವು ಬದ್ಧರಾಗಿರುತ್ತೇವೆ ಎಂದು ಸದಾನಂದ ಗೌಡ ಹೇಳಿದರು.
ನಿರ್ಧಾರ ತನ್ನ ಪರವಾಗಿ ಬಂದರೂ, ವಿರುದ್ಧವಾಗಿ ಬಂದರೂ, ಅದನ್ನು ಸಿಹಿ, ಕಹಿ ಎಂದು ಭಾವಿಸುವುದಿಲ್ಲ. ಅದೊಂದು ರೀತಿಯ ದಿನನಿತ್ಯದ ಭಾಗವೆಂದು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದ ಅವರು, ಇದು ಕೆಲವರಿಗೆ ಸಿಹಿಯಾಗಿರಬಹುದು ಎಂದು ಯಡಿಯೂರಪ್ಪ ಬಣದ ನಾಯಕರನ್ನು ಚುಚ್ಚಿದರು.ಕಳೆದ 11 ತಿಂಗಳುಗಳಿಂದ ರಾಜ್ಯದಲ್ಲಿ ಕಳಂಕರಹಿತ ಆಡಳಿತವನ್ನು ನೀಡಿದ್ದೇನೆ. ಒಳ್ಳೆಯ ಆಡಳಿತ ನೀಡಿರುವ ತೃಪ್ತಿ ತನಗಿದೆ ಎಂದು ಡಿವಿ ಹೇಳಿದರು.
ರಾಜ್ಯದ ವಿದ್ಯಮಾನದ ಕುರಿತು ಹಿರಿಯ ನಾಯಕರಾದ ಅರುಣ್ ಜೇಟ್ಲಿ ಹಾಗೂ ಧರ್ಮೇಂದ್ರ ಪ್ರಧಾನ್ ಪ್ರತ್ಯೇಕವಾಗಿ ಮಾಹಿತಿ ಕೇಳಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಜೊತೆಗೆ, ರಾಜೀನಾಮೆ ಪ್ರಹಸನ, ಮುಂದಿನ ನಡೆಯ ಕುರಿತು ಎಲ್ಲ ರೀತಿಯ ಮಾಹಿತಿಯನ್ನು ನೀಡಿದ್ದೇನೆ.
ವಿಧಾನ ಮಂಡಲದ ಅಧಿವೇಶನ ಈ ತಿಂಗಳ 16ರಂದು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ನಾಳೆ ನಡೆಸಬೇಕಿದ್ದ ಸಂಪುಟ ಸಭೆಯನ್ನು ಜು.6ಕ್ಕೆ ಮುಂದೂಡಲಾಗಿದ್ದು, ಸಂಪುಟಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ಬಜೆಟ್‌ಗೆ ಈ ತಿಂಗಳ ಅಂತ್ಯದೊಳಗೆ ಅನುಮೋದನೆ ಪಡೆಯಬೇಕಾಗಿರುವುದರಿಂದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದ ಬದಲು ಬೆಂಗಳೂರಿನಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದವರು ಹೇಳಿದರು

Advertisement

0 comments:

Post a Comment

 
Top