ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ನಾಂದಿ ಹಾಡಿದೆ. ೬ ರಿಂದ ೧೪ ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಸಂಪೂರ್ಣ ಉಚಿತ ಹಾಗೂ ಕಡ್ಡಾಯ ಶಿಕ್ಷಣ, ಖಾಸಗಿ ಶಾಲೆಗಳಲ್ಲಿ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣಾವಕಾಶ, ಭಯ ಮುಕ್ತ, ಹರ್ಷದಾಯಕ, ಸೃಜನಶೀಲ ಶಾಲಾ ವಾತಾವರಣ, ಗ್ರಾಮ ಪಂಚಾಯತ್ ಹಾಗೂ ಸಮುದಾಯಗಳ ಹೆಚ್ಚಿನ ಸಹಭಾಗಿತ್ವ ಹೀಗೆ ಹತ್ತು ಹಲವು ಮಹತ್ವದ ಅಂಶಗಳು ಶಾಲಾ ವ್ಯವಸ್ಥೆಯ ಪ್ರಕ್ರಿಯೆ ಹಾಗೂ ಆಡಳಿತ ಪದ್ದತಿಯನ್ನು ಆಮೂಲಾಗ್ರವಾಗಿ ವಿಕಸನಶೀಲವಾಗಿಸಿದೆ. ಈ ನಮ್ಮ ಶಿಕ್ಷಣ ಪರಂಪರೆಯನ್ನು ಮುಂದುವರೆಸಲು ರಾಜ್ಯದ ಮೂಲೆಮೂಲೆಗಳ ಎಲ್ಲಾ ಸ್ತರದ ಶಕ್ತಿ ಕೇಂದ್ರಗಳು ಹಾಗೂ ಹಿತಾಸಕ್ತರ ಸಹಕಾರ, ಸಹಯೋಗ ಅತ್ಯಗತ್ಯವಾಗಿದೆ.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಅರ್ಥಪೂರ್ಣ, ಸಮರ್ಥ ಹಾಗೂ ಯಶಸ್ವಿ ಅನುಷ್ಠಾನವು ಎಲ್ಲಾ ಸ್ತರದ ವಿವಿಧ ಜನಪ್ರತಿನಿಧಿಗಳ ಬದ್ಧತೆ, ಆಸಕ್ತಿ, ಉತ್ಸಾಹ ಹಾಗೂ ಉಸ್ತುವಾರಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಅವಲಂಬನೆಯು ಪಕ್ಷಾತೀತವಾಗಿದ್ದು, ಪ್ರದೇಶ, ಭಾಷೆಯಂತಹ ಚೌಕಟ್ಟುಗಳಿಂದ ಅತೀತವಾಗಿರುತ್ತದೆ. ಹೀಗಾಗಿ, ನಮ್ಮ ರಾಜ್ಯದಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆಗೆ ಜೀವ ತುಂಬುವಲ್ಲಿ ಶಿಕ್ಷಣ ಇಲಾಖೆಯು ತಮ್ಮೆಲ್ಲರ ಹಸ್ತಲಾಘವವನ್ನು ಬಯಸುತ್ತದೆ ಹಾಗೂ ನಿರೀಕ್ಷಿಸುತ್ತದೆ.
ಶಾಲೆಗಾಗಿ ನಾವು-ನೀವು ಕಾರ್ಯಕ್ರಮದಡಿಯಲ್ಲಿ ಜುಲೈ ೦೫ ರಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರು ಸಹ ಭಾಗಿಯಾಗಲಿದ್ದಾರೆ. ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆಯಡಿಯಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಜನಜಾಗೃತಿ ಹಾಗೂ ಜನಾಂದೋಲನಕ್ಕಾಗಿ ವಿವಿಧೆಡೆ ಜಾಥಾ ಹಾಗೂ ಅಲ್ಲಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಈ ಹಿನ್ನಲೆಯಲ್ಲಿ ಜುಲೈ ೦೫ ಗುರುವಾರ, ೨೦೧೨ ರಂದು ನಾವೆಲ್ಲಾ ಆಯ್ಕೆ ಮಾಡಿಕೊಂಡು ಶಾಲೆಯತ್ತ ಹೆಜ್ಜೆ ಹಾಕೋಣ. ಜನಪ್ರತಿನಿಧಿಗಳು/ಪೋಷಕರು/ಸಮುದಾಯದ ಸಹಭಾಗಿತ್ವ ಹಾಗೂ ಬೆಂಬಲವನ್ನು ಕ್ರೋಢೀಕರಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ದಿಯನ್ನು ಸಾಧಿಸಲು ಕಾರ್ಯೋನ್ಮುಖರಾಗೋಣ.
ಜುಲೈ ೦೫ ರಂದು ಕೊಪ್ಪಳ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಂಸದರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳು ನಿಮ್ಮ ವ್ಯಾಪ್ತಿಯ ಒಂದು ಸರ್ಕಾರಿ ಶಾಲೆಗೆ ತೆರಳಿ ಅಲ್ಲಿರುವ ಮುದ್ದು ಕಂದಮ್ಮಗಳ ಉತ್ತಮ ಗುಣಮಟ್ಟದ ಶಿಕ್ಷಣದ ಹೊಣೆಗಾರಿಕೆ ಹಿರಿಯರಾದ ನಮ್ಮ ನಿಮ್ಮೆಲ್ಲರದು ಎಂಬ ವಿಶ್ವಾಸ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-೨೦೦೯ ರ ಅನುಷ್ಠಾನಕ್ಕೆ ಸುಭದ್ರ ಅಡಿಪಾಯ ಹಾಕಲು ಎಲ್ಲರೂ ಮುಂದಾಗಬೇಕಿದೆ.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಎಸ್.ಡಿ.ಎಂ.ಸಿ. ಸದಸ್ಯರುಗಳಿಗೆ ಮಕ್ಕಳಿಗೆ ಈ ಕಾಯಿದೆಯಿಂದ ದೊರೆತಿರುವ ಹಕ್ಕುಗಳು ಯಾವುವು, ಈ ಹಕ್ಕುಗಳ ರಕ್ಷಣೆಯಲ್ಲಿ ಶಿಕ್ಷಕರ ಆಡಳಿತಗಾರರ, ಎಸ್.ಡಿ.ಎಂ.ಸಿ. ಸದಸ್ಯರ, ಪೋಷಕರ, ಗ್ರಾಮ ಪಂಚಾಯತ ಸದಸ್ಯರ ಹಾಗೂ ಶಾಸಕರ ಜವಾಬ್ದಾರಿ ಏನು ಎನ್ನುವುದನ್ನು ತಿಳಿಸುವಂತಹ ಕಾರ್ಯವಾಗಬೇಕಿದೆ.
ಶಿಕ್ಷಕರು ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಎಸ್.ಡಿ.ಎಂ.ಸಿ. ಸದಸ್ಯರುಗಳು ಅಂದು ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳಿಗೆ, ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಸಂಘ ಸಂಸ್ಥೆಯ ಸದಸ್ಯರುಗಳು ಸೇರಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ತೆರಳಿ ಪಾಲಕರ ಮನವೋಲಿಸಿ ಶಾಲೆಗೆ ಕರೆತರುವುದು. ನಂತರ ಶಾಲೆಯಲ್ಲಿ ಪ್ರಾರ್ಥನೆ ಮಾಡುವುದು. ನಂತರ ಆಹ್ವಾನಿತರು ಶಾಲೆಯಲ್ಲಿ ಗಮನಿಸಿದ ಅಂಶಗಳು ಕುಂದು ಕೊರತೆಗಳು ಕುರಿತು ಆರೋಗ್ಯಕರ ಚರ್ಚೆ. ಕೊರೆತ ತುಂಬಲು ಸ್ಥೂಲ ಪಟ್ಟಿ ಹಾಗೂ ವಾರ್ಷಿಕ ಕಾರ್ಯಕ್ರಮ ಕುರಿತು ಚರ್ಚೆ ನಡೆಯಲಿದೆ.
ಶಾಲೆಗಾಗಿ ನಾವು-ನೀವು ಕಾರ್ಯಕ್ರಮವನ್ನು ನಾವು-ನೀವು ಜೊತೆಯಾಗಿ ಸೇರಿ ಯಶಸ್ವಿಗೊಳಿಸೋಣ. ಜುಲೈ ೫ ಸರ್ಕಾರಿ ಶಾಲೆಗೆ ಹೋಗಲು ಮರೆಯದಿರಿ ನಿಮ್ಮ ಸಾರ್ಥಕ ಭೇಟಿಯನ್ನು ಮರೆಯದಂತೆ ಮಾಡಿ ಎನ್ನುತ್ತಾರೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು.
- ತುಕಾರಾಂ ರಾವ್ ಬಿ.ವಿ.
ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ.
ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ.
0 comments:
Post a Comment